
ಬೆಂಗಳೂರು(ಜೂ.22): ಮಾಜಿ ಸಚಿವ ಎಚ್.ವಿಶ್ವನಾಥ್ ಅವರನ್ನು ಸಾಹಿತ್ಯ ಕ್ಷೇತ್ರದ ಕೋಟಾದಡಿ ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲು ಅನರ್ಹತೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಅಡ್ಡಿಯಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶಾಸಕರಾಗಿದ್ದ ಎಚ್.ವಿಶ್ವನಾಥ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅನರ್ಹತೆ ಮಾಡಿ ಮುಂದಿನ ವಿಧಾನಸಭೆಯ ಚುನಾವಣೆಯವರೆಗೂ ಚುನಾವಣೆಗೆ ಸ್ಪರ್ಧಿಸದಂತೆ ಆದೇಶ ಮಾಡಿದ್ದರು. ಆ ಆದೇಶವನ್ನು ಪ್ರಶ್ನಿಸಿ ವಿಶ್ವನಾಥ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಅನರ್ಹತೆ ಆದೇಶವನ್ನು ಎತ್ತಿಹಿಡಿದು, ಉಪ ಚುನಾವಣೆಗೆ ಸ್ಪರ್ಧಿಸಲು ವಿಶ್ವನಾಥ್ ಅವರಿಗೆ ಅವಕಾಶ ಮಾಡಿಕೊಟ್ಟಿತು. ಅಲ್ಲದೆ, ಉಪ ಚುನಾವಣೆಯಲ್ಲಿ ಆಯ್ಕೆಯಾದರೆ ಮಾತ್ರ ಸಾಂವಿಧಾನಿಕ ಸ್ಥಾನಮಾನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಸ್ಪಷ್ಟಪಡಿಸಿತ್ತು.
ಇದೀಗ ವಿಶ್ವನಾಥ್ ಅವರನ್ನು ವಿಧಾನಪರಿಷತ್‌ಗೆ ಸಾಹಿತ್ಯ ಕ್ಷೇತ್ರದ ಕೋಟಾದಡಿ ನಾಮನಿರ್ದೇಶನ ಮಾಡಲಾಗುತ್ತದೆ ಎಂಬ ಮಾತು ಕೇಳಿಬಂದಿದೆ. ಇದನ್ನು ಸ್ವತಃ ವಿಶ್ವನಾಥ್ ಅವರೂ ಹೇಳಿದ್ದಾರೆ. ಆದರೆ, ಅನರ್ಹತೆಗೆ ಗುರಿಯಾಗಿ ಆ ಆದೇಶವನ್ನು ಸುಪ್ರೀಂಕೊರ್ಟ್ ಎತ್ತಿಹಿಡಿದಿರುವಾಗ ವಿಶ್ವನಾಥ್ ಅವರನ್ನು ರಾಜ್ಯಪಾಲರು ವಿಧಾನಪರಿಷತ್‌ಗೆ ನಾಮನಿರ್ದೇಶನ ಮಾಡಲು ಸಾಧ್ಯವಿಲ್ಲ. ಅದಕ್ಕೆ ಸುಪ್ರೀಂಕೊರ್ಟ್ ತೀರ್ಪು ಅಡ್ಡಿಯಿರುತ್ತದೆ. ಒಂದೊಮ್ಮೆ ನಾಮನಿರ್ದೇಶನ ಮಾಡಿದರೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮತ್ತು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಲು ಮುಕ್ತ ಅವಕಾಶವಿರುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.