ಜೆಡಿಎಸ್ ಸಂಘಟನೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಮದ್ದೂರು (ಜೂ.28): ಜೆಡಿಎಸ್ ಸಂಘಟನೆ ಮಾಡುವ ಜವಾಬ್ದಾರಿ ನನ್ನ ಹೆಗಲಿಗೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಮಂಡ್ಯದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಪಟ್ಟಣದ ಪ್ರವಾಸಿ ಮಂದಿರ ವೃತ್ತ ಹಾಗೂ ಗೊರವನಹಳ್ಳಿ ಬಳಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ತಂದೆ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾದ ನಂತರ ದೇಶಾದ್ಯಂತ ಕೆಲಸ ಮಾಡಬೇಕಾದ ಜವಾಬ್ದಾರಿ ಹೆಚ್ಚಾಗಿದೆ.
ಹೀಗಾಗಿ ಪಕ್ಕ ಸಂಘಟಿಸಲು ಅವರಿಗೆ ಸಮಯಾವಕಾಶ ಸಿಗುವುದು ಕಷ್ಟವಾಗಿದೆ ಎಂದರು. ಈಗ ಜೆಡಿಎಸ್ ಪಕ್ಷದ ಸಂಘಟನೆ ನನ್ನ ಹೆಗಲಿಗೆ ಬಂದಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿಶೇಷವಾಗಿ ಮಂಡ್ಯ, ಹಾಸನ ಸೇರಿದಂತೆ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೇನೆ. ಈ ಸಂಬಂಧ ನಾನು ಈಗಾಗಲೇ ಪಟ್ಟಿ ಸಿದ್ಧಪಡಿಸಿಕೊಂಡಿದ್ದೇನೆ ಎಂದರು.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಅಳಿವು ಉಳಿವಿನ ಬಗ್ಗೆ ಕಾಂಗ್ರೆಸ್ ನಾಯಕರು ಲಘುವಾಗಿ ಮಾತನಾಡಿದ್ದರು. ಜಿಲ್ಲೆಯ ಜನರು ಹಾಗೂ ಮದ್ದೂರು ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ಕುಮಾರಸ್ವಾಮಿ ಅವರಿಗೆ ಅತಿ ಹೆಚ್ಚು ಮತ ನೀಡಿ ಬೆಂಬಲಿಸುವ ಮೂಲಕ ಕಾಂಗ್ರೆಸ್ ನಾಯಕರ ಟೀಕೆ ಟಿಪ್ಪಣಿಗಳಿಗೆ ತಕ್ಕ ಉತ್ತರ ನೀಡುವುದರೊಂದಿಗೆ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ನೀಡಿದ್ದಾರೆ. ಇದಕ್ಕೆ ದೇವೇಗೌಡರ ಇಡೀ ಕುಟುಂಬ ಚಿರಋಣಿಯಾಗಿದೆ ಎಂದರು.
ಚಿನ್ನ ಕುದಿವ ಕುಲುಮೆಯಲ್ಲಿದೆ, ಅಪರಂಜಿ ಆಗಿ ಬರಲು ಸಮಯ ಬೇಕು: ದರ್ಶನ್ ಬಗ್ಗೆ ಗಾಯಕಿ ಶಮಿತಾ ಮಲ್ನಾಡ್ ಪೋಸ್ಟ್!
ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಮುಖಂಡರು ಮತ್ತು ಕಾರ್ಯಕರ್ತರು ಯಾವುದೇ ಗೊಂದಲ ಮತ್ತು ಟೀಕೆಗಳಿಗೆ ಅವಕಾಶ ನೀಡದೆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು. ಈ ವೇಳೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮುಖಂಡ ಉಪ್ಪಿನಕೆರೆ ರವಿಗೌಡ, ಸುಧೀರ್ ಮತ್ತಿತರರು ಇದ್ದರು.