
ಬೆಂಗಳೂರು (ಮೇ 18): ಬಿಡಸಲಾಗದ ಕಗ್ಗಂಟಾಗಿದ್ದ ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ನಿರೀಕ್ಷೆಯಂತೆ ಸೋನಿಯಾ ಗಾಂಧಿ ಹಸ್ತಕ್ಷೇಪದಿಂದ ಪರಿಹಾರ ಸಿಕ್ಕಿದ್ದು, 30-30 ತಿಂಗಳ ಅವಧಿಗೆ ಕಾಂಗ್ರೆಸ್ ಪ್ರಬಲ ನಾಯಕ, ಮಾಜಿ ಮುಖ್ಯಮಂತ್ರಿ, ವಿಧಾನಸಭಾ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ತೃಪ್ತದಾಯಕ ಹೊಂದಾಣಿಕೆ ಎನ್ನದೇ ಹೋದರೂ ಉಭಯ ನಾಯಕರು ಈ ಸಂಧಾನ ಸೂತ್ರಕ್ಕೆ ಸಮ್ಮತಿಸಿದ್ದು ಭಾನುವಾರ (ಮೇ 20) ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.
ತಾವೇ ಸಿಎಂ ಆಗಬೇಕು, ಅಧಿಕಾರ ಹಂಚಿಕೆಯಾದರೂ ಮೊದಲ ಅವಧಿಯಲ್ಲಿಯೇ ಅಧಿಕಾರ ಸಿಗಬೇಕೆಂದು ಬಿಗಿಪಟ್ಟು ಹಿಡಿದ ಶಿವಕುಮಾರ್ ಅವರ ಮನವೊಲಿಸಲು ರಾಹುಲ್ ಗಾಂಧಿ ಸೇರಿ ಹೈಕಮಾಂಡ್‌ನ ಎಲ್ಲ ನಾಯಕರೂ ಹರಸಾಹಸ ನಡೆಸಿದ್ದರು. ಒಂದು ಹಂತದಲ್ಲಿ ಪ್ರಿಯಾಂಕಾ ಗಾಂಧಿ ಕೂಡ ರಂಗ ಪ್ರವೇಶ ಮಾಡಿ, ಶಿವಕುಮಾರ್ ಅವರನ್ನು ಓಲೈಸಲು ಯತ್ನಿಸಿದ್ದರು. ಆದರೆ, ಇದ್ಯಾವುದಕ್ಕೂ ಬಗ್ಗದ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಯನ್ನು ನನಗೆ ನೀಡಿದ್ದ ಸೋನಿಯಾ ಗಾಂಧಿ ಅವರ ಜತೆ ಚರ್ಚಿಸದೆ ಯಾವುದೇ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ವರಿಷ್ಠರಿಗೆ ತಿಳಿಸಿದರು. ಹೀಗಾಗಿ, ಇದೀಗ ಸೋನಿಯಾ ರಂಗ ಪ್ರವೇಶ ಮಾಡುವುದು ಅನಿವಾರ್ಯವಾಗಿತ್ತು. ಅಷ್ಟಕ್ಕೂ ಸೋನಿಯಾ ಇಬ್ಬರನ್ನೂ ಕನ್ವೀನ್ಸ್ ಮಾಡುವಲ್ಲಿ ಸಫಲವಾಗಿದ್ದು ಹೇಗೆ?
ಸಿದ್ದರಾಮಯ್ಯ ಸಿಎಂ ಆಗಿದ್ದಾಯ್ತು, ಜಮೀರ್ ಡಿಸಿಎಂ ಆಗಲಿ
ಗಾಂಧಿ ಕುಟುಂಬಕ್ಕೆ ಸದಾ ನಿಷ್ಠರಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಲು, ರಾಷ್ಟ್ರದಲ್ಲಿಯೇ ಪಕ್ಷಕ್ಕೆ ಭರವಸೆ ಮಾಡುವಂತೆ ಮಾಡಿದ ಕರ್ನಾಟಕ ಚುನಾವಣೆ ಫಲಿತಾಂಶದಲ್ಲಿ ಡಿ.ಕೆ.ಶಿವಕುಮಾರ್ ಕಾಣಿಕೆ ಇರುವುದು ಸುಳ್ಳಲ್ಲ. ಅದಕ್ಕೆ ಸರಿಯಾಗಿ ಎರಡನೇ ಅವಧಿಯಲ್ಲಿ ಡಿಕೆಶಿಯನ್ನು ಸಿಎಂ ಮಾಡುವುದಾಗಿ ಹೇಳುವುದಲ್ಲದೇ, ಕೆಲವು ಶರತ್ತುಗಳನ್ನು ಈಡೇರಿಸುವ ಭರವಸೆಯನ್ನು ಸೋನಿಯಾ ಕರೆ ಮಾಡಿ ನೀಡಿದ್ದರಿಂದ ಶಿವಕುಮಾರ್ ಸಂಧಾನ ಸೂತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬುಧವಾರ ಇಡೀ ದಿನ ದೆಹಲಿಯಲ್ಲಿ ಹಲವು ಸುತ್ತಿನ ಹೈವೋಲ್ಟೇಜ್ ಸಭೆಗಳು ನಡೆದಿದ್ದವು. ರಾಜ್ಯ ಕಾಂಗ್ರೆಸ್‌ನ ಮೇರು ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವಿನ ‘ಮುಖ್ಯಮಂತ್ರಿ ಹುದ್ದೆ ದಂಗಲ್’ ಪರಿಹಾರಕ್ಕೆ ಕಾಂಗ್ರೆಸ್ ಹೈಕಮಾಂಡ್‌ನ ದಿಗ್ಗಜರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್ ಅವರು ಹಲವು ಸುತ್ತಿನ ಹೈವೋಲ್ಟೇಜ್ ಸಭೆಗಳನ್ನು ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಪೂರ್ಣಾವಧಿ ಮುಖ್ಯಮಂತ್ರಿ ಹುದ್ದೆಗೆ ಇಬ್ಬರೂ ನಾಯಕರು ಪಟ್ಟು ಬಿಡದೇ ಹಠ ಹಿಡಿದಿದ್ದರು. ರಾಹುಲ್ ಗಾಂಧಿ ಅವರೇ ಖುದ್ದಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಒಂದು ಹಂತದಲ್ಲಿ ‘ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಲು ನಿರ್ಧರಿಸಿದೆ ಹಾಗೂ ಉಪ ಮುಖ್ಯಮಂತ್ರಿ ಹುದ್ದೆ ಒಪ್ಪುವಂತೆ ಡಿ.ಕೆ.ಶಿವಕುಮಾರ್ ಮನವೊಲಿಸುವ ಪ್ರಯತ್ನ ನಡೆದಿದೆ’ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ, ಸಿದ್ದರಾಮಯ್ಯ ಬಣ ಸಂಭ್ರಮಾಚರಣೆಯಲ್ಲಿ ತೊಡಗುವಂತೆಯೂ ಮಾಡಿತ್ತು.
ಮೇ 18ರ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಹೊಸ ಸಿಎಂ ಘೋಷಣೆ
ಆದರೆ, ಮನವೊಲಿಕೆ ವೇಳೆ ಡಿ.ಕೆ.ಶಿವಕುಮಾರ್ ತಾವೇ ಮುಖ್ಯಮಂತ್ರಿಯಾಗಬೇಕು ಎಂದು ಗಟ್ಟಿಯಾಗಿ ಪಟ್ಟು ಹಿಡಿದ ಕಾರಣ ತಡರಾತ್ರಿವರೆಗೂ ಹಲವು ಸುತ್ತಿನ ಸಭೆ ನಡೆದರೂ ಯಾವುದೇ ಫಲಿತಾಂಶ ಕಾಣಲಿಲ್ಲ. ಶಿವಕುಮಾರ್ ಪೂರ್ಣ ಅವಧಿಗೆ ತಾವೇ ಮುಖ್ಯಮಂತ್ರಿಯಾಗಬೇಕು ಎಂಬ ಪಟ್ಟು ಸಡಿಲಿಸಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ಸಿದ್ದರಾಮಯ್ಯ ಅವರಿಗೆ ಯಾವ ಸ್ಥಾನ ನೀಡಬೇಕು ಎಂಬ ಪ್ರಶ್ನೆಗೆ ಹೈಕಮಾಂಡ್ ಬಳಿ ಯಾವುದೇ ಉತ್ತರವಿಲ್ಲದ ಕಾರಣ ಅಧಿಕಾರ ಹಂಚಿಕೆ ಫಾರ್ಮುಲಾವನ್ನು ಉಭಯ ನಾಯಕರಿಗೆ ನೀಡುವ ಮನಸ್ಥಿತಿಯಲ್ಲಿ ಹೈಕಮಾಂಡ್ ಇತ್ತು. ಮೊದಲ ಅವಧಿಗೆ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಹೈಕಮಾಂಡ್‌ನಲ್ಲಿ ಚರ್ಚೆ ನಡೆದಿದ್ದರೂ, ಶಿವಕುಮಾರ್ ಅಧಿಕಾರ ಹಂಚಿಕೆಯಾದರೂ ತಾವೇ ಮೊದಲು ಸಿಎಂ ಆಗಬೇಕೆಂಬ ಪಟ್ಟು ಬಿಟ್ಟಿರಲಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.