
ಬೆಂಗಳೂರು (ಫೆ.23) : ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಬೇಡಿಕೆ ಮತ್ತು ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಅಭ್ಯರ್ಥಿ ಕಣಕ್ಕಿಳಿಸುವ ಕುರಿತ ನಮ್ಮ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರ ಬದಲಾವಣೆ ಆಗಲಿದೆ. ಈ ವಿಚಾರದಲ್ಲಿ ನಮ್ಮ ಮನವಿಯನ್ನು ಪಕ್ಷದ ಹೈಕಮಾಂಡ್ ಪುರಸ್ಕರಿಸುವ ವಿಶ್ವಾಸವಿದೆ ಎಂದೂ ಅವರು ತಿಳಿಸಿದ್ದಾರೆ.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇ ಬೇಕು ಎಂಬುದು ಪಕ್ಷದ ಶೇ.90ರಷ್ಟು ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಇದು ಪಕ್ಷದ ವರಿಷ್ಠರಿಗೂ ಮನದಟ್ಟಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಬಣ ರಾಜಕೀಯ: ಶಿವರಾಮ್ ಹೆಬ್ಬಾರ್ ಅಸಮಾಧಾನ! Shivarama Hebbar on BJP | Suvarna News
ಬಿಜೆಪಿಯಲ್ಲಿ ಬಣ ರಾಜಕೀಯ: ಶಿ
ಹಿಂದುಳಿದವರು, ದಲಿತರ ಸೆಳೆಯಬೇಕು:
ಬಿಜೆಪಿಗೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳನ್ನು ಮತ್ತಷ್ಟು ಮತ್ತಷ್ಟು ಸೆಳೆಯುವ ಅಗತ್ಯವಿದೆ. ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರು ನಮ್ಮ ಜತೆ ಇರುವುದರಿಂದ ಒಕ್ಕಲಿಗರು, ಲಿಂಗಾಯತ ಮತಗಳ ಕ್ರೋಢೀಕರಣವಾಗಿದೆ. ಹಿಂದುಳಿದ ವರ್ಗಗಳ ಮತಗಳು ಅಲ್ಲಲ್ಲಿ ಚದುರಿದ ಪರಿಣಾಮ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಸುಮಾರು 140 ಸೀಟ್ ಗೆದ್ದಿದೆ. ಆ ನಿಟ್ಟಿನಲ್ಲಿ ಬಿಜೆಪಿಯು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮತಗಳನ್ನು ಕ್ರೋಢೀಕರಿಸುವ ಅಗತ್ಯವಿದೆ ಎಂದು ವಿವರಿಸಿದರು.
ಇದರರ್ಥ ನನಗೆ ಅವಕಾಶ ನೀಡಬೇಕು ಎಂದಲ್ಲ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಲ್ಲಿ ಯಾರಿಗೆ ಅವಕಾಶ ಕೊಟ್ಟರೂ ರಾಜ್ಯದಲ್ಲಿ ಬಿಜೆಪಿಗೆ ದೊಡ್ಡ ಅನುಕೂಲವಾಗುತ್ತದೆ ಎಂಬುದು ನಮ್ಮ ಒತ್ತಾಯ. ಇದರ ಸಾಧಕ-ಬಾಧಕ ನೋಡುವ ಅಗತ್ಯವೂ ಇದೆ ಎಂದರು.
ಈಗಾಗಲೇ ರಾಜ್ಯದ ಬಿಜೆಪಿಗೆ ಪ್ರಬಲ ವರ್ಗಗಳಿಂದ ಹಲವರು ರಾಜ್ಯಾಧ್ಯಕ್ಷರಾಗಿದ್ದಾರೆ. ಹರ್ಯಾಣ, ದೆಹಲಿ, ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಾಂಬಿನೇಷನ್‌ನಿಂದ ಉತ್ತಮ ಫಲಿತಾಂಶ ಬಂದಿದೆ. ಇದೇ ಮಾದರಿ ಕರ್ನಾಟಕದಲ್ಲೂ ಮಾಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ ಕುಮಾರ್ ಬಂಗಾರಪ್ಪ ತಿಳಿಸಿದರು.
ರಾಜಕೀಯ ಕಾರಣಕ್ಕೆ ನೋಟಿಸ್ ಅಲ್ಲ:
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೈಕಮಾಂಡ್ ಶಾಸಕ ಬಸನಗೌಡ ಯತ್ನಾಳ್‌ಗೆ ರಾಜಕೀಯ ವಿಚಾರಕ್ಕೆ ಶೋಕಾಸ್ ನೋಟಿಸ್ ನೀಡಿಲ್ಲ. ಕೆಲ ವಿಚಾರಗಳ ಸಂಬಂಧ ನೋಟಿಸ್ ನೀಡಿದ್ದಾರೆ. ಅದಕ್ಕೆ ಯತ್ನಾಳ್ ಸೂಕ್ತ ಉತ್ತರ ಕೊಟ್ಟಿದ್ದಾರೆ. ಈ ಹಿಂದೆಯೂ ಅವರಿಗೆ ನೋಟಿಸ್ ನೀಡಲಾಗಿತ್ತು. ಖುದ್ದು ಯತ್ನಾಳ್ ಹೈಕಮಾಂಡ್ ಭೇಟಿಯಾಗಿ ಉತ್ತರ ಕೊಟ್ಟಿದ್ದರು. ಈಗಲೂ ಸೂಕ್ತ ಉತ್ತರ ನೀಡಿದ್ದಾರೆ. ಯತ್ನಾಳ್‌ಗೆ ಅವರನ್ನು ಸಮರ್ಥನೆ ಮಾಡಿಕೊಳ್ಳುವ ಸಾಮರ್ಥ್ಯ ಇದೆ. ಅವರ ಹಿಂದೆ ನಾವೆಲ್ಲರೂ ಇದ್ದೇವೆ ಎಂದರು.
ಪಕ್ಷ ಸಂಘಟನೆ ಪರವಾಗಿ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಂಘ ಸೇರಿ ಎಲ್ಲ ಕಡೆಯಿಂದ ನಾವು ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ. ನಮಗೆ ಸೂಕ್ತ ಮಾರ್ಗದರ್ಶನ ಮಾಡಬೇಕು. ನಾವೆಲ್ಲ ನಿಮ್ಮ ಜತೆಗೆ ಇದ್ದೇವೆ. ನಾವು ಯಾವುದೇ ರಾಜಕೀಯ ನಿರ್ಧಾರ ಕೈಗೊಳ್ಳುವುದಿಲ್ಲ. ನಾವು ಬಿಜೆಪಿ ಜತೆಗೆ ಇದ್ದೇವೆ ಎಂದು ಹೇಳಿದ್ದೇವೆ ಎಂದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಆಂತರಿಕ ತಿಕ್ಕಾಟ: ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯೋದೇ ಡೌಟ್!
ಒಬಿಸಿ/ದಲಿತರು ಅಧ್ಯಕ್ಷರಾಗಬೇಕು
ರಾಜ್ಯಾಧ್ಯಕ್ಷರ ಬದಲಾವಣೆ ಆಗಲೇ ಬೇಕು ಎಂಬುದು ಪಕ್ಷದ ಶೇ.90ರಷ್ಟು ಕಾರ್ಯಕರ್ತರಿಗೆ ಮನವರಿಕೆಯಾಗಿದೆ. ಇದು ಪಕ್ಷದ ವರಿಷ್ಠರಿಗೂ ಮನದಟ್ಟಾಗಿದೆ. ಒಬಿಸಿ/ದಲಿತರನ್ನು ರಾಜ್ಯಾಧ್ಯಕ್ಷ ಮಾಡಬೇಕು ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇವೆ. ಶೋಕಾಸ್ ನೋಟಿಸ್‌ಗೆ ಯತ್ನಾಳ್ ಸೂಕ್ತ ಉತ್ತರ ನೀಡಿದ್ದಾರೆ.
- ಕುಮಾರ್ ಬಂಗಾರಪ್ಪ, ಭಿನ್ನರ ಬಣದ ಮುಖಂಡ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.