Karnataka Politics ಬಿಜೆಪಿಗೆ ಹೋಗ್ತಾರಾ ಕಾಂಗ್ರೆಸ್ ಪ್ರಭಾವಿ ನಾಯಕ? ಆಹ್ವಾನ ಕೊಟ್ಟ ಮಾಜಿ ಶಾಸಕ

By Suvarna News  |  First Published Feb 5, 2022, 9:49 PM IST

* ಕಾಂಗ್ರೆಸ್ ಹಿರಿಯ ನಾಯಕನಿಗೆ ಬಿಜೆಪಿ ಗಾಳ
* ಬಿಜೆಪಿಗೆ ಹೋಗ್ತಾರಾ ಕರ್ನಾಟಕ ಕಾಂಗ್ರೆಸ್‌ನ ಪ್ರಭಾವಿ ನಾಯಕ?,
* ಬಿಜೆಪಿಗೆ ಅವರು ಸೇರೋದಾದ್ರೆ ನಾನು ಸ್ವಾಗತಿಸುತ್ತೇನೆ ಎಂದ ಮಾಜಿ ಶಾಸಕ


ತುಮಕೂರು, (ಫೆ.05): ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟು ರಾಜಕಾರಣದಿಂದ ನೇಪಥ್ಯಕ್ಕೆ ಸರಿದಿದ್ದ ಕಾಂಗ್ರೆಸ್ ನಾಯಕ ಎಸ್.ಪಿ.ಮುದ್ದಹನುಮೇಗೌಡ (Muddahanumegowda) ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ (Loksabha Election)  ಹಾಲಿ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಆವರಿಗೆ ಟಿಕೆಟ್ ನಿರಾಕರಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು (HD Devegowda) ತುಮಕೂರು ಲೋಕಸಭಾ (Tumakuru Loksabha Election) ಕ್ಷೇತ್ರದಿಂದ ಕಣಕ್ಕಿಳಿಸಲಾಗಿತ್ತು. ಇದೀಗ ಮತ್ತೆ ಮುದ್ದಹನುಮೇಗೌಡ್ರು ರಾಜಕೀಯ ನೆಲೆ ಕಂಡುಕೊಳ್ಳಲು ಮುಂದಾಗಿದ್ದಾರೆ.

Tap to resize

Latest Videos

ಕುಣಿಗಲ್‌ ಶಾಸಕರು ನನಗಾಗಿ ಕ್ಷೇತ್ರ ತ್ಯಾಗ ಮಾಡಲಿ : ಮಾಜಿ ಸಂಸದ

ಹೌದು..ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನಸಭೆ ಕ್ಷೇತ್ರದ ಟಿಕೆಟ್‌ ಪಡೆಯಲು ಮುದ್ದಹನುಮೇಗೌಡ ಫೈಟ್ ಮಾಡುತ್ತಿದ್ದಾರೆ.ಆದ್ರೆ, ಡಿಕೆ ಶಿವಕುಮಾರ್ ಸಂಬಂಧಿ ಹಾಲಿ ಶಾಸಕರಿದ್ದರಿಂದ ಟಿಕೆಟ್ ಸಿಗುವುದು ಅನುಮಾನವಾಗಿದೆ.ಈ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಗಾಳ ಹಾಕುತ್ತಿದೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರು ಮುದ್ದಹನುಮೇಗೌಡ್ರಿಗೆ ಬಿಜೆಪಿ ಬರುವಂತೆ ಆಹ್ವಾನ ಕೊಟ್ಟಿದ್ದಾರೆ.

ತುಮಕೂರಿನಲ್ಲಿ ಇಂದು(ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಗೌಡ, ಕಾಂಗ್ರೆಸ್​ನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡರ ಪರಿಸ್ಥಿತಿ ಡೋಲಾಯಮಾನವಾಗಿದೆ. ಅವರು ಹಿರಿಯ ಮುತ್ಸದ್ದಿ ರಾಜಕಾರಣಿ. ಎರಡು ಬಾರಿ ಶಾಸಕರಾಗಿದ್ದವರು, ಸಂಸದರಾಗಿದ್ದವರು. ಎಲ್ಲರನ್ನೂ ಪ್ರೀತಿ ಮಾಡುವ ಮನುಷ್ಯ. ಬಿಜೆಪಿಗೆ ಅವರು ಸೇರೋದಾದ್ರೆ ನಾನು ಸ್ವಾಗತಿಸುತ್ತೇನೆ. ಅವರಿಗೆ ಜನಾಭಿಪ್ರಾಯ ಹೇಗಿದೆ ಎಂಬ ನಾಡಿಮಿಡಿತ ನನಗೆ ಗೊತ್ತಿದೆ ಎಂದು ಹೇಳಿದರು.

ಮಾಧುಸ್ವಾಮಿ ಉಸ್ತುವಾರಿ ಬದಲಾವಣೆ ವಿಚಾರವಾಗಿ ಮಾತನಾಡಿ, ಇದು ಪಕ್ಷದ ಪಾಲಿಸಿ ವಿಚಾರ. ತವರು ಜಿಲ್ಲೆಯಲ್ಲಿ ಉಸ್ತುವಾರಿ ಕೊಡದಂತೆ ಪಕ್ಷ ಹೊಸ ನಿಯಮ ತಂದಿದೆ. ಹಾಗಾಗಿ ಅವರಿಗೆ ಕೈತಪ್ಪಿದೆ. ಮಾಧುಸ್ವಾಮಿ ವಿರುದ್ದ ಪಕ್ಷದ ಯಾರೂ ಪಿತೂರಿ ಮಾಡಿಲ್ಲ. ಮಾಧುಸ್ವಾಮಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಉಸ್ತುವಾರಿ ಕೊಡಬೇಡಿ ಎಂದು ನಾನು ವಿರೋಧ ಮಾಡಿಲ್ಲ. ಮಾಧುಸ್ವಾಮಿ ಅವರೇ ಉಸ್ತುವಾರಿ ಇರಲಿ ಎಂದು ನಾನೂ ಹೇಳಿದ್ದೇನೆ ಎಂದರು.

ಜೆಡಿಎಸ್ ಶಾಸಕ ಗೌರಿಶಂಕರ್​ ಗೃಹ ಸಚಿವರ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿ,  ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾ ಉಸ್ತುವಾರಿ ಆಗಿರೋದು ಗೌರಿಶಂಕರ್​ಗೆ ಭಯ ಹುಟ್ಟಿಸಿದೆ. ಆರಗ ಜ್ಞಾನೇಂದ್ರ ಹಾರ್ಡ್ ಕೋರ್ ಬಿಜೆಪಿ. ಗೌರಿಶಂಕರ ಹಲವು ತಪ್ಪು ಮಾಡಿದ್ದಾರೆ. ಚುನಾವಣೆ ವೇಳೆ ಕ್ಷೇತ್ರದ ಜನರಿಗೆ ನಕಲಿ ಬಾಂಡ್ ಕೊಟ್ಟು ವಂಚಿಸಿದ್ದಾರೆ. ಸಿಒಡಿಯವರು ಅವರ ವಿರುದ್ದ ಚಾರ್ಜ್ ಹಾಕಿದ್ದಾರೆ. ಚಾರ್ಜ್​ಶೀಟ್ ಆಧಾರದ ಮೇಲೆ ಎಲ್ಲಿ ನನಗೆ ಜೈಲಿಗೆ ಕಳುಹಿಸ್ತಾರೋ ಎಂಬ ಭಯ ಇದೆ ಎಂದು ಟಾಂಗ್ ಕೊಟ್ಟರು.

ನಕಲಿ ವ್ಯಾಕ್ಸಿನ್ ಕೊಟ್ಟ ಆರೋಪವೂ ಗೌರಿಶಂಕರ ಮೇಲೆ ಇದೆ. ಹಾಗಾಗಿ, ಗೃಹ ಸಚಿವರನ್ನು ಕಂಡರೆ ಗೌರಿಶಂಕರ್​ಗೆ ಭಯವಾಗಿದೆ. ಗೌರಿಶಂಕರ್​ ಹಿಟ್ ಆಯಂಡ್ ರನ್ ಕೇಸ್​, ಪೊಲೀಸರು ಇಸ್ಪಿಟ್ ದಂಧೆ ನಡೆಸ್ತಾರೆ ಎಂದು ಆರೋಪ ಮಾಡ್ತಾರೆ. ಹಾಗಾದರೆ ಸಾಕ್ಷ್ಯ ಕೊಟ್ಟು ದೂರು ನೀಡಲಿ ಸವಾಲು ಹಾಕಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Assembly election) ನನಗಾಗಿ ಕುಣಿಗಲ್‌ ಶಾಸಕ ಡಾ. ರಂಗನಾಥ್‌ (Dr Ranganath) ಕ್ಷೇತ್ರ ತ್ಯಾಗ ಮಾಡಲಿ ಎಂದು ಮಾಜಿ ಸಂಸದ ಮುದ್ದ ಹನುಮೇಗೌಡ ಆಗ್ರಹಿಸಿದ್ದಾರೆ. ನಾನು ಲೋಕಸಭೆ ಚುನಾವಣೆ (Loksabha Election) ವೇಳೆ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡರಿಗಾಗಿ (HD Devegowda) ನನ್ನ ಸ್ಥಾನ ತ್ಯಾಗ ಮಾಡಿದ್ದೆ.

 ಈಗ ನನಗಾಗಿ ಶಾಸಕ ಡಾ.ರಂಗನಾಥ್‌ ಸ್ಥಾನ ತ್ಯಾಗ ಮಾಡಲಿ ಎಂದಿದ್ದಾರೆ. 2019ರ ಲೋಕಸಭೆ ಚುನಾವಣೆ (Loksabha Election) ವೇಳೆ ರಾಹುಲ್‌ ಗಾಂಧಿ (Rahul Gandhi) ಹಾಗೂ ಕೆ.ಸಿ.ವೇಣುಗೋಪಾಲ್‌ ನನಗೆ ದೂರವಾಣಿ ಕರೆ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವ ಭರವಸೆ ನೀಡಿದ್ದರು. ಆದರೆ ಮಾಡಲಿಲ್ಲ. ಆದರೂ ನಾನು ಅಸಮಾಧಾನ ವ್ಯಕ್ತಪಡಿಸಿರಲಿಲ್ಲ ಎಂದಿದ್ದಾರೆ.

ನಾನು ರಾಜಕೀಯ ಸನ್ಯಾಸಿಯಾಗಿಲ್ಲ. ನಾನು ನನ್ನ ಸಮಯಕ್ಕಾಗಿ ಕಾಯುತಿದ್ದೇನೆ ಎಂದ ಅವರು ಕುಣಿಗಲ್‌ ವಿಧಾನಸಭಾ ಕ್ಷೇತ್ರದಿಂದ ನಾನು ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಇಲ್ಲಿಂದ ಸ್ಪರ್ಧೆ ಮಾಡಬೇಕೆಂದು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

click me!