ಬೆಂಗಳೂರಿನ ಪಾದರಾಯನಪುರ ಪ್ರಕರಣದ ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಈ ನಡುವೆ ಶ್ರೀರಾಮುಲು ತಪ್ಪೊಪ್ಪಿಕೊಂಡಿದ್ದಾರೆ
ಬೆಂಗಳೂರು, (ಏ.24): ಪಾದರಾಯನಪುರ ಪ್ರಕರಣದ ಆರೋಪಿಗಳನ್ನ ರಾಮನಗರ ಜೈಲಿಗೆ ಶಿಫ್ಟ್ ಮಾಡಬಾರದೆಂದು ಎಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಹೇಳಿದ್ದು ಸರಿಯಾಗೇ ಇತ್ತು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಒಪ್ಪಿಕೊಂಡಿದ್ದಾರೆ.
ಇಂದು (ಶುಕ್ರವಾರ) ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ನಡೆಸಿದ ವಿಡಿಯೊ ಕಾನ್ಫರೆನ್ಸ್ನಲ್ಲಿ ಶ್ರೀರಾಮುಲು ಭಾಗಿಯಾಗಿ, ಬಳಿಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಬೆಳವಣಿಗೆ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿ 11ನೇ ಸ್ಥಾನದಲ್ಲಿ ಇದೆ. ಎಲ್ಲಾ ಮುಂಜಾಗ್ರತೆ ವಹಿಸಿರುವ ಬಗ್ಗೆ ಕೇಂದ್ರಕ್ಕೆ ಮಾಹಿತಿ ಕೊಟ್ಟಿದ್ದೇವೆ ಎಂದರು.
ನನ್ನ ಮೇಲಿನ ಕೋಪಕ್ಕೆ ನನ್ನ ಜನರಿಗೆ ತೊಂದ್ರೆ: ಪೊಲೀಸ್ ಅಧಿಕಾರಿ ಮೇಲೆ HDK ಗರಂ
ಪ್ಲಾಸ್ಮಾ ಚಿಕಿತ್ಸೆಗೆ ಸಂಬಂಧಿಸಿದ ಬಗ್ಗೆಯೂ ಮಾಹಿತಿ ನೀಡಿದ್ದೇವೆ. ರೆಡ್ ಝೋನ್ ವಾರ್ಡ್ಗಳು ಸಂಪೂರ್ಣ ಲಾಕ್ಡೌನ್ ಆಗಿವೆ. ಮುಂಜಾಗ್ರತೆ ವಹಿಸಿಯೇ 10 ಇಲಾಖೆಯ ಸಿಬಂದ್ದಿ ಕೆಲಸಕ್ಕೆ ಅವಕಾಶ ನೀಡಿದ್ದೇವೆ ಎಂದು ಹೇಳಿದರು.
ಇದೇ ವೇಳೆ ರಾಮನಗರಕ್ಕೆ ಆರೋಪಿಗಳನ್ನ ಶಿಫ್ಟ್ ಮಾಡಿದ ವಿಚಾರವಾಗಿ ಮಾತನಾಡಿದ ಶ್ರೀರಾಮುಲು, ರಾಮನಗರ ಗ್ರೀನ್ ಝೋನ್ನಲ್ಲಿತ್ತು. ಹೀಗಾಗಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದರು. ಅವರ ಅಭಿಪ್ರಾಯ ಸರಿಯಾಗಿಯೇ ಇತ್ತು. ಅವರ ಅಭಿಪ್ರಾಯ ಆಧರಿಸಿಯೇ ಮತ್ತೆ ರಾಮನಗರದಿಂದ ಪಾದರಾಯನಪುರ ಆರೋಪಿಗಳನ್ನ ಬೇರೆ ಕಡೆ ಶಿಫ್ಟ್ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪಾದರಾಯನಪುರದ ಕೈದಿಗಳನ್ನ ಶಿಫ್ಟ್ ಮಾಡದಿದ್ರೆ ಉಗ್ರ ಪ್ರತಿಭಟನೆ: ಕುಮಾರಸ್ವಾಮಿ
ಪಾದರಾಯನಪುರ ಆರೋಪಿಗಳನ್ನು ಗ್ರೀನ್ ಝೋನಲ್ಲಿರುವ ರಾಮನಗರದ ಜೈಲಿಗೆ ತರುವುದು ಬೇಡ. ಒಂದು ವೇಳೆ ಆರೋಪಿಗಳಿಗೆ ಪಾಸಿಟಿವ್ ಬಂದು ಮುಂದೆ ಆಗುವ ಆನಾಹುತಕ್ಕೆ ಸರ್ಕಾರವೇ ನೇರ ಹೊಣೆ ಎಂದು ಮಾಜಿ ಸಿಎಂ ಹೇಳಿದ್ದರು.
ಕುಮಾರಸ್ವಾಮಿಯೇ ಹೇಳಿದಂತೆ ಪಾದರಾಯನಪುರದ ಆರೋಪಿಗಳ ಪೈಕಿ ಐವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಆತಂಕ ಮನೆ ಮಾಡಿದೆ.