ಕಾಂಗ್ರೆಸ್‌ ಸೇರಲು ಮುಂದಾಗಿದ್ದ ದೇವೇಗೌಡ!

By Kannadaprabha News  |  First Published Dec 25, 2019, 7:48 AM IST

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಎಸ್ ಎಂ ಕೃಷ್ಣ ಅವರ ಪುಸ್ತಕ ಬಿಡುಗಡೆಗೆ ಸಜ್ಜಾಗಿದೆ. ಈ ಪುಸ್ತಕದಲ್ಲಿ ಅನೇಕ ಕುತೂಹಲಕಾರಿ ಅಂಶಗಳಿದ್ದು, ಆಯ್ದ ಕೆಲ ವಿಚಾರಗಳು ಇಲ್ಲಿವೆ. 


ಬೆಂಗಳೂರು [ಡಿ.24]:  ಕಾಂಗ್ರೆಸ್‌ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿ ಕಾಲಕ್ರಮೇಣ ಜನತಾ ಪಕ್ಷದಲ್ಲಿ ಬೆಳೆದ ನಾಡಿನ ಹಿರಿಯ ಮುಖಂಡ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಕಾಂಗ್ರೆಸ್‌ ಸೇರ್ಪಡೆಗೆ ಎರಡು ಬಾರಿ ಮುಂದಾಗಿದ್ದರೆ?

"

Latest Videos

undefined

ಖಂಡಿತ ನಿಜ ಎನ್ನುತ್ತಾರೆ ದೇವೇಗೌಡರ ಸಮಕಾಲೀನರೂ ಆಗಿರುವ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ.

ತುರ್ತು ಪರಿಸ್ಥಿತಿ ವೇಳೆ ಒಂದು ಬಾರಿ ಹಾಗೂ ಚರಣ್‌ ಸಿಂಗ್‌ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜನತಾಪಕ್ಷದಲ್ಲಿ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಮತ್ತೊಂದು ಬಾರಿ ದೇವೇಗೌಡರು ಕಾಂಗ್ರೆಸ್‌ ಸೇರಲು ಮನಸ್ಸು ಮಾಡಿದ್ದರು ಎಂದು ಕೃಷ್ಣ ಅವರು ತಮ್ಮ ಜೀವನ ಚರಿತ್ರೆಯಲ್ಲಿ ದಾಖಲಿಸಿದ್ದಾರೆ.

ಬರುವ ಜನವರಿ 4ರಂದು ಲೋಕಾರ್ಪಣೆಯಾಗಲಿರುವ ತಮ್ಮ ಜೀವನ ಚರಿತ್ರೆ ‘ಸ್ಮೃತಿವಾಹಿನಿ’ಯಲ್ಲಿ ಈವರೆಗೆ ಬೆಳಕಿಗೆ ಬಾರದ ಅಚ್ಚರಿಯ ಹಾಗೂ ಸಂಚಲನ ಮೂಡಿಸಬಲ್ಲ ಹತ್ತು ಹಲವು ರಾಜಕೀಯ ಬೆಳವಣಿಗೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಅದರ ಮಾಹಿತಿ ಲಭ್ಯವಾಗಿದೆ.

ವಿಪಕ್ಷದಲ್ಲಿ ಒಗ್ಗಟ್ಟಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್‌ನತ್ತ:

ತುರ್ತು ಪರಿಸ್ಥಿತಿಯಲ್ಲಿ ದೇವೇಗೌಡರು ಜೈಲಿನಲ್ಲಿ ಇದ್ದರು. ಒಮ್ಮೆ ಪೆರೋಲ್‌ ಮೇಲೆ ಹೊರಗಡೆ ಬಂದರು. ಆಗ ನಡೆದ ಒಂದು ಘಟನೆ ಈಗ ಹೇಳಬೇಕಾಗಿದೆ. ಈ ಘಟನೆಗೆ ಸಾಕ್ಷಿಯಾಗಿ ಆಗ ಅಸಿಸ್ಟೆಂಟ್‌ ಕಮಿಷನರ್‌ ಆಗಿದ್ದ ಶಿವರಾಂ ಇದ್ದಾರೆ. ನಾನು ಕೈಗಾರಿಕಾ ಸಚಿವನಾಗಿದ್ದಾಗ ಅವರು ನನ್ನ ಆಪ್ತ ಕಾರ್ಯದರ್ಶಿಯಾಗಿದ್ದರು ಎಂದು ಕೃಷ್ಣ ಪ್ರಸ್ತಾಪಿಸಿದ್ದಾರೆ.

ಕೃಷ್ಣ ಅವರ ಮಾತುಗಳಲ್ಲೇ ಹೇಳುವುದಾದರೆ-

ಶಿವರಾಂ ಅವರಿಗೆ ಒಮ್ಮೆ ದೇವೇಗೌಡರು ಸಿಕ್ಕಿದ್ದರು. ನಾನು ಕೃಷ್ಣ ಅವರನ್ನು ನೋಡಬೇಕು, ಖಾಸಗಿಯಾಗಿ ಮಾತನಾಡಬೇಕು ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಶಿವರಾಂ ‘ಸರ್‌ ತಾವು ಯಾವಾಗ ಬೇಕಾದರೂ ಬನ್ನಿ’ ಎಂದಾಗ ನಾನು ಅವರನ್ನು ತುಂಬಾ ಖಾಸಗಿಯಾಗಿ ಭೇಟಿ ಮಾಡಬೇಕು ಅಂದಿದ್ದಾರೆ. ಮಧ್ಯಾಹ್ನ 1.30ರಿಂದ ಸಂಜೆ 4ರವರೆಗೆ ಯಾರೂ ಇರುವುದಿಲ್ಲ. ನೀವು ಆವಾಗ ಬನ್ನಿ ಎಂದರಂತೆ. ‘ನಾನು ಕಾರಲ್ಲಿ ಬರುವುದಿಲ್ಲ, ಆಟೋ ರಿಕ್ಷಾದಲ್ಲಿ ಬರುತ್ತೇನೆ’ ಎಂದು ಪುನಃ ದೇವೇಗೌಡರು ಹೇಳಿದ್ದಾರೆ. ಹಾಗೆ ಅವರು ಹೇಳಿದಂತೆ ಆಟೋ ರಿಕ್ಷಾದಲ್ಲಿ ನಮ್ಮ ಮನೆಗೆ ಬಂದರು.

ಸಂಕ್ರಾಂತಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಕಾಂತಿ: ಡಿಕೆಶಿಗೆ ನ್ಯೂ ಇಯರ್ ಗಿಫ್ಟ್..?...

‘ಕೃಷ್ಣ, ನನಗೆ ತುಂಬಾ ಬೇಜಾರಾಗಿದೆ. ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ. ಒಂದು ನೀತಿ ಇಲ್ಲ. ನಾನು ಕಾಂಗ್ರೆಸ್‌ ಸೇರುವ ಮನಸ್ಸು ಮಾಡಿದ್ದೇನೆ’ ಎಂದರು. ಆಗ ನಾನು, ‘ಗೌಡರೇ, ಈಗ ತಾನೆ ಮುಖ್ಯಮಂತ್ರಿ ದೇವರಾಜು ಅರಸು ಮೇಲೆ ಹದಿನೆಂಟು ಗುರುತರವಾದ ಆಪಾದನೆ ಮಾಡಿ ಇವುಗಳನ್ನು ನಾನು ರುಜುವಾತು ಮಾಡದೆ ಹೋದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ದೀರಿ. ಈಗ ನೀವು ಕಾಂಗ್ರೆಸ್‌ಗೆ ಬಂದರೆ ಜನರ ಮುಂದೆ ನಿಮ್ಮ ಘನತೆ ಏನಾಗುತ್ತದೆ? ದೇವರಾಜ ಅರಸು ಅವರನ್ನು ತೆಗೆದುಹಾಕಿ, ಆಗ ನಾವು ನಿಮ್ಮ ಜೊತೆಗೆ ಬರುತ್ತೇವೆ ಅಂತ ನೀವು ಕಂಡೀಶನ್‌ ಹಾಕಿದರೆ ಅದಕ್ಕೊಂದು ಅರ್ಥವಿದೆ. ಆಗ ನೀವು ಕಾಂಗ್ರೆಸ್‌ ಸೇರಿದರೆ ನಿಮಗೊಂದು ಘನತೆ ಬರುತ್ತದೆಯಲ್ಲವೇ’ ಎಂದೆ. ಆಗವರು ಸ್ವಲ್ಪಹೊತ್ತು ಮೌನಿಗಳಾದರು. ನಂತರ, ‘ಕೃಷ್ಣ, ನೀನು ಹೇಳುವುದರಲ್ಲಿಯೂ ಸತ್ಯ ಇದೆ, ನಾನು ಏಕಾಏಕಿ ದುಡುಕುವುದಿಲ್ಲ’ ಎಂದರು.

ಗೌಡರ ಜೊತೆ ಬೊಮ್ಮಾಯಿ ಕೂಡ ಆಸಕ್ತಿ:

ಎಂಬತ್ತರ ದಶಕದಲ್ಲಿ ಜನತಾ ಪಕ್ಷದ ಸರ್ಕಾರದ ಪ್ರಧಾನಿ ಚರಣ್‌ ಸಿಂಗ್‌ ಅವರು ಲೋಕಸಭೆಯಲ್ಲಿ ವಿಶ್ವಾಸಮತ ಪಡೆದರೆ ಮಾತ್ರ ಅವರು ಅಧಿಕಾರದಲ್ಲಿ ಮುಂದುವರೆಯಬಹುದೆಂದು ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಷರತ್ತು ವಿಧಿಸಿ ಅವರನ್ನು ಪ್ರಧಾನ ಮಂತ್ರಿ ಮಾಡಿದ್ದರು. ಅದರಂತೆ ಪ್ರಧಾನಿ ಚರಣ್‌ ಸಿಂಗ್‌ ಅವರು ತುರ್ತು ಲೋಕಸಭಾ ಅಧಿವೇಶನ ಕರೆದಿದ್ದರು. ಆದರೆ, ಚರಣ್‌ ಸಿಂಗ್‌ ಅವರು ಲೋಕಸಭೆಯನ್ನು ಎದುರಿಸದೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.

ಆ ಸಂದರ್ಭದಲ್ಲಿ ನನ್ನ ಜೊತೆ ಇದ್ದ ಕರ್ನಾಟಕದ ಜನತಾಪಕ್ಷದ ನಾಯಕರು ದಿಗ್ಭ್ರಮೆಗೊಂಡರು. ಮುಂದೇನೆಂಬುದು ಎಲ್ಲರ ಪ್ರಶ್ನೆಯಾಗಿತ್ತು. ಸೆಂಟ್ರಲ್‌ ಹಾಲ್‌ನಲ್ಲಿ ನಾವು ಕಾಫಿ ಕುಡಿಯುತ್ತಾ ಇದ್ದಾಗ ‘ದೇವಗೌಡ್ರೇ, ಬೊಮ್ಮಾಯಿ ಸಾಹೇಬರೇ, ತಾವು ಇನ್ನೂ ಏಕೆ ಜನತಾ ಪಾರ್ಟಿ ಅಂತ ಬಡಿದಾಡುತ್ತೀರಾ? ಈಗಾಗಲೇ ಕಾಂಗ್ರೆಸ್‌ ಸೇರಿರುವ ಚರಣ್‌ ಸಿಂಗ್‌ರಂತಹ ನಾಯಕರನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ. ನೀವು ನಿಮ್ಮ ರಾಜಕೀಯ ಭವಿಷ್ಯವನ್ನು ಪುನರ್‌ಚಿಂತನೆ ಮಾಡಬೇಕು’ ಎಂದು ಒತ್ತಾಯಿಸಿದೆ. ಅದಕ್ಕೆ ಅವರಿಬ್ಬರೂ ಸಮ್ಮತಿಸಿದರು. ನಂತರ ಕಾಂಗ್ರೆಸಿನ ಹಿರಿಯ ನಾಯಕರಾದ ಪ್ರಣಬ್‌ ಮುಖರ್ಜಿಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಾದರೆ ನಮ್ಮ ಸಮ್ಮತಿಯಿದೆ ಎಂದು ಅವರಿಬ್ಬರೂ ಹೇಳಿದರು. ಅಂದು ಸಂಜೆಯೇ ನಾನು ಹಾಗೂ ಲೋಕಸಭಾ ಸದಸ್ಯರಾಗಿದ್ದ ತುಮಕೂರಿನ ಕೆ.ಲಕ್ಕಪ್ಪ ಅವರು ಪ್ರಣಬ್‌ ಮುಖರ್ಜಿ ಅವರನ್ನು ಕಂಡು ಕರ್ನಾಟಕದ ಜನತಾ ಪಕ್ಷದ ನಾಯಕರ ಜೊತೆ ನನ್ನ ಮಾತುಕತೆಯ ವಿವರ ತಿಳಿಸಿದೆ. ಪ್ರಣಬ್‌ ಮುಖರ್ಜಿ ಅವರು ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಕೃಷ್ಣ ತಿಳಿಸಿದ್ದಾರೆ.

ಮಾರನೆಯ ದಿವಸ ನಾನು ತಂಗಿದ್ದ ಹೋಟೆಲ್‌ ಅಂಬಾಸಿಡರ್‌ಗೆ ದೇವೇಗೌಡ ಮತ್ತು ಬೊಮ್ಮಾಯಿ ಅವರುಗಳನ್ನು ಬರ ಹೇಳಿದೆ. ಅದೇ ಸಮಯಕ್ಕೆ ಪ್ರಣಬ್‌ ಮುಖರ್ಜಿ ಅವರು ಸಹ ಆಗಮಿಸಿದರು. ನಮ್ಮೆಲ್ಲರ ಜೊತೆ ಪ್ರಣಬ್‌ ಮುಖರ್ಜಿ ಚರ್ಚೆ ಮಾಡಿದರು. ಕೊನೆಗೆ ಇಂದಿರಾ ಗಾಂಧಿಯವರಿಗೆ ಈ ವಿಚಾರವನ್ನು ರಿಪೋರ್ಟ್‌ ಮಾಡ್ಲಾ ಎಂದು ದೇವೇಗೌಡ ಮತ್ತು ಬೊಮ್ಮಾಯಿ ಅವರನ್ನು ಪ್ರಣಬ್‌ ಮುಖರ್ಜಿ ಕೇಳಿದರು. ಅದಕ್ಕೆ ಸಮ್ಮತಿಸಿದ ಅವರಿಬ್ಬರೂ ತಾವಿಬ್ಬರೂ ಬೆಂಗಳೂರಿಗೆ ಹೋಗಿ ತಮ್ಮ ಒಡನಾಡಿಗಳನ್ನು ಸಂಪರ್ಕಿಸಿ ನಿರ್ಣಯವೊಂದನ್ನು ತಮಗೆ ಕಳುಹಿಸುತ್ತೇವೆಂದು ಹೇಳಿದರು. ಒಮ್ಮತದ ನಿರ್ಣಯಕ್ಕೆ ಅವರು ಬರಲು ಸಾಧ್ಯವಾಗದೆ ಹೋಗಿರಬಹುದು. ಸರಿಯಾಗಿ ಪ್ಲಾನ್‌ ಮಾಡಿದ್ದರೆ ವೀರೇಂದ್ರ ಪಾಟೀಲರಂತೆ ದೇವೇಗೌಡ ಮತ್ತು ಬೊಮ್ಮಾಯಿ ಅವರು ಆ ಕಾಲದಲ್ಲಿಯೇ ಕಾಂಗ್ರೆಸ್‌ ಸೇರಿಬಿಡುತ್ತಿದ್ದರು. ಅವರು ಕಾಂಗ್ರೆಸ್‌ ಮನಸ್ಥಿತಿಯಲ್ಲಿದ್ದರೆಂಬುದು ಸ್ಪಷ್ಟವಾಗುತ್ತದೆ. ಈ ಘಟನೆಯನ್ನು ಬಲ್ಲವರು ನನ್ನನ್ನು ಹೊರತುಪಡಿಸಿ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ಇದ್ದೇವೆ ಎಂದು ಕೃಷ್ಣ ನೆನಪು ಮಾಡಿಕೊಂಡಿದ್ದಾರೆ.

click me!