
ಹುಬ್ಬಳ್ಳಿ (ಫೆ.17): ರಾಜ್ಯ ಸರ್ಕಾರ ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದ್ದು, ಸಂಪೂರ್ಣವಾಗಿ ದಿವಾಳಿಯಾಗಿದೆ. ಅದಕ್ಕಾಗಿಯೇ ವಿದ್ಯುತ್, ನೀರು, ಹಾಲು, ಮೆಟ್ರೋ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆ ಮಾಡುವ ಮೂಲಕ ಜನರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೆಟ್ರೋ ದರ ಏರಿಕೆ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ. ದರ ಏರಿಕೆ ಮಾಡಲು ಹಾಗೂ ಇಳಿಸುವ ಸಂಪೂರ್ಣ ಅಧಿಕಾರ ರಾಜ್ಯ ಸರ್ಕಾರಕ್ಕಿದೆ.
ಅದರಂತೆ ರಾಜ್ಯ ಸರ್ಕಾರದ ಶಿಫಾರಸ್ಸಿನಂತೆ ಮೆಟ್ರೋ ದರ ಏರಿಕೆ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೆ ನಿರ್ದೇಶನ ನೀಡಿದ್ದಾರೆ ಎಂದರು. ಇದೇ ವೇಳೆ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಯಾವಾಗ ಹಳೇ ಹುಬ್ಬಳ್ಳಿ ಪ್ರಕರಣವನ್ನು ಹಿಂತೆಗೆದುಕೊಂಡಿತೋ ಆಗಲೇ ಸರ್ಕಾರ ಯಾರ ಪರವಿದೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಈ ಹಿಂದೆ ತನ್ವೀರ್ ಸೇಠ್ ಮೇಲೆ ಪಿಎಫ್‌ಐ ದಾಳಿ ಮಾಡಿತ್ತು. ಇಂದು ಆ ಶಕ್ತಿಗಳು ಮತ್ತೆ ಒಂದಾಗಿವೆ ಎಂದು ಆರೋಪಿಸಿದರು.
ದೂರೋದು ವಿಪಕ್ಷಗಳ ಫ್ಯಾಷನ್: ಚುನಾವಣೆಗಳಲ್ಲಿ ಸೋತ ನಂತರ ಇವಿಎಂ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿದ್ದು, ವಿಪಕ್ಷಗಳು ನಿರಂತರವಾಗಿ ಇಂತಹ ಆರೋಪಗಳನ್ನು ಮಾಡಿಕೊಂಡೇ ಬಂದಿವೆ ಎಂದು ಹಾವೇರಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆಗೆ ಆಗಮಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೆಹಲಿ ವಿಧಾನಸಭೆ ಚುನಾವಣೆ ಸ್ಪಷ್ಟ ಸಂದೇಶ ನೀಡಿದೆ. ಹಾಗಿದ್ದರೂ ಇವಿಎಂ ಬಗ್ಗೆ ವಿಪಕ್ಷಗಳು ಎಂದಿನಂತೆ ಆರೋಪ ಮಾಡುತ್ತಿವೆ ಎಂದರು.
ಕೃಷಿ ವಿವಿಗಳು ಕ್ಯಾಂಪಸ್ ಬಿಟ್ಟು ಹೊರ ಬರಬೇಕು: ಸಂಸದ ಬೊಮ್ಮಾಯಿ
ಯಾರು ದೇಶದ ಬಗ್ಗೆ ಚಿಂತನೆ ಮಾಡುತ್ತಾರೋ, ರಾಷ್ಟ್ರದ ಅಭಿವೃದ್ಧಿ ಬಗ್ಗೆ ಕೆಲಸ ಮಾಡುತ್ತಾರೋ, ಯಾರು ದೇಶವನ್ನು ಕಟ್ಟುತ್ತಾರೋ ಅಂತಹವರಿಗೆ ಜನಬೆಂಬಲ ಇದೆ ಎಂಬ ಸಂದೇಶವನ್ನು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನೀಡಿದ್ದಾರೆ. ದೆಹಲಿ ಫಲಿತಾಂಶವು ದೇಶಕ್ಕೆ ಸ್ಷಷ್ಟತೆ ನೀಡಿದೆ. ಪ್ರೀತಿಯಿಂದ ದೇಶ ಕಟ್ಟುವವರಿಗೆ ಸ್ಪಷ್ಟ ಬಹುಮತವನ್ನು ದೆಹಲಿ ಮತದಾರರು ನೀಡಿದ್ದಾರೆ ಎಂದರು. ದೇಶ ವಿಭಜನೆ, ದೇಶದ ಹಿತ ಮರೆತವರಿಗೆ ಸ್ಥಾನ ಇಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದೇಶ ವಿಭಜನೆ ಬಗ್ಗೆ ರಾಷ್ಟ್ರದ ಹಿತವನ್ನೇ ಮರೆತು, ವಿದೇಶಗಳಲ್ಲಿ ಮಾತನಾಡುವವರಿಗೆ ದೆಹಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಸೋಲನ್ನು ಒಪ್ಪಿಕೊಳ್ಳದೇ ಕುಂಟುನೆಪ ಹೇಳುವುದು ಒಳ್ಳೆಯ ನಾಯಕನ ಲಕ್ಷಣವೂ ಅಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.