
ಬೆಂಗಳೂರು : ಸಚಿವ ಸಂಪುಟ ವಿಸ್ತರಣೆ ವಿಳಂಬ, ಕ್ಷೇತ್ರಗಳಿಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ಹಾಗೂ ರಾಜ್ಯ ನಾಯಕತ್ವವು ತಮ್ಮ ಬೇಡಿಕೆಗಳ ಬಗ್ಗೆ ತೋರುತ್ತಿರುವ ಅಸೀಮ ನಿರ್ಲಕ್ಷ್ಯದಿಂದ ಬೇಸತ್ತಿರುವ ಕಾಂಗ್ರೆಸ್ನ ಕೆಲ ಶಾಸಕರು ಬೆಳಗಾವಿ ವಿಧಾನಮಂಡಲ ಅಧಿವೇಶನದಿಂದ ದೂರವುಳಿಯುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸುವ ಪ್ರಯತ್ನಕ್ಕೆ ಮುಂದಾ ಗಿದ್ದಾರೆ.
ಉಪ ಚುನಾವಣೆ ನಂತರ ಸಂಪುಟ ವಿಸ್ತರಣೆ ಮಾಡುವುದಾಗಿ ನೀಡಿದ್ದ ಭರವಸೆ ಇದೀಗ ಹುಸಿ ಹೋಗಿದೆ. ಬೆಳಗಾವಿ ಅಧಿವೇಶನ ಪೂರ್ಣಗೊಳ್ಳುವವರೆಗೂ ವಿಸ್ತರಣೆ ಸಾಧ್ಯತೆ ಕಡಿಮೆ ಎಂಬ ಸೂಚನೆ ದೊರಕಿರುವ ಹಿನ್ನೆಲೆಯಲ್ಲಿ ಕೆಲ ಶಾಸಕರು ಅಸಮಾಧಾನಗೊಂಡಿದ್ದು, ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ಸಂದೇಶ ರವಾನಿಸಲು ಮುಂದಾಗಿದ್ದಾರೆ.
‘ಸಮ್ಮಿಶ್ರ ಸರ್ಕಾರದ ನೆಪದಲ್ಲಿ ಕಾಂಗ್ರೆಸ್ ಪಕ್ಷ ಕೆಲವೇ ವ್ಯಕ್ತಿಗಳ ಹಿಡಿತಕ್ಕೆ ಸಿಲುಕಿದೆ. ಪಕ್ಷಕ್ಕಾಗಿ ದುಡಿದ ಹಾಗೂ ಪಕ್ಷದ ಕಟ್ಟಿದ ಹಿರಿಯ ಶಾಸಕರನ್ನು ನಿರ್ಲಕ್ಷಿಸಲಾಗುತ್ತಿದೆ. ನಾವು ಎಷ್ಟೇ ಪಕ್ಷ ನಿಷ್ಠರು ಎಂದರೂ ಇಂತಹ ಪರಿಸ್ಥಿತಿಯಲ್ಲಿ ಬೇರೆಯೇ ಭಾವನೆಗಳು ಬರುವುದು ಸಹಜ. ಇದಕ್ಕೆ ಆಸ್ಪದ ಮಾಡದಂತೆ ನಡೆದುಕೊಳ್ಳಬೇಕಿರುವುದು ಹಿರಿಯ ನಾಯಕ ಹೊಣೆ’ ಎಂದು ಹೆಸರು ಹೇಳಬಯಸದ ಹಿರಿಯ ಶಾಸಕರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದರು.
‘ಇನ್ನು ಯುವ ಶಾಸಕರಿಗೆ ತಮ್ಮ ಕ್ಷೇತ್ರಕ್ಕೆ ಸಮರ್ಪಕವಾಗಿ ಅನುದಾನ ದೊರೆಯುತ್ತಿಲ್ಲ ಎಂಬ ಅಸಮಾಧಾನ ತೀವ್ರವಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲಿ ಜೆಡಿಎಸ್ನ ನಾಯಕರ ಮಾತಿಗೆ ಹೆಚ್ಚು ಮನ್ನಣೆ ದೊರೆಯುತ್ತಿದೆ. ಈ ಬಗ್ಗೆ ಸತತವಾಗಿ ದೂರಿದರೂ ರಾಜ್ಯ ನಾಯಕರು ಕ್ಯಾರೆ ಎನ್ನುತ್ತಿಲ್ಲ’ ಎಂಬ ತೀವ್ರ ಅಸಮಾಧಾನವಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವಕ್ಕೆ ಸ್ಪಷ್ಟಸಂದೇಶವೊಂದನ್ನು ನೀಡಬೇಕು ಎಂದು ನಿರ್ಧರಿಸಿರುವ ಕಾಂಗ್ರೆಸ್ ಶಾಸಕರ ಗುಂಪೊಂದು ಬೆಳಗಾವಿ ಅಧಿವೇಶನದಿಂದ ದೂರವುಳಿಯುವ ಚಿಂತನೆ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.