ಆಪರೇಷನ್ ಆಡಿಯೋ ಪ್ರಕರಣ ಕ್ಲೈಮ್ಯಾಕ್ಸ್ ಹಂತಕ್ಕೆ..!

By Web DeskFirst Published Feb 12, 2019, 9:09 PM IST
Highlights

ಕಳೆದ ಮೂರು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಆಪರೇಷನ್ ಆಡಿಯೋ ಬಾಂಬ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ.

ಬೆಂಗಳೂರು, (ಫೆ.12): ರಾಜ್ಯದ ಅಭಿವೃದ್ಧಿಗೆ ಸಾಕ್ಷಿಯಾಗಬೇಕಿದ್ದ ವಿಧಾನಸಭೆ ಕಲಾಪ ಆಪರೇಷನ್ ಕಮಲ ಆಡಿಯೋಗೆ ಬಲಿಯಾಗಿದೆ.

ರಾಷ್ಟ್ರ ಮಟ್ಟದಲ್ಲಿ ಚರ್ಚೆ ಗ್ರಾಸವಾಗಿರುವ ಆಡಿಯೋ ಕ್ಲಿಪ್ ಪ್ರಕರಣ ಮೈತ್ರಿ ಸರ್ಕಾರ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಸದನದಲ್ಲಿ ವಾಗ್ವಾದಗಳು ನಡೆದಿದ್ದು, ಪ್ರಕರಣವನ್ನು SIT ತನಿಖೆಗೆ ನೀಡಲು ಸರ್ಕಾರ ನಿರ್ಧರಿಸಿದೆ.

ದೋಸ್ತಿಗಳ ಕೈಯಲ್ಲಿ ಎಸ್‌ಐಟಿ ದಾಳ, ಬಿಜೆಪಿ ತಳಮಳ!

ಆದ್ರೆ, ಇದಕ್ಕೆ ಒಪ್ಪದ ಬಿಜೆಪಿ ಯಾವುದೇ ಕಾರಣಕ್ಕೂ SITಗೆ ಕೊಡುವುದು ಬೇಡ. ನ್ಯಾಯಾಂಗ ತನಿಖೆಗೆ ನೀಡಿ ಎಂದು ಪಟ್ಟು ಹಿಡಿದಿದೆ. ಇದ್ರಿಂದ ಪರ ವಿರೋಧ ಮಾತುಗಳು ಕೇಳಿಬಂದಿವೆ.

ಈ ಸಂಬಂಧ ಸ್ಪೀಕರ್ ರಮೇಶ್ ಕುಮಾರ್ ಅವರು ನಾಳೆ [ಬುಧವಾರ] ಮೂರು ಪಕ್ಷಗಳ ಸದನ ನಾಯಕರ ಸಭೆ ಕರೆದಿದ್ದಾರೆ.  ಈ ಸಭೆ ಬಳಿಕ ಸಭಾಧ್ಯಕ್ಷರು ಮುಂದಿನ ನಡೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. 

ಇವತ್ತು ನಡೆದ ಅಧಿವೇಶನ ಕಲಾಪದಲ್ಲಿ ಬಿಜೆಪಿಯ ನಾಯಕರು, ಸದನದಲ್ಲಿ ಚರ್ಚೆ ನಡೆಸುವ ಬದಲು ಸ್ಪೀಕರ್ ಕೊಠಡಿಗೆ ಕರೆದು ಮಾತುಕತೆ ನಡೆಸಬಹುದಿತ್ತು ಎಂಬ ಸಲಹೆಗಳನ್ನು ನೀಡಿದ್ದರು. 

ಕಲಾಪದ ಅಂತ್ಯದಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಈ ಸಲಹೆಯನ್ನು ಸ್ವೀಕರಿಸಿದ್ದು, ಬುಧವಾರ ಬೆಳಗ್ಗೆ 10:30ಕ್ಕೆ, ಅಂದರೆ ಕಲಾಪ ಆರಂಭಕ್ಕೆ ಅರ್ಧ ಗಂಟೆ ಮುಂಚೆ ತಮ್ಮ ಕೊಠಡಿಯಲ್ಲಿ ಸಭೆ ನಡೆಸುತ್ತೇನೆಂದು ಹೇಳಿದರು. 

ಮೂರು ಪಕ್ಷಗಳಿಂದ ಯಾರ್ಯಾರು ಬರಬೇಕು ಎಂಬುದನ್ನು ತಾವೇ ತೀರ್ಮಾನಿಸಿಕೊಂಡು ಬನ್ನಿ ಎಂದೂ ತ್ರಿಪಕ್ಷಗಳಿಗೆ ಸೂಚಿಸಿದ್ದಾರೆ. 

click me!