ಕಾಂಗ್ರೆಸ್ ಹೈಕಮಾಂಡ್‌ ಕಪ್ಪಕ್ಕೆ ರಾಜ್ಯ ಲೂಟಿ: ಆರ್.ಅಶೋಕ್ ಆರೋಪ

Kannadaprabha News   | Kannada Prabha
Published : Jun 23, 2025, 08:55 AM IST
Karnataka LoP R Ashoka

ಸಾರಾಂಶ

ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಲು ರಾಜ್ಯ ಸರ್ಕಾರದಿಂದ ಲೂಟಿ ನಡೆಯುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ಮೈಸೂರು (ಜೂ.23): ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಸಲ್ಲಿಸಲು ರಾಜ್ಯ ಸರ್ಕಾರದಿಂದ ಲೂಟಿ ನಡೆಯುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು. ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಯಲ್ಲಿನ ಹಗರಣ ಕುರಿತ ಕಾಂಗ್ರೆಸ್ ಶಾಸಕನ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, 60 ಪರ್ಸೆಂಟೇಜ್‌ನ ಈ ಸರ್ಕಾರದಲ್ಲಿ ಪ್ರತಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೀತಿದೆ. ಬಡವರಿಗೆ ಮನೆ ಹಂಚಿಕೆ ಮಾಡಲು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು. ಶೇ.36ರಷ್ಟು ಹಣವನ್ನು ವಸತಿ ಇಲಾಖೆಯಲ್ಲೂ ಕೇಳುತ್ತಿದ್ದಾರೆ. ಅಬಕಾರಿ ಇಲಾಖೆಯಲ್ಲೂ ಲೂಟಿ ಮಾಡಿದ್ದಾರೆ. ವಾಲ್ಮೀಕಿ ಹಗರಣ, ಮುಡಾ ಹಗರಣದಲ್ಲೂ ಲೂಟಿ ಆಯಿತು.

ಮುಖ್ಯಮಂತ್ರಿಯಿಂದ ಎಲ್ಲಾ ಸಚಿವರವರೆಗೂ ಲೂಟಿ ಮಾಡುವ ಕೆಲಸಕ್ಕೆ ಇಳಿದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು. ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಲು ನಾ ಮುಂದು, ತಾ ಮುಂದು ಎಂದು ಎಲ್ಲರೂ ನಿಂತಿದ್ದಾರೆ. ಹೈಕಮಾಂಡ್‌ಗೆ ಯಾರು ಜಾಸ್ತಿ ಕಪ್ಪ ಕಾಣಿಕೆ ನೀಡುತ್ತಾರೋ ಅವರಿಗೆ ಬೆಲೆ ಜಾಸ್ತಿ. ಬಿಹಾರ ಸೇರಿದಂತೆ ಬೇರೆ ರಾಜ್ಯಗಳ ಚುನಾವಣೆಗಾಗಿ ಕರ್ನಾಟಕದಿಂದ ಲೂಟಿ ಮಾಡಲಾಗುತ್ತಿದೆ ಎಂದರು. ರಾಜ್ಯ ಸರ್ಕಾರದ ಈ ಭ್ರಷ್ಟಾಚಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲಿದ್ದೇವೆ. ಮುಖ್ಯಮಂತ್ರಿಗೆ ಗೌರವವಿದ್ದರೆ ಇಷ್ಟೊತ್ತಿಗೆ ಸಚಿವರ ರಾಜೀನಾಮೆ ಪಡೆಯಬೇಕಿತ್ತು ಎಂದು ಹೇಳಿದರು.

ವಸತಿಗೆ ಹಣ ಕೇಸ್‌ ಸಿಬಿಐ ತನಿಖೆ ಆಗಲಿ: ಬಡವರ ಮನೆಗಳಿಗೆ ಸರ್ಕಾರವೇ ಕನ್ನ ಹಾಕುತ್ತಿದೆ. ಇದಕ್ಕೆ ಅವರದ್ದೇ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪವೇ ಸಾಕ್ಷಿ. ಶಾಸಕರ ಆರೋಪಕ್ಕೆ ಸಂಬಂಧಿಸಿದಂತೆ ವಸತಿಗಾಗಿ ಹಣ ಕೇಸ್‌ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ವಸತಿ ಯೋಜನೆಗಳಲ್ಲಿ ಕಳೆದ ಎರಡೂವರೆ ವರ್ಷದಲ್ಲಿ ಸರ್ಕಾರ ₹2137.44 ಕೋಟಿ ಕಮೀಷನ್ ಹೊಡೆದಿದೆ. ಇದೊಂದು ದೊಡ್ಡ ಹಗರಣ. ಈ ಬಗ್ಗೆ ಸಿಬಿಐ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆಯಾಗಬೇಕು. ವಸತಿಗಾಗಿ ಹಣ ಕೇಸ್‌ ಪ್ರಕರಣದ ವಿರುದ್ಧ ಬಿಜೆಪಿ-ಜೆಡಿಎಸ್‌ ಒಟ್ಟಾಗಿ ಹೋರಾಟ ನಡೆಸಲಿವೆ.

ವಿಧಾನಸಭೆಯಲ್ಲಿ ಈ ಸಂಬಂಧ ನಿಲುವಳಿ ಮಂಡಿಸಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.ರಾಜೀವ್‌ಗಾಂಧಿ ವಸತಿ ಯೋಜನೆ, ಪ್ರಧಾನ ಮಂತ್ರಿ ಅವಾಸ್ ಯೋಜನೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ ಸೇರಿದಂತೆ ಎಲ್ಲ ವಸತಿ ಯೋಜನೆಗಳಲ್ಲಿ ಕಮೀಷನ್ ಮೂಲಕ ಹಣ ಹೊಡೆಯುವುದೇ ಸರ್ಕಾರದ ಛಾಳಿಯಾಗಿದೆ. ಈ ಹಗರಣ ಪಕ್ಷದ ಶಾಸಕರ ಮುಖಾಂತರವೇ ಬಯಲಿಗೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿ.ಆರ್.ಪಾಟೀಲ್ ತಮ್ಮ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದರೂ ಅದನ್ನು ಬೋಗಸ್ ಎಂದು ಬಿಂಬಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ನಾನು ಪಾಟೀಲ್ ಅವರನ್ನು ಸಂಪರ್ಕಿಸಿದಾಗ ಪಾಟೀಲ್ ಯಾರಿಗೂ ಅಂಜದೆ ಈ ಆಡಿಯೋ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರೇ ಆಗ್ರಹಿಸಿದ್ದಾರೆ ಎಂದರು.

ಬಿ.ಆರ್.ಪಾಟೀಲ್ ಹಿರಿಯ ರಾಜಕಾರಣಿಯಾಗಿದ್ದು, ಮೇಲ್ಮನೆ ಉಪಸಭಾಪತಿಯಾಗಿ ಕೆಲಸ ಮಾಡಿದ್ದಾರೆ. ಇದೀಗ ನೀತಿ ಆಯೋಗದ ಉಪಾಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅವರನ್ನು ಈ ಹುದ್ದೆಗೆ ನೇಮಕ ಮಾಡಿದ್ದಾರೆ. ಇಂತಹ ವ್ಯಕ್ತಿ ಸ್ವಪಕ್ಷದ ವಿರುದ್ಧ ಸುಳ್ಳು ಆರೋಪ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ತಾಕತ್ತು ಮತ್ತು ಧಮ್ ಇದ್ದರೆ ಬಿ.ಆರ್.ಪಾಟೀಲ್ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲಿ. ಇಲ್ಲವೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ರಾಜೀನಾಮೆ ನೀಡಿ ತೊಲಗಲಿ ಎಂದು ಆಗ್ರಹಿಸಿದರು.

ದಲಿತರಿಗೂ ಅನ್ಯಾಯ: ವಸತಿ ಯೋಜನೆಯಲ್ಲಿ ಈಗಾಗಲೇ ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಮೀಸಲಾತಿ ನೀಡುವ ಮೂಲಕ ದಲಿತ, ಹಿಂದುಳಿದ ವರ್ಗಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ಹಿಂದೂಗಳ ಮುಖಾಂತರ ಶೇ.60ರಷ್ಟು ಕಮೀಷನ್ ಹೊಡೆದು, ಶೇ15ರಷ್ಟು ಮುಸ್ಲಿಂಮರಿಗೆ ಮೀಸಲಾತಿ ನೀಡುವ ಮೂಲಕ ನಮ್ಮದು ಟಿಪ್ಪು ಸರ್ಕಾರ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ದೂರಿದರು. ವಸತಿ ಯೋಜನೆಗಳಿರುವುದು ಬಡವರು, ನಿರ್ಗತಿಕರಿಗೆ, ಹಿಂದುಳಿದವರಿಗೆ ಮನೆ ನೀಡಲು. ಆದರೆ, ಈ ಸರ್ಕಾರ ಉಳ್ಳವರಿಗೆ ವಸತಿಯನ್ನು ಮಾರಿಕೊಳ್ಳುತ್ತಿದೆ. ಬಡವರ ರಕ್ತವನ್ನು ಜಿಗಣೆಗಳಂತೆ ಹೀರುತ್ತಾ, ಬಡವರ ಮನೆಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!