
ಬೆಂಗಳೂರು (ಏ.23): ಕರ್ನಾಟಕಕ್ಕೆ ಬರ ಪರಿಹಾರ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ನಮ್ಮ ನ್ಯಾಯಯುತ ಹೋರಾಟಕ್ಕೆ ಸಂದ ಜಯ ಹಾಗೂ ಇದು ಕರ್ನಾಟಕವನ್ನು ಕಡೆಗಣಿಸಿದ್ದ ಕೇಂದ್ರಕ್ಕೆ ತೀವ್ರ ಮುಖಭಂಗ ಎಂದು ರಾಜ್ಯ ಸರ್ಕಾರದ ಮುಖ್ಯ ವಕ್ತಾರ ಹಾಗೂ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಒಂದು ರಾಜ್ಯ ಸುಪ್ರೀಂ ಕೋರ್ಟ್ ಮೂಲಕ ಬರ ಪರಿಹಾರ ಪಡೆಯುವ ಪರಿಸ್ಥಿತಿ ನಿರ್ಮಾಣಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ನಿಯಮಗಳಿದ್ದರೂ ಕೇಂದ್ರ ತನ್ನಿಷ್ಟದಂತೆ ನಡೆದುಕೊಂಡಿತ್ತು. ಮೂರು ಬಾರಿ ರಾಜ್ಯದ ಬರ ಪರಿಹಾರಕ್ಕೆ ವರದಿ ನೀಡಿ ಮನವಿ ಮಾಡಲಾಯಿತು. ಕೇಂದ್ರ ಸರ್ಕಾರ ಸ್ಪಂದಿಸದಿದ್ದರಿಂದ ಅನಿವಾರ್ಯವಾಗಿ ಕಾನೂನು ಹೋರಾಟಕ್ಕೆ ಇಳಿಯಬೇಕಾಯಿತು ಎಂದರು.
ರಾಜ್ಯ ಸರ್ಕಾರಗಳ ಜೊತೆ ಏಕೆ ಸಂಘರ್ಷಕ್ಕೆ ಇಳಿಯುತ್ತಿದ್ದೀರಿ ಎಂದು ಸ್ವತಃ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ಸುಪ್ರೀಂ ಕೋರ್ಟ್ ಗೆ ಬಂದಿವೆ. ಇದನ್ನ ಬಗೆಹರಿಸಿಕೊಳ್ಳಬೇಕು ಅಂತ ಕೇಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗದೆ ಇದ್ದಿದ್ದರೆ ಪರಿಹಾರ ಸಿಗ್ತಿತ್ತೋ ಇಲ್ವೋ ಗೊತ್ತಿಲ್ಲ. ಕರ್ನಾಟಕಕ್ಕೆ ಪರಿಹಾರ ಕೊಡುವ ಮನಸ್ಸು ಮೋದಿಯವರಿಗೆ ಇದ್ದಿರಲಿಲ್ಲ. ಕೋರ್ಟ್ ಮುಂದೆ ಮತ್ತೆ ಮುಖಭಂಗ ಆಗಬಾರದು ಎಂಬ ಕಾರಣಕ್ಕೆ ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡ್ತೇವೆ ಅಂತ ಹೇಳಿದ್ದಾರೆ. ಸೋಮವಾರದ ಒಳಗಡೆ ಬರ ಪರಿಹಾರ ಬಿಡುಗಡೆ ಆಗುವ ನೀರಿಕ್ಷೆ ರಾಜ್ಯಕ್ಕಿದೆ ಎಂದರು.
ಮೋದಿ ಮಂಗಳಸೂತ್ರ ಹೇಳಿಕೆ: ಪ್ರಧಾನಿಯಾಗಿ ಇಷ್ಟೊಂದು ಕೀಳುಹೇಳಿಕೆ ನೀಡಬಾರದಿತ್ತು: ಸಿದ್ದರಾಮಯ್ಯ
ಮಹಿಳೆಯರ ಮಂಗಳಸೂತ್ರದ ಬಗ್ಗೆ ಪ್ರಧಾನಿ ಕೀಳು ಹೇಳಿಕೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದೂ ಮಹಿಳೆಯರ ಮಂಗಳ ಸೂತ್ರ ಕಸಿದು ಮುಸ್ಲಿಂ ಮಹಿಳೆಯರಿಗೆ ನೀಡಲಿದೆ ಎಂಬ ಮೋದಿಯವರ ಹೇಳಿಕೆ ಅವರ ಮನಸ್ಥಿತಿಯನ್ನ ತೋರಿಸುತ್ತದೆ. ದೇಶದ ಇತಿಹಾಸದಲ್ಲಿ ಯಾವ ಪ್ರಧಾನಿಯು ಈ ಕೆಳಮಟ್ಟಕ್ಕೆ ಇಳಿದು ಮಾತನಾಡಿರುವುದು ನಾನು ನೋಡಿರಲಿಲ್ಲ ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.