ಕರ್ನಾಟಕ ಬಿಟ್ಟು ರಾಷ್ಟ್ರ ರಾಜಕಾರಣ ಮಾಡಲ್ಲ: ಸಿ. ಟಿ. ರವಿ!

Published : Oct 03, 2020, 09:48 AM IST
ಕರ್ನಾಟಕ ಬಿಟ್ಟು ರಾಷ್ಟ್ರ ರಾಜಕಾರಣ ಮಾಡಲ್ಲ: ಸಿ. ಟಿ. ರವಿ!

ಸಾರಾಂಶ

ಕರ್ನಾಟಕ ಬಿಟ್ಟು ರಾಷ್ಟ್ರ ರಾಜಕಾರಣ ಮಾಡಲ್ಲ| ನನ್ನ ಬೇರುಗಳು ಇಲ್ಲಿವೆ| ಸಿದ್ಧಾಂತಕ್ಕಾಗಿ ಬಿಜೆಪಿಗೆ ಬಂದವನೇ ಹೊರತು ಅಧಿಕಾರಕ್ಕಾಗಿ ಬಂದವನಲ್ಲ| ಸಂಘ​ಟನೆ, ಸಚಿವ ಸ್ಥಾನ- ಇವು​ಗ​ಳಲ್ಲಿ ನನ್ನ ಆಯ್ಕೆ ಸಂಘ​ಟ​ನೆ| ಪ್ರಧಾನ ಕಾರ್ಯ​ದರ್ಶಿ ಸ್ಥಾನ ಒಲಿ​ದದ್ದು ದೈವೇ​ಚ್ಛೆ| ಕೊಟ್ಟ ಜವಾ​ಬ್ದಾ​ರಿ​ಯನ್ನು ನಿರ್ವ​ಹಿ​ಸು​ತ್ತೇ​ನೆ| ಬಿಜೆಪಿ ನೂತನ ರಾಷ್ಟ್ರೀ​ಯ ಪ್ರಧಾನ ಕಾರ್ಯ​ದ​ರ್ಶಿ ಸಿ.ಟಿ. ರವಿ ಸಂದ​ರ್ಶ​ನ

 

ವಿಜಯ್‌ ಮಲಗಿಹಾಳ

ಬೆಂಗಳೂರು(ಅ.03): ರಾಷ್ಟ್ರೀಯ ಬಿಜೆಪಿಯ ಉನ್ನತ ಸ್ಥಾನಗಳಲ್ಲಿ ಒಂದಾಗಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಜವಾಬ್ದಾರಿ ಅನಂತಕುಮಾರ್‌ ನಂತರ ಇದೀಗ ಸಿ.ಟಿ.ರವಿ ಅವರಿಗೆ ಒಲಿದು ಬಂದಿದೆ. ಹಿಂದೆ ರಾಜ್ಯಾಧ್ಯಕ್ಷ ಹುದ್ದೆಯ ನಿರೀಕ್ಷೆಯಲ್ಲಿದ್ದ ರವಿ ಅವರಿಗೆ ನಿರಾಸೆ ಆದರೂ ಇದೀಗ ಅದಕ್ಕಿಂತಲೂ ಪ್ರಮುಖವಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿದ್ದು ಅನಿರೀಕ್ಷಿತವೇ ಸರಿ. ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿರುವ ಹಾಗೂ ಉತ್ತಮ ವಾಗ್ಮಿ ಎಂದು ಹೆಸರು ಗಳಿಸಿರುವ ರವಿ ಅವರು ಹಿಂದೆಯೂ ಪಕ್ಷದ ರಾಷ್ಟ್ರೀಯ ಘಟಕದಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇದೀಗ ಪಕ್ಷದ ನಿಯಮದಂತೆ ಸಚಿವ ಸ್ಥಾನ ತೊರೆಯಲು ಸಿದ್ಧವಾಗಿರುವ ರವಿ ಅವರು ಮುಂದಿನ ವಾರದಿಂದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದ ಜವಾಬ್ದಾರಿಯನ್ನೂ ಪೂರ್ಣ ಪ್ರಮಾಣದಲ್ಲಿ ನಿಭಾಯಿಸಲಿದ್ದಾರೆ. ಈ ನೇಮಕ ಹಾಗೂ ಪಕ್ಷದಲ್ಲಿನ ಬೆಳವಣಿಗೆಗಳ ಕುರಿತಂತೆ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿದ್ದು ಹೇಗನ್ನಿಸುತ್ತಿದೆ?

- ಈ ಜವಾಬ್ದಾರಿ ಸಿಕ್ಕಿದ್ದು ನನಗೆ ಅನಿರೀಕ್ಷಿತ. ನಾನು ಅಪೇಕ್ಷೆ ಪಟ್ಟಿರಲಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಆಗಾಗ್ಗೆ ಇಂತಹ ತಿರುವುಗಳು ಬಂದಿವೆ. ತಿರುವುಗಳು ಬಂದಾಗ ದೈವೇಚ್ಛೆ ಎಂದುಕೊಂಡಿದ್ದೇನೆ. ಪಕ್ಷದ ಕೆಲಸ ಮಾಡಲು ನನಗೆ ಸಂತಸವಾಗುತ್ತದೆ. ಸರ್ಕಾರದ ಕೆಲಸದಲ್ಲಿ ಎಷ್ಟುಆನಂದ ಅನುಭವಿಸಿದ್ದೇನೆಯೋ ಅದಕ್ಕಿಂತ ಹೆಚ್ಚಾಗಿ ಪಕ್ಷದ ಕೆಲಸದಲ್ಲಿ ಆನಂದ ಅನುಭವಿಸುತ್ತೇನೆ. ನಾನು ಸದಾ ಚಟುವಟಿಕೆಯಿಂದ ಇರಲು ಬಯಸುತ್ತೇನೆ. ಆನಂದದಿಂದ ಪಕ್ಷ ಕೊಟ್ಟಿರುವ ಜವಾಬ್ದಾರಿ ಒಪ್ಪಿಕೊಂಡಿದ್ದೇನೆ.

ಇಂಥದೊಂದು ಮಹತ್ವದ ಸ್ಥಾನ ಸಿಗುವ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತಾ?

- ಇಲ್ಲ. ಈ ಬಗ್ಗೆ ಯೋಚನೆ ಮಾಡಿದ್ದರೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದೆ. ನನಗೆ ಸ್ವಲ್ಪ ಕೂಡ ಈ ಬಗ್ಗೆ ಆಲೋಚನೆ ಇರಲಿಲ್ಲ. ಸೆ.25ರಂದು ಶಾಸಕಾಂಗ ಸಭೆಯಲ್ಲಿದ್ದ ವೇಳೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರೆ ಮಾಡಿ, ಉಭಯ ಕುಶಲೋಪರಿ ವಿಚಾರಿಸಿದ್ದರು. ಬಳಿಕ ನಿಮ್ಮ ಆದ್ಯತೆ ಸರ್ಕಾರವೇ ಅಥವಾ ಪಕ್ಷ ಸಂಘಟನೆಯೇ ಎಂದು ಪ್ರಶ್ನಿಸಿದ್ದರು. ಸಹಜವಾಗಿಯೇ ನಾನು ಪಕ್ಷ ಸಂಘಟನೆ ಮೊದಲ ಆದ್ಯತೆ ಎಂದಿದ್ದೆ. ಆಗಲಿ, ಮುಖ್ಯಮಂತ್ರಿ ಬಳಿ ಮಾತನಾಡುತ್ತೇನೆ ಎಂದಷ್ಟೇ ನಡ್ಡಾ ಹೇಳಿದ್ದರು. ಮರುದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾರ್ಯಕ್ರಮವೊಂದರಲ್ಲಿ ನಿನ್ನನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ತೀರ್ಮಾನ ಆಗಿದೆ ಎಂದರು. ಎಲ್ಲ ನಿಮ್ಮ ಆಶೀರ್ವಾದ ಎಂದು ಪ್ರತಿಕ್ರಿಯಿಸಿದ್ದೆ. ಆದರೆ ಜವಾಬ್ದಾರಿ ಯಾವುದು ಎಂಬುದು ನನಗೆ ಗೊತ್ತಾಗಲಿಲ್ಲ. ಅದೇ ದಿನ ಹುದ್ದೆ ಸಿಕ್ಕಿರುವ ಬಗ್ಗೆ ಘೋಷಣೆ ಆಯಿತು. ಆಗಲೇ ವಿವರ ಗೊತ್ತಾಗಿದ್ದು.

ನೀವು ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಆಪ್ತರು ಎಂಬ ಕಾರಣಕ್ಕೆ ಅವಕಾಶ ಸಿಕ್ಕಿದೆಯೇ?

-1988ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ನನಗೆ ಸಂತೋಷ್‌ ಅವರು ಪರಿಚಯವಾದದ್ದು 2001ರಲ್ಲಿ. 12 ವರ್ಷ ಅವರ ಪರಿಚಯವಿಲ್ಲದೆ ರಾಜಕೀಯ ಜೀವನ ನಡೆಸಿದ್ದೇನೆ. ಸಂತೋಷ್‌ ಅವರು ಸಾಮಾನ್ಯ ಸ್ತರದಲ್ಲಿರುವವರನ್ನು ಬೆಳೆಸುವುದು, ಕಷ್ಟಪಟ್ಟು ಕೆಲಸ ಮಾಡುವವರನ್ನು ಗುರುತಿಸುವ ಗುಣ ಹೊಂದಿದ್ದಾರೆ. ಅಲ್ಲದೆ, ಕೊಟ್ಟಕೆಲಸವನ್ನು ಅಚ್ಚುಕಟ್ಟಾಗಿ, ಕಷ್ಟಪಟ್ಟು ಮಾಡುತ್ತೇನೆ ಎಂಬ ಕಾರಣಕ್ಕೆ ನನ್ನ ಆಯ್ಕೆ ಮಾಡಿರಬಹುದು. ಸಂತೋಷ್‌ ಅವರು ಹೊಗಳು ಭಟ್ಟರ ಹೊಗಳಿಕೆ ಕೇಳಿ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿಯಲ್ಲ. ಸ್ವತಃ ಅವರೇ ಅಳೆದು ತೂಗಿ ತೀರ್ಮಾನ ಕೈಗೊಳ್ಳುತ್ತಾರೆ. ಹೀಗಾಗಿ ಈ ಬಾರಿ ರಾಜ್ಯಕ್ಕೆ ಹೆಚ್ಚು ಅವಕಾಶಗಳು ಸಿಕ್ಕಿರಬಹುದು. ಮುಂದಿನ 20 ವರ್ಷಕ್ಕೆ ಯಾರ ನಾಯಕತ್ವ ಇರಬೇಕು ಎಂಬುದರ ಬಗ್ಗೆ ಯೋಚನೆ ಮಾಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ, ಭಗವಂತ ಖೂಬಾ ಅಂಥವರು ಪ್ರಯೋಗವಾಗಿದ್ದಾರೆ. ನಾನು ಈ ಹುದ್ದೆಗೇರಲು 32 ವರ್ಷ ಆಗಿದೆ. ಈ ಪ್ರಯೋಗ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶಾದ್ಯಾಂತ ನಡೆಯುತ್ತಿದೆ.

ಸದ್ಯ ಪಕ್ಷದಲ್ಲಿ ಸಂತೋಷ್‌ ಅವರು ಕಿಂಗ್‌ ಮೇಕರ್‌ ಆಗಿದ್ದಾರೆ ಎಂಬ ಮಾತು ರಾಜಕೀಯ ವಲಯದಿಂದ ಕೇಳಿಬರುತ್ತಿದೆ?

- ಬಿಜೆಪಿಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸ್ಥಾನವೇ ಕಿಂಗ್‌ಮೇಕರ್‌ ಸ್ಥಾನ. ಅವರ ಹುದ್ದೆಯೇ ಇತರರನ್ನು ಬೆಳೆಸಿ, ಸಂತೋಷಪಡುವಂಥ ಸ್ಥಾನ. ನನ್ನಂಥ ನೂರಾರು ಜನರನ್ನು ಬೆಳೆಸಿ ಸಂತಸಪಡುತ್ತಾರೆ. ಸಂಘಟನೆ ಬಲ ಆಗಬೇಕು ಎಂಬುದು ಬಿಟ್ಟರೆ ಅವರಿಗೆ ಬೇರೇನೂ ಆಸೆಯಿಲ್ಲ.

ಇನ್ನು ಮುಂದೆ ನಿಮ್ಮ ಸೇವೆ ಕೇವಲ ರಾಷ್ಟ್ರ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿರುತ್ತದೆಯೇ?

- ಕರ್ನಾಟಕ ಭಾರತದ ವ್ಯಾಪ್ತಿಯೊಳಗೆ ಇದೆ. ರಾಷ್ಟ್ರೀಯ ರಾಜಕಾರಣ ಎಂದರೆ, ಕರ್ನಾಟಕ ಸೇರಿದಂತೆ ರಾಷ್ಟ್ರೀಯ ವ್ಯಾಪ್ತಿಯನ್ನು ವಿಸ್ತರಿಸಿದ ರಾಜಕಾರಣ. ನನ್ನ ಬೇರುಗಳು ಕರ್ನಾಟಕದಲ್ಲಿಯೇ ಇವೆ. ಹೊಸ ಹುದ್ದೆ ಕಾರ್ಯ ಬಾಹಿರ ಅಲ್ಲ. ವಿಸ್ತರಣೆ ಮಾತ್ರ. ಕರ್ನಾಟಕವನ್ನು ಬಿಟ್ಟು ರಾಷ್ಟ್ರೀಯ ರಾಜಕಾರಣ ಮಾಡುವುದಿಲ್ಲ.

ನಿಮಗೆ ಪ್ರಮುಖ ಸ್ಥಾನಮಾನ ನೀಡಿರುವುದರ ಹಿಂದೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ನಿಮ್ಮನ್ನು ಪ್ರಬಲವಾಗಿಸುವ ಚಿಂತನೆ ಅಡಗಿದೆಯೇ?

-ರಾಷ್ಟ್ರೀಯ ನಾಯಕರ ಯೋಚನೆ, ಯೋಜನೆ ನನಗೆ ಗೊತ್ತಿಲ್ಲ. ಕೊಟ್ಟಜವಾಬ್ದಾರಿಯನ್ನು ಉತ್ತಮ ಫಲಿತಾಂಶ ಬರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಷ್ಟೇ ನನ್ನ ಆದ್ಯತೆ. ಜವಾಬ್ದಾರಿ ಬದಲಾಗಬಹುದು. ಆದರೆ, ಕಾರ್ಯಕರ್ತ ಎಂಬ ಮನೋಭಾವನೆ ಬದಲಾಗುವುದಿಲ್ಲ.

ಹಿಂದುತ್ವದ ಪ್ರಬಲ ಪ್ರತಿಪಾದಕರು ಎಂಬ ಕಾರಣಕ್ಕಾಗಿ ನೀವು ಮತ್ತು ಸಂಸದ ತೇಜಸ್ವಿ ಸೂರ್ಯ ಅವರಿಗೆ ಪ್ರಮುಖ ಹುದ್ದೆ ನೀಡಲಾಗಿದೆ ಎಂಬ ಮಾತಿದೆ?

- ನೋಡಿ, ಹಿಂದುತ್ವ ಬೇರೆ ಅಲ್ಲ ರಾಷ್ಟ್ರೀಯತೆ ಬೇರೆ ಅಲ್ಲ. ರಾಷ್ಟ್ರೀಯತೆಯ ಇನ್ನೊಂದು ಪರಿಭಾಷೆಯೇ ಹಿಂದುತ್ವ. ಭಾರತೀಯತೆಯೇ ಹಿಂದುತ್ವ ಎಂದು ಭಾವಿಸುವವರು ನಾವು. ಹಿಂದುತ್ವ ಎಂದರೆ ಎಲ್ಲರನ್ನೂ ಒಳಗೊಳ್ಳುವುದು. ಯಾರು ಭಾರತೀಯತೆಯನ್ನು ಒಪ್ಪಿಕೊಳ್ಳುತ್ತಾರೋ ಅವರೆಲ್ಲ ಹಿಂದುತ್ವವನ್ನು ಬೇಧ ಮಾಡಿ ನೋಡುವುದಿಲ್ಲ. ಯಾರಿಗೆ ಭಾರತೀಯತೆಯ ಬಗ್ಗೆ ಅನುಮಾನ ಇರುತ್ತದೆ ಅಂಥವರು ಹಿಂದುತ್ವದ ಬಗ್ಗೆ ಅನುಮಾನಪಡುತ್ತಾರೆ. ಹಾಗಾಗಿ ಭಾರತೀಯತೆ ಒಪ್ಪಿಕೊಳ್ಳುವವರಿಗೆ ಹಿಂದುತ್ವ ಬೇರೆ ಎಂದೆನಿಸುವುದಿಲ್ಲ. ಹೀಗಾಗಿ ನಾನು ಭಾರತೀಯತೆಯ ಪ್ರತಿಪಾದಕ. ಮೂಲ ರೂಪದಲ್ಲಿ ಹೇಳುವುದಾದರೆ ಹಿಂದುತ್ವ.

ನೂತನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನಿಮ್ಮ ಆದ್ಯತೆಗಳೇನು?

- ಇದೇ ತಿಂಗಳ 5 ಮತ್ತು 6ರಂದು ದೆಹಲಿಯಲ್ಲಿ ಪಕ್ಷದ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಮೊದಲ ಸಭೆ ಇದೆ. ಸದ್ಯಕ್ಕೆ ಕೊಟ್ಟಜವಾಬ್ದಾರಿ ನಿರ್ವಹಿಸುತ್ತೇನೆ. ಪ್ರಧಾನ ಕಾರ್ಯದರ್ಶಿ ಹುದ್ದೆ ನನಗೆ ಹೊಸತು. ಆದರೆ ರಾಷ್ಟ್ರೀಯ ಚುನಾವಣೆ ಸಹ ಉಸ್ತುವಾರಿಯಾಗಿ, ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಸಹ ಸಂಚಾಲಕನಾಗಿ, ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯದ ಸಂಘಟನೆಯ ಸಹ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಕರ್ನಾಟಕದಿಂದ ಹೊರಗೆ ಕೆಲಸ ಮಾಡಿರುವುದು ನನಗೇನೂ ಹೊಸತಲ್ಲ.

ರಾಷ್ಟ್ರೀಯತೆ ಹೆಸರಿನಲ್ಲಿ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆಪಾದನೆ ಕೇಳಿ ಬಂದಿದೆ?

-ಎಲ್ಲ ಮಾತೃ ಭಾಷೆಗಳನ್ನೂ ಉಳಿಸಿ ಬೆಳೆಸಬೇಕು ಎಂಬ ಪೂರಕವಾದ ವಾತಾವರಣವನ್ನು ನಿರ್ಮಿಸಲು ಬಿಜೆಪಿ ಕೆಲಸ ಮಾಡುತ್ತಿದೆ. ಸಂಘ ಪರಿವಾರ ಹತ್ತು ವರ್ಷದ ಹಿಂದೆಯೇ ಮಾತೃ ಭಾಷೆ ಉಳಿವಿಗಾಗಿ ಮನೆಗಳಲ್ಲಿ ಮಾತೃ ಭಾಷೆಯ ಭಾವನೆಗಳನ್ನು ಅರಳಿಸುವ ಕೆಲಸ ಮಾಡಿದೆ. ನಿಮ್ಮ ಸಹಿ ಮಾತೃ ಭಾಷೆಯಲ್ಲಿ ಇರಲಿ, ಮನೆಯಲ್ಲಿ ಮಾತೃ ಭಾಷೆಯನ್ನೇ ಮಾತನಾಡಬೇಕು ಎಂದು ಹೇಳಿತ್ತು. ಮಾತೃ ಭಾಷೆಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ ತನ್ನ ಕಾರ್ಯಕರ್ತರಿಗೆ ಕರೆ ಕೊಟ್ಟಿತ್ತು. ಅಂತಹ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ಯಾವುದೇ ಭಾಷೆಯನ್ನು ಹೇರುವುದಿಲ್ಲ. ಈ ವಿಚಾರದಲ್ಲಿ ಸುಖಾ ಸುಮ್ಮನೆ ರಾಜಕೀಯ ಮಾಡಲಾಗುತ್ತಿದೆ. ಬಿಜೆಪಿ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಒತ್ತು ಕೊಡುತ್ತದೆ. ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳೇ ಸಾರ್ವಭೌಮ ಭಾಷೆಗಳು. ಆದರೆ ಹಿಂದಿ ದ್ವೇಷದಿಂದ ಸೌರ್ಮಭೌಮತೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಆ ಭಾಷೆಯ ಅಭಿಮಾನದಿಂದ ಉಳಿಸಿಕೊಳ್ಳಬೇಕು. ಅಭಿಮಾನ ಶೂನ್ಯವಾಗಿರುವ ದ್ವೇಷ ಅಪಾಯಕಾರಿ.

ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ನಿಯಮ ನಿಮಗೂ ಅನ್ವಯವಾಗುವುದೇ?

-ಅನಂತಕುಮಾರ್‌ ರಾಜ್ಯಾಧ್ಯಕ್ಷರಾಗಿ ನಿಯುಕ್ತಿಗೊಂಡ ಬಳಿಕ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೇ ರೀತಿ ಪರಂಪರೆ ಇದೆ. ವಿಶೇಷ ಸಂದರ್ಭಗಳಲ್ಲಿ ಪಕ್ಷದ ಆಪೇಕ್ಷೆ ಮೇರೆಗೆ ವ್ಯತ್ಯಾಸ ಆಗಿರಬಹುದು. ಪಕ್ಷವೇ ಆಪೇಕ್ಷೆ ಪಟ್ಟಾಗ ಎರಡು ಹುದ್ದೆಯಲ್ಲಿ ಮುಂದುವರೆಸಿರುವ ಉದಾಹರಣೆ ಇದೆ. ಹಾಗಾಗಿ ನನಗೆ ಆಯ್ಕೆ ಮಾಡಿದರೆ, ಸಂಘಟನೆ ಎಂದು ಸ್ಪಷ್ಟಪಡಿಸಿದ್ದೇನೆ. ಅದರಂತೆ ನಡೆದುಕೊಳ್ಳುತ್ತೇನೆ. ಸಿದ್ಧಾಂತಕ್ಕಾಗಿ ಬಿಜೆಪಿಗೆ ಬಂದವನೇ ಹೊರತು ಅಧಿಕಾರಕ್ಕಾಗಿ ಬಂದವನಲ್ಲ.

ಸಿಎಂ ಬಗ್ಗೆ ಸಂಸ​ದೀಯ ಮಂಡಳಿ ನಿರ್ಣ​ಯವೇ ಅಂತಿ​ಮ

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ತಮ್ಮ ಅವಧಿ ಪೂರ್ಣಗೊಳಿಸುವರೇ?

- ಯಾವ ಯಾವ ಕಾಲಕ್ಕೆ ಏನೇನು ಮಾಡಬೇಕು ಎಂಬ ನಿರ್ಣಯವನ್ನು ಪಕ್ಷದ ರಾಷ್ಟ್ರೀಯ ನಾಯಕರು ಯೋಚಿಸಿಯೇ ತೆಗೆದುಕೊಳ್ಳುತ್ತಾರೆ. ಈಗ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ. ಎಲ್ಲದಕ್ಕೂ ನಮ್ಮ ಪರಮಾಧಿಕಾರ ಹೊಂದಿರುವ ಸಂಸದೀಯ ಮಂಡಳಿ ದೊಡ್ಡದು. ರಾಜ್ಯ ಮತ್ತು ಪಕ್ಷದ ಹಿತದೃಷ್ಟಿಯಿಂದ ಆ ಮಂಡಳಿಯೇ ಎಲ್ಲ ನಿರ್ಧಾರ ಕೈಗೊಳ್ಳುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸದನದಲ್ಲಿ ಶಾ ಒತ್ತಡದಲ್ಲಿದ್ರು, ಕೈ ಕಂಪಿಸುತ್ತಿತ್ತು : ರಾಹುಲ್‌
ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ