ನಮಗೆ ಅಕ್ಕಿ ಸಿಗದಿರುವುದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಗಂಭೀರ ಆರೋಪ ಮಾಡಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ.
ಹುಬ್ಬಳ್ಳಿ (ಜೂ.26): ನಮಗೆ ಅಕ್ಕಿ ಸಿಗದಿರುವುದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರಡ್ಡಿ ಗಂಭೀರ ಆರೋಪ ಮಾಡಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ನಮ್ಮ ರಾಜ್ಯದ ಬಿಜೆಪಿ ಮುಖಂಡರೆ ಹೇಳಿಕೊಟ್ಟಕಾರಣಕ್ಕೆ ಕೇಂದ್ರದವರು ನಮಗೆ ಅಕ್ಕಿ ಕೊಡುತ್ತಿಲ್ಲ. ಇದಕ್ಕೆ ನೇರವಾಗಿ ರಾಜ್ಯದ ಬಿಜೆಪಿ ನಾಯಕರೇ ಕಾರಣರಾಗಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಾವೇನು ಉಚಿತವಾಗಿ ಅಕ್ಕಿ ಕೇಳುತ್ತಿಲ್ಲ. ಅದಕ್ಕೆ ನೀಡಬೇಕಾದ ಹಣ ನೀಡಿಯೇ ಅಕ್ಕಿ ಕೊಡುವಂತೆ ಮನವಿ ಮಾಡಿದ್ದೇವೆ. ಆದರೆ, ಅವರು ನಿರಾಕರಣೆ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹೆಸರು ಬರುತ್ತದೆಯೋ ಎಂದು ನಮಗೆ ಕೇಂದ್ರದವರು ಅಕ್ಕಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ನುಡಿದಂತೆ ನಡೆಯುತ್ತೇವೆ: ನಾವು ಚುನಾವಣೆಯ ಪೂರ್ವದಲ್ಲಿ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬದ್ಧರಾಗಿದ್ದು, ಬರುವ ಆ. 15ರೊಳಗೆ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದೇ ತರುತ್ತೇವೆ. ನಾವು ಮಾತು ಕೊಟ್ಟಂತೆ, ನುಡಿದಂತೆಯೇ ನಡೆಯುತ್ತೇವೆ. ಗ್ಯಾರಂಟಿ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮುಖಂಡರು ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಅದಕ್ಕೆ ಆಸ್ಪದ ನೀಡುವುದಿಲ್ಲ. ನಾವು ಘೋಷಿಸಿರುವಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿಯೇ ತೀರುತ್ತೇವೆ ಎಂದರು.
ವೃದ್ಧರಿಗೆ ದೇಗುಲಗಳಲ್ಲಿ ಶೀಘ್ರ ದರ್ಶನ ವ್ಯವಸ್ಥೆ ಶುರು: ಸಚಿವ ರಾಮಲಿಂಗಾರೆಡ್ಡಿ
ಎಲ್ಲವನ್ನೂ ಸರಿ ಮಾಡುತ್ತೇವೆ: ಸಾರಿಗೆ ಇಲಾಖೆ ಅಶಕ್ತ ಆಗಿಲ್ಲ. ನಮಗೆ ಯಾವ ನಷ್ಟವೂ ಇಲ್ಲ. ರಾಜ್ಯ ಸರ್ಕಾರ ಹೊರಡಿಸಿದ ಶಕ್ತಿ ಯೋಜನೆಯಲ್ಲಿ ಕೆಲ ಸಣ್ಣಪುಟ್ಟದೋಷಗಳಿವೆ. ಶಕ್ತಿ ಯೋಜನೆ ಆರಂಭವಾದಾಗಿನಿಂದ ಪ್ರಾರಂಭದಲ್ಲಿ ಮಹಿಳೆಯರು ಜಾಸ್ತಿ ಸಂಚರಿಸುತ್ತಿದ್ದಾರೆ. ಕೆಲವು ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ಹೊರಟಿದ್ದಾರೆ. ಒಂದು ಸಾರಿ ಹೋಗಿ ಬಂದವರು ಮತ್ತೆ ಹೋಗುವುದಿಲ್ಲ. ಯೋಜನೆಯಲ್ಲಿ ಆಗಿರುವ ಸಣ್ಣ ಪುಟ್ಟ ತಪ್ಪುಗಳನ್ನು ಸರಿಮಾಡುತ್ತೇವೆ.
ಡಿಸೆಂಬರ್ ಒಳಗೆ ಬಿಬಿಎಂಪಿ ಚುನಾವಣೆ: ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಇಲಾಖೆ ಜನರ ಅನುಕೂಲಕ್ಕಾಗಿಯೇ ಇರುವುದು. ದಿನಕ್ಕೆ 1 ಲಕ್ಷ 56 ಸಾವಿರ ಶೆಡ್ಯೂಲ್‌ನಲ್ಲಿ ಬಸ್ ಸಂಚರಿಸುತ್ತವೆ. ಕೆಲವು ಗೊಂದಲವಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನೆಲ್ಲ ಸರಿಪಡಿಸಲಾಗುವುದು. ಸಾರಿಗೆ ಸಂಸ್ಥೆಗಳಿಗೆ ವಿಶೇಷ ಅನುದಾನ ಕೊಡಬೇಕಾಗುತ್ತದೆ. ಅದರ ಕುರಿತು ಈಗಾಗಲೇ ಚರ್ಚಿಸಿದ್ದೇನೆ. ಇನ್ನು ಸಾರಿಗೆ ಸಂಸ್ಥೆಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಹಾಗೆಯೇ ಸಾರ್ವಜನಿಕರು ಬಸ್ ಚಾಲಕರು ಹಾಗೂ ನಿರ್ವಾಹಕರೊಂದಿಗೆ ಸಹಕರಿಸಬೇಕು. ನಾವು ಈಗಾಗಲೇ ಸಿಬ್ಬಂದಿಗೆ ಸೌಜನ್ಯದಿಂದ ವರ್ತಿಸುವಂತೆ ಎಚ್ಚರಿಕೆ ನೀಡಿದ್ದೇವೆ ಎಂದರು.