
ಬೆಂಗಳೂರು (ಅ.14): ನಗರದ ಹೊರವಲಯದ ಹೆಸರುಘಟ್ಟದಲ್ಲಿರುವ ಸಿನಿಮಾಟೋಗ್ರಫಿ ಹಾಗೂ ಸೌಂಡ್ ರೆಕಾರ್ಡಿಂಗ್ ಮತ್ತು ಎಂಜಿನಿಯರಿಂಗ್ ಪಾಲಿಟೆಕ್ನಿಕ್ ಕಾಲೇಜನ್ನು ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಬಲಿಷ್ಠಗೊಳಿಸಲು ಚಿತ್ರರಂಗದ ಅನುಭವಿ ತಾಂತ್ರಿಕ ತಜ್ಞರ ಸಮಿತಿ ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಇದು ದೇಶದ ಮೊದಲ ಸಿನಿಮಾಟೋಗ್ರಫಿ ಕಾಲೇಜಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಪ್ರವೇಶ ಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಕಾಲೇಜಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದರು. ಈಗ ಇರುವ ಫಿಲಂ ಅಂಡ್ ಟಿವಿ ಇನ್‌ಟ್ಟಿಟ್ಯೂಡ್ ನಲ್ಲಿ ತಾಂತ್ರಿಕ ಸಲಕರಣೆಗಳ ಕೊರತೆ ಇದ್ದು, ಅವುಗಳನ್ನ ಪಟ್ಟಿ ಮಾಡಿ ನೂತನ ತಂತ್ರಜ್ಞಾನದ ಸಲಕರಣೆಗಳನ್ನು ಕಲ್ಪಿಸಿ ಕೊಡುವ ತುರ್ತು ಕ್ರಮದ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ಸದ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಸೌಂಡ್ ಇಂಜಿನಿಯರಿಂಗ್ ಹಾಗೂ ಸಿನಿಮಾಟೋಗ್ರಾಫಿ ಡಿಪ್ಲೋಮೋ ಕೋರ್ಸ್ ಗಳು ಮಾತ್ರ ಇದ್ದು, ಇದಕ್ಕೆ ಪೂರಕವಾದ ಕೋರ್ಸುಗಳನ್ನು ಆರಂಭಿಸುವ ಬಗ್ಗೆಯೂ ಚರ್ಚಿಸಿದರು. ಒಂದೇ ಸೂರಿನಡಿ ಅಭಿನಯ, ವಸ್ತ್ರಾಲಂಕಾರ, ಸಂಕಲನ ಶಬ್ದ ಗ್ರಹಣ ಛಾಯಾಗ್ರಹಣ ಹಾಗೂ ಮೇಕ್ ಅಪ್ ಒಳಗೊಂಡಂತೆ ಆರಂಭಿಸಬಹುದಾದ ಕೋರ್ಸುಗಳ ಜೊತೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಗೇಮಿಂಗ್ ಕೋರ್ಸುಗಳನ್ನು ಆರಂಭಿಸುವ ಮೂಲಕ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡಲು ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದ ಶಿಕ್ಷಣ ಸಂಸ್ಥೆಯಾದ ಇಲ್ಲಿ ಅತ್ಯಂತ ಮಹತ್ವದ ಕ್ಯಾಮರಾಗಳು ಧ್ವನಿ ಗ್ರಹಣ ತಂತ್ರಜ್ಞಾನದ ಸಲಕರಣೆಗಳಿದ್ದು, ಸದ್ಯ ಉಪಯೋಗಕ್ಕೆ ಬರದ ಕಾರಣ ಅವುಗಳ ಸಂಗ್ರಹಾಲಯ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು. ಇನ್‌ಸ್ಟಿಟ್ಯೂಟ್ ಹೊಂದಿರುವ ಎಲ್ಲ ವಸ್ತುಗಳನ್ನು ಸ್ವಚ್ಛಗೊಳಿಸಿ ಪಟ್ಟಿಮಾಡಿ ವರದಿ ಮಂಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಕಂಠೀರವ ಸ್ಟುಡಿಯೋದಲ್ಲಿರುವ ಶೂಟಿಂಗ್ ಫ್ಲೋರ್ ಗಳನ್ನು ವೀಕ್ಷಿಸಿದರು. ಈ ವೇಳೆ ಕಂಠೀರವ ಸ್ಟುಡಿಯೋ ಅಧ್ಯಕ್ಷರಾದ ಮೆಹಬೂಬ್ ಪಾಷಾ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.