ಸಂವಿಧಾನ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ, 18 ಬಿಜೆಪಿ ಶಾಸಕರು ಆರು ತಿಂಗಳು ಕಾಲ ಸದನದಿಂದ ಅಮಾನತು ಖಂಡಿಸಿ ಮಂಗಳವಾರವೂ ಕೂಡ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು (ಮಾ.26): ಸಂವಿಧಾನ ಬದಲಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರೆ ಎನ್ನಲಾದ ಹೇಳಿಕೆ, ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ, 18 ಬಿಜೆಪಿ ಶಾಸಕರು ಆರು ತಿಂಗಳು ಕಾಲ ಸದನದಿಂದ ಅಮಾನತು ಖಂಡಿಸಿ ಮಂಗಳವಾರವೂ ಕೂಡ ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯ, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ, ಕೊಪ್ಪಳ, ಹಾವೇರಿ ಹಾಗೂ ಕಲಬುರಗಿ ಸೇರಿ ಹಲವು ಜಿಲ್ಲಾ ಹಾಗೂ ತಾಲೂಕು ಕೇಂದ್ರದಲ್ಲಿ ಪ್ರತಿಭಟನೆಗಳು ನಡೆದವು. ಈ ವೇಳೆ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ರಸ್ತೆ ತಡೆ ನಡೆಸುವ ಯತ್ನಗಳೂ ನಡೆದವು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನ ಅವರಣದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಾವಿರಾರು ಡಿಕೆಶಿ ಬಂದರೂ ಸಂವಿಧಾನ ತಿದ್ದಲು ನಾವು ಬಿಡುವುದಿಲ್ಲ ಎಂದು ಗುಡುಗಿದರು. ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ನಾವೇ ಸಂವಿಧಾನ ತಜ್ಞರು ಎಂದು ಹೇಳುತ್ತಿದ್ದ ಕಾಂಗ್ರೆಸ್‌ನ ನೈಜಮುಖ ಈಗ ಬಯಲಾಗಿದೆ ಎಂದು ವ್ಯಂಗ್ಯವಾಡಿದರು. ಬೆಳ್ತಂಗಡಿ ಶಾಸಕ ಹರೀಶ ಪೂಂಜಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶಿವಕುಮಾರ್ ಹೇಳಿಕೆ ಖಂಡಿಸಬೇಕು ಎಂದು ಒತ್ತಾಯಿಸಿದರು.
ಸಂವಿಧಾನ ಬದಲು ಹೇಳಿಕೆ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ: ಬಿಜೆಪಿಗರಿಗೆ ಡಿಕೆಶಿ ಸವಾಲ್
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಸೇರಿ ಹಲವರಿದ್ದರು. ಧಾರವಾಡದ ಜ್ಯುಬಿಲಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ಮುಸ್ಲಿಂ ಮೀಸಲಾತಿ ಕೈಬಿಡಬೇಕು, 18 ಶಾಸಕರ ಅಮಾನತು ವಾಪಸ್ ಪಡೆಯಬೇಕೆಂದು ಆಗ್ರಹಿಸಲಾಯಿತು. ಹಾವೇರಿಯಲ್ಲಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು. ಗದಗ ಮಹತ್ಮಾ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕರಾದ ಡಾ. ಚಂದ್ರು ಲಮಾಣಿ, ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಪಾಲ್ಗೊಂಡಿದ್ದರು.
ಕೊಪ್ಪಳ ಜಿಲ್ಲೆ ಕುಷ್ಟಗಿ, ಗಂಗಾವತಿ, ಯಲಬುರ್ಗಾದಲ್ಲಿ ಪ್ರತಿಭಟನೆ ನಡೆಯಿತು. ಯಲಬುರ್ಗಾದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್, ಗಂಗಾವತಿಯಲ್ಲಿ ಪರಿಷತ್ ಸದಸ್ಯೆ ಹೇಮಲತಾ ನಾಯಕ ಪಾಲ್ಗೊಂಡಿದ್ದರು. ಬಳ್ಳಾರಿ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪರಿಷತ್ ಸದಸ್ಯ ಸತೀಶ್ ಪಾಲ್ಗೊಂಡಿದ್ದರು. ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಸಲ್ಮಾನರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ಶೇ.4 ಮೀಸಲಾತಿ ನೀಡಿದ್ದು ಇದು ಸಂವಿಧಾನ ಬಾಹಿರ. ಇದರಿಂದಾಗಿ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು. ಮಂಡ್ಯ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ನವರು ಮುಸ್ಲಿಮರಿಗಾಗಿ ಸಂವಿಧಾನ ಬದಲಾವಣೆ ಮಾಡಲು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬರೇ ಇದ್ದರೆ ಹನಿಟ್ರ್ಯಾಪ್ ಆಗುತ್ತಾ ಸಚಿವ ಕೆ.ಎನ್ ರಾಜಣ್ಣ ತಪ್ಪು ಮಾಡಿದ್ದಾರೆ: ಡಿ.ಕೆ.ಶಿವಕುಮಾರ್
ಪೊಲೀಸ್-ಪ್ರತಿಭಟನಾಕಾರರ ವಾಗ್ವಾದ: ಚಿಕ್ಕಮಗಳೂರಲ್ಲಿ ನಡೆದ ಪ್ರತಿಭಟನೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹಿಸಲು ಯತ್ನಿಸಿದಾಗ ಪೊಲೀಸರು ತಡೆದರು. ನಂತರ ಪ್ರತಿಭಟನಾಕಾರರು ಅನ್ನಭಾಗ್ಯ ಪ್ಲೆಕ್ಸ್‌ನಲ್ಲಿರುವ ಡಿಕೆಶಿ ಅವರ ಭಾವಚಿತ್ರಕ್ಕೆ ಮೊಟ್ಟೆ ಬೀಸಿದರು, ಕೆಲವರು ಕಲ್ಲು ತೂರಾಟ ಮಾಡಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತೀವ್ರ ವಾಗ್ವಾದವೂ ನಡೆಯಿತು.