
ಬಾಗಲಕೋಟೆ (ಜೂ.28): ಒಬ್ಬ ಸಿಎಂ ಇದ್ದಾಗ ಇನ್ನೊಬ್ಬರು ಆಗ್ಬೇಕು ಅನ್ನೋದು ಸರಿಯಲ್ಲ, ಅದು ಆಗಲೂಬಾರದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ದೇಶದಲ್ಲೇ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಆಗಿದ್ದಾರೆ. ಅವರು ಸಿಎಂ ಆಗಿದ್ದಾಗ ಇನ್ನೊಬ್ಬರು ಸಿಎಂ ಬಗ್ಗೆ ಚರ್ಚೆ ಮಾಡೋದು ಅಪ್ರಸ್ತುತ, ಅನಾವಶ್ಯಕ, ಅನಗತ್ಯ ಎಂದ ಸಚಿವರು, ಹೈಕಮಾಂಡ್ ಚರ್ಚಿಸಿ ಸಿಎಂ ಮಾಡುತ್ತದೆ. ಇದೆಲ್ಲಾ ಆಂತರಿಕ ವಿಚಾರ, ಬಹಿರಂಗ ಚರ್ಚೆ ಅನಗತ್ಯ. ವಿನಾಕಾರಣ ಚರ್ಚೆ ಆಗುತ್ತಿದೆ, ಆಗಬಾರದು. ಈ ಚರ್ಚೆಯಿಂದ ಯಾರಿಗೂ ಒಳ್ಳೆಯದಲ್ಲ. ನಮಗೂ, ಜನರಿಗೂ, ರಾಜ್ಯಕ್ಕೂ ಒಳ್ಳೆಯದಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಸಿಎಂ ಬದಲಾವಣೆ ಪಕ್ಷದ ಆಂತರಿಕ ವಿಚಾರ: ಡಿಕೆಶಿಗೆ ಸಿಎಂ ಸ್ಥಾನ ಕೊಡುವಂತೆ ಚಂದ್ರಶೇಖರ್ ಸ್ವಾಮೀಜಿ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಅನೇಕ ಸ್ವಾಮೀಜಿಗಳು ಅನೇಕ ಹೇಳಿಕೆ ಕೊಟ್ಟಿದ್ದಾರೆ. ಅದು ಅವರ ಅಭಿಪ್ರಾಯ ಅಷ್ಟೇ. ಅವರು ಅವರ ಅಭಿಪ್ರಾಯ ಹೇಳಿಕೊಳ್ಳಬಹುದು. ಸಿಎಂ ಬದಲಾವಣೆ ನಮ್ಮ ಪಕ್ಷದ ವಿಚಾರವಾಗುತ್ತದೆ. ನಮ್ಮ ಪಕ್ಷ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಒಬ್ಬರು ಸಿಎಂ ಇದ್ದಾಗ ಇನ್ನೊಬ್ಬ ಸಿಎಂ ಬಗ್ಗೆ ಮಾತಾಡೋದು ಸರೀನೇ ಅಲ್ಲ. ಅದರಲ್ಲೂ ಸಿದ್ದರಾಮಯ್ಯ ದಕ್ಷ ಸಿಎಂ, ಒಳ್ಳೆಯ ಆಡಳಿತಗಾರ, ಅನುಭವಿ, ಜನಪ್ರಿಯ ಸಿಎಂ ಇನ್ನೇನ ಬೇಕು. ಸಿಎಂ, ಡಿಸಿಎಂ ಬೇಡಿಕೆ ಪಕ್ಷದ ಆಂತರಿಕ ಚೌಕಟ್ಟಿನಲ್ಲಿ ಆಗಬೇಕು ಎಂದರು.
ಸ್ವಾಮೀಜಿ ಹೇಳಿದ ತಕ್ಷಣ ಸಿಎಂ ಬದಲಾವಣೆ ಅಸಾಧ್ಯ: ಶಾಸಕ ಶಾಮನೂರು ಶಿವಶಂಕರಪ್ಪ
ಮೊದಲು ಕೇಂದ್ರ ಸರ್ಕಾರ ಉಳಿಸಿಕೊಳ್ಳಲಿ: ಕೈ ನಾಯಕರ ಆಂತರಿಕ ಕಚ್ಚಾಟ ಸರ್ಕಾರ ಪತನಕ್ಕೆ ಕಾರಣ ಆಗುತ್ತೆ ಎಂಬ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅಶೋಕ್ ವಿರೋಧ ಪಕ್ಷದ ನಾಯಕರು, ಅವರಿಗೆ ನೀವು ಮೈಕ್ ಕೊಟ್ಟಾಗ ಏನು ಹೇಳ್ಬೇಕು ಅದನ್ನು ಹೇಳ್ತಾರೆ. ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರ ಉಳಿಸಿಕೊಳ್ಳಲಿ, ಈಗಾಗಲೇ ಜನತೆ ಬಿಜೆಪಿಗೆ ಬಹುಮತ ಸಿಗದಂತೆ ಮಾಡಿ ಸಂದೇಶ ಕೊಟ್ಟಿದ್ದಾರೆ. ಅದನ್ನು ಅರ್ಥ ಮಾಡಿಕೊಂಡು, ಜವಾಬ್ದಾರಿಯುವತವಾಗಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕಪಂಡು ಹೋದರೆ ದೇಶಕ್ಕೆ ಒಳ್ಳೆಯದು. ಇಲ್ಲದೇ ಹೊದರೆ ಮುಂದೆ ಅವರ ಕರ್ಮ ಅವರು ಅನುಭವಿಸಬೇಕಾಗುತ್ತೆ ಎಂದು ಸಚಿವ ಗುಂಡೂರಾವ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.