
ಮೈಸೂರು (ಅ.14): ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆವರಣದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್, ಆರ್‌ಎಸ್ಎಸ್ ಬಗ್ಗೆ ಮಾತನಾಡದಿದ್ದರೆ ಪ್ರಿಯಾಂಕ್ ಖರ್ಗೆ ಅವರಿಗೆ ತಿಂದ ಕೂಳು ಅರಗುವುದಿಲ್ಲ. ಪ್ರಿಯಾಂಕ್ ಖರ್ಗೆ ಅಪ್ಪನ ವಶೀಲಿಯಿಂದ ಮಂತ್ರಿಯಾಗಿದ್ದಾರೆ. ಇಲ್ಲದಿದ್ದರೆ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಏನೇ ಮಾತನಾಡಿದರೂ ಆರ್‌ಎಸ್‌ಎಸ್‌ನ್ನು ಏನೂ ಮಾಡಲೂ ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಆರ್ ಎಸ್ಎಸ್ ಬ್ಯಾನ್ ಮಾಡುವ ವಿಚಾರ ಮರೆತು ಬಿಡಿ. ನೆಹರು ಕುಟುಂಬದ ಕೈಯಲ್ಲೇ ಆಗಿಲ್ಲ. ಇನ್ನು ನೆಹರು ಮರಿ ಮೊಮ್ಮಗಳ ಹೆಸರು ಇಟ್ಟುಕೊಂಡಿರುವ ನಿಮ್ಮ ಕೈಯಲ್ಲಿ, ಸಿದ್ದರಾಮಯ್ಯನವರ ಕೈಯಲ್ಲಿ ಇದು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಗದಗದಲ್ಲಿ ಮಾತನಾಡಿದ ಶಾಸಕ ಸಿ.ಸಿ.ಪಾಟೀಲ, ಪ್ರಧಾನಿಯಾಗಿದ್ದ ವೇಳೆ ನೆಹರು ಅವರು ಆರ್‌ಎಸ್ಎಸ್ ಬ್ಯಾನ್ ಮಾಡುತ್ತೇವೆ ಅಂತ ಹೇಳಿಕೆ ನೀಡಿದ್ದರು. ನಂತರ 1962ರ ಚೀನಾ ಯುದ್ಧದ ಸಮಯದಲ್ಲಿ ಆರ್‌ಎಸ್ಎಸ್ ಮಾಡಿದ ಕಾರ್ಯವೈಖರಿ ನೋಡಿ ಅವರೇ ಸಂಘಟನೆಯನ್ನು ಹಾಡಿ ಹೊಗಳಿದ್ದರು. ಅಧಿಕಾರ ಇದೆ ಅಂತ ಬಾಯಿಗೆ ಬಂದಂತೆ ಮಾತಾಡಿದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ರವಿಕುಮಾರ್, ಭಾರತ ಮಾತ್ರವಲ್ಲ, ವಿಶ್ವದ ನಂ.1 ದೇಶಭಕ್ತ ಸಂಘಟನೆಯಾಗಿರುವ ಆರೆಸ್ಸೆಸನ್ನು ಹೀಯಾಳಿಸಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಿದ್ದರಾಮಯ್ಯನವರು ತಕ್ಷಣವೇ ಸಚಿವ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ, ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಆರ್‌ಎಸ್‌ಎಸ್ ಸಂಘಟನೆಯ ಸುದ್ದಿಗೆ ಬಂದರೆ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ, ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ಎಸ್ ಚಟುವಟಿಕೆ ನಿರ್ಬಂಧಕ್ಕೆ ಪ್ರಿಯಾಂಕ ಖರ್ಗೆ ಪತ್ರ ಬರೆದಿರುವುದು ಮೂರ್ಖತನದ ಪರಮಾವಧಿ. ಆ ಪತ್ರಕ್ಕೆ ಸಿಎಂ ರಿಪ್ಲೇ ಇನ್ನೂ ಮೂರ್ಖತನ ಎಂದು ಕಿಡಿಕಾರಿದ್ದಾರೆ. ಯಾದಗಿರಿಯಲ್ಲಿ ಮಾತನಾಡಿದ ಮಾಜಿ ಸಚಿವ ರಾಜೂಗೌಡ, ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಬದಲು ಪ್ರಿಯಾಂಕ್ ಖರ್ಗೆಯವರು ರೈತರ ಬೆಳೆಹಾನಿ ಬಗ್ಗೆ ಮಾತನಾಡಲಿ. ಕೇವಲ ಪ್ರಚಾರಕ್ಕಾಗಿ ಖರ್ಗೆಯವರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದೇ ವೇಳೆ, ತುಮಕೂರಿನಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಶಾಸಕ ಬಿ.ಸುರೇಶ ಗೌಡ, ಆರ್‌ಎಸ್‌ಎಸ್ ನಿಷೇಧ ಮಾಡುವ ಪ್ರಸ್ತಾಪ ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತಾಗಿದೆ ಎಂದು ಕಿಡಿ ಕಾರಿದರು.
ಆರ್‌ಎಸ್‌ಎಸ್‌ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದು 100 ವರ್ಷಗಳನ್ನು ಪೂರೈಸಿದೆ. ದಿಲ್ಲಿಯಿಂದ ಹಳ್ಳಿಯವರೆಗೆ ಕೋಟ್ಯಂತರ ಯುವಕರು, ಆರ್‌ಎಸ್‌ಎಸ್ ಮೂಲಕ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದು ಒಂದು ವಿಶ್ವರೂಪಿ ದರ್ಶನ ನೀಡುತ್ತದೆ. 1932ರ ಭಾರತ-ಚೀನಾ ಯುದ್ಧದಲ್ಲಿ ಹೋರಾಡಿದ ಸೈನಿಕರಿಗೆ ನೆರವಾಗುವುದರಿಂದ ಹಿಡಿದು, ನೈಸರ್ಗಿಕ ವಿಕೋಪಗಳು, ಅವಘಡಗಳು ಉಂಟಾದಾಗ ಸಂಘವೇ ಸೇವೆ ನೀಡುತ್ತದೆ. ಈ ಸೇವೆ ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ರಕ್ತಗತವಾಗಿದೆ. ಸುಪ್ರೀಂಕೋರ್ಟ್ ಕೂಡ ತನ್ನ ಹಲವು ತೀರ್ಪುಗಳಲ್ಲಿ ಆರ್‌ಎಸ್‌ಎಸ್ ಸಕ್ರೀಯವಾಗಿರುವುದರಿಂದಲೇ ಹಿಂದೂ ಸಂಸ್ಕೃತಿ ರಕ್ಷಣೆಯಾಗುತ್ತಿದೆ ಎಂದಿದೆ ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.