MLC Election: 26ಕ್ಕೆ ಸಿಎಂ ನೇತೃತ್ವದಲ್ಲಿ ನಾಮಪತ್ರ ಸಲ್ಲಿಕೆ: ಹೊರಟ್ಟಿ

By Girish GoudarFirst Published May 21, 2022, 4:09 AM IST
Highlights

*   ಬಿಜೆಪಿ ಸೇರ್ಪಡೆ ಬಳಿಕ ಮೊದಲ ಬಾರಿ ಕಚೇರಿಗೆ ಬಂದ ಹೊರಟ್ಟಿ
*  ಲಿಂಗಾಯತ ಹೋರಾಟ ವೈಯಕ್ತಿಕ
*  ಹಿತೈಷಿಗಳು ಮತ್ತು ಶಿಕ್ಷಕರ ಕೋರಿಕೆಯಂತೆ ಬಿಜೆಪಿ ಸೇರ್ಪಡೆ

ಹುಬ್ಬಳ್ಳಿ(ಮೇ.21): ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಸ್ಪರ್ಧೆಗೆ ಮೇ 23ರಂದು ಕುಟುಂಬಸ್ಥರ ಜತೆ ಹಾಗೂ ಮೇ 26ರಂದು ಪಕ್ಷದ ಹಿರಿಯರು ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು. ಬಿಜೆಪಿಗೆ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ಇಲ್ಲಿನ ದೇಶಪಾಂಡೆ ನಗರದಲ್ಲಿರುವ ಪಕ್ಷದ ಕಚೇರಿಗೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಿತೈಷಿಗಳು ಮತ್ತು ಶಿಕ್ಷಕರ ಕೋರಿಕೆಯಂತೆ ಬಿಜೆಪಿ ಸೇರ್ಪಡೆಯಾಗಿದ್ದೇನೆ. ನಾನು ಯಾವ ಪಕ್ಷದಲ್ಲಿದ್ದರು ಸಹ ಆ ಪಕ್ಷಕ್ಕೆ ನಿಷ್ಠನಾಗಿ ಇರುತ್ತೇನೆ. 42 ವರ್ಷಗಳ ರಾಜಕೀಯದಲ್ಲಿ ಹಲವು ಏಳುಬೀಳು ಕಂಡಿದ್ದೇನೆ. ಮುಂಬರುವ ಪರಿಷತ್‌ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ನನ್ನನ್ನು ಈ ಪಕ್ಷದವರು, ಮತದಾರರು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

MLC Election: ಹೊರಟ್ಟಿ ಹಣಿಯಲು ಜೆಡಿಎಸ್‌ ಫ್ಲ್ಯಾನ್‌..!

ಜೀವನದ ಉದ್ದಕ್ಕೂ ನೈತಿಕ ಅಂಶಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಿದ್ದೇನೆ. ಹೀಗಾಗಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಪಕ್ಷದ ಸಂಘಟನೆ ಹಾಗೂ ಚುನಾವಣೆಗಳಿಗೆ ನನ್ನ ಸಾಮರ್ಥ್ಯ ಮೀರಿ ಕೆಲಸ ಮಾಡುವೆ. ಪ್ರೀತಿ ಮತ್ತು ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆ ಎಂದು ತಿಳಿಸಿದರು.

ರಾಜಕೀಯ ಜೀವನದ ಆರಂಭದಿಂದಲೂ ಶಿಕ್ಷಕರ ಜಲ್ವಂತ ಸಮಸ್ಯೆಗಳಿಗೆ ಧ್ವನಿಯಾಗಿ ಹೋರಾಟ ಮಾಡಿದ್ದೇನೆ. ಆಡಳಿತ ಪಕ್ಷದಲ್ಲಿರುವ ಕಾರಣ ಶಿಕ್ಷಕರ ಸಮಸ್ಯೆ ಪರಿಹರಿಸಲು, ಬೇಡಿಕೆ ಈಡೇರಿಸಲು ಇನ್ನೂ ಅನುಕೂಲವಾಗಲಿದೆ. ಪಕ್ಷ ಸೇಪರ್ಡೆಯಿಂದ ಶಿಕ್ಷಕರಿಗೆ ನ್ಯಾಯ ಒದಗಿಸುವ ನನ್ನ ವೈಯಕ್ತಿಕ ನಿಲುವಿನಲ್ಲಿ ಯಾವುದೇ ಬದಲಾವಣೆ ಆಗದು ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಮಾತನಾಡಿ, ಬಸವರಾಜ ಹೊರಟ್ಟಿಅವರಿಂದಾಗಿ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಆನೆಬಲ ಬಂದಿದೆ. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ಈ ಭಾಗದಲ್ಲಿ ಪಕ್ಷಕ್ಕೆ ನೆಲೆ ಇದೆ. 1980ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆಗ, ಬಿಜೆಪಿಯಿಂದ ಗೆದ್ದಿದ್ದ 18 ಮಂದಿ ಸರ್ಕಾರವನ್ನು ಬೆಂಬಲಿಸಿದ್ದರು. ಹೆಗಡೆ ನಿಧನದ ನಂತರ, ಜನತಾ ಪರಿವಾರದ ಅನೇಕ ಮುಖಂಡರು ಪಕ್ಷಕ್ಕೆ ಬಂದಿದ್ದರು ಎಂದು ತಿಳಿಸಿದರು.

ಇದೀಗ ಅವರ ಶಿಷ್ಯ ಹೊರಟ್ಟಿಅವರು ಪಕ್ಷಕ್ಕೆ ಬಂದಿದ್ದಾರೆ. ಅವರು ಹಿಂದೆ ಬೇರೆ ಪಕ್ಷದಲ್ಲಿದ್ದರೂ, ಈ ಭಾಗದ ಅಭಿವೃದ್ಧಿ ವಿಷಯದಲ್ಲಿ ಅವರು ಸದಾ ನಮ್ಮೊಂದಿಗೆ ಇದ್ದರು. ಶಿಕ್ಷಕರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದವರಾಗಿದ್ದಾರೆ. ಪಕ್ಷವು ಅವರ ಅನುಭವವನ್ನು ಬಳಸಿಕೊಳ್ಳಲಿದೆ ಎಂದರು.

Congress Politics: ಕಾಂಗ್ರೆಸ್‌ಗೆ ಮುಜುಗರ ತಂದ ಹೇಳಿಕೆ: ದೀಪಕ್ ಚಿಂಚೋರೆಗೆ ನೋಟಿಸ್ ಜಾರಿ

ಹೊರಟ್ಟಿಗೆ ಸನ್ಮಾನ

ಬಿಜೆಪಿ ಸೇರ್ಪಡೆ ಬಳಿಕ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿರುವ ಮಹಾನಗರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಅವರನ್ನು ಪಕ್ಷದ ಪದಾಧಿಕಾರಿಗಳು ಸನ್ಮಾನಿಸಿದರು. ವಿಪ ಸದಸ್ಯ ಪ್ರದೀಪ ಶೆಟ್ಟರ್‌, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಮುಖಂಡರಾದ ಅಶೋಕ ಕಾಟವೆ, ಮಹೇಂದ್ರ ಕೌತಾಳ, ರಾಜಣ್ಣ ಕೊರವಿ, ಬಸವರಾಜ ಕುಂದಗೋಳಮಠ, ಸಂತೋಷ ಚವ್ಹಾಣ, ದತ್ತಮೂರ್ತಿ ಕುಲಕರ್ಣಿ ಇದ್ದರು.

ಲಿಂಗಾಯತ ಹೋರಾಟ ವೈಯಕ್ತಿಕ

ಬಿಜೆಪಿಗೆ ಸೇರುವ ಅನಿವಾರ್ಯತೆ ಸೃಷ್ಟಿಸಲಾಗಿತ್ತಾ? ಮತ್ತು ಪ್ರತ್ಯೇಕ ಲಿಂಗಾಯತ ಹೋರಾಟದಲ್ಲಿ ತಮ್ಮ ನಿಲುವು ಏನು? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷ ಸೇರುವಂತೆ ಬಿಜೆಪಿಯಿಂದ ಯಾವುದೇ ಒತ್ತಡ ಇರಲಿಲ್ಲ. ಆದರೆ, ಶಿಕ್ಷಕರು, ಹಿತೈಷಿಗಳು ಬಿಜೆಪಿ ಸೇರ್ಪಡೆಯಾದರೆ, ಮುಕ್ತವಾಗಿ ಚುನಾವಣೆ ಮಾಡಲು ಅನಕೂಲವಾಗುತ್ತದೆ ಎಂದು ಹಲವು ಬಾರಿ ಹೇಳಿಕೊಂಡಿದ್ದರು. ಹೀಗಾಗಿ ಮತದಾರರ ಅಭಿಪ್ರಾಯದಂತೆ ಬಿಜೆಪಿ ಸೇರ್ಪಡೆಯಾಗಿದ್ದೇನೆ. ಇನ್ನು ಪ್ರತ್ಯೇಕ ಲಿಂಗಾಯತ ಹೋರಾಟ ವೈಯಕ್ತಿಕ ವಿಚಾರ. ಪಕ್ಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಮುಂದೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೊರಟ್ಟಿ ಮಾತಿನಿಂದ ಜಾರಿದರು.
 

click me!