ಕೆಪಿಸಿಸಿ ಅಧ್ಯಕ್ಷ ಸ್ಥಾನ ರೇಸ್‌ನಲ್ಲಿ ಡಿಕೆಶಿ, ಎಂಬಿಪಾ ನಡುವೆ ಸ್ಪರ್ಧೆ

By Kannadaprabha NewsFirst Published Dec 25, 2019, 7:38 AM IST
Highlights

ಮಾಜಿ ಸಚಿವ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಎಂಬಿ ಪಾಟೀಲ್ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದೆ. 

ಬೆಂಗಳೂರು [ಡಿ.25]: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಮತ್ತು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರುಗಳ ಹೆಸರುಗಳನ್ನು ತೇಲಿಬಿಡಲಾಗಿದೆ. ಆದರೆ, ಆ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್‌ ಮತ್ತು ಮಾಜಿ ಸಚಿವ ಎಂ.ಬಿ.ಪಾಟೀಲ್‌ ನಡುವೆ ನೇರ ಸ್ಪರ್ಧೆ ನಡೆದಿದೆ.

ಉಪಚುನಾವಣೆಯಲ್ಲಿ ಪಕ್ಷಕ್ಕಾದ ನೀರಸ ಸೋಲಿನ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ಅವರು ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂದು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಹೈಕಮಾಂಡ್‌ ಸೂಚನೆ ಮೆರೆಗೆ ಕಳೆದ ವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮಧುಸೂದನ್‌ ಮಿಸ್ತ್ರಿ ಮತ್ತು ಭಕ್ತ ಚರಣದಾಸ್‌ ಅವರು ರಾಜ್ಯಕ್ಕೆ ಆಗಮಿಸಿದ್ದರು.

ರಾಜ್ಯದ 50ಕ್ಕೂ ಹೆಚ್ಚು ಪ್ರಮುಖ ನಾಯಕರ ಅಭಿಪ್ರಾಯ ಸಂಗ್ರಹಿಸಿರುವ ಮಧುಸೂದನ್‌ ಮಿಸ್ತ್ರಿ ನೇತೃತ್ವದ ಸಮಿತಿಯು ಹೈಕಮಾಂಡ್‌ಗೆ ಶಿಫಾರಸು ಮಾಡಿರುವ ವರದಿಯಲ್ಲಿ ಡಿ.ಕೆ.ಶಿವಕುಮಾರ್‌, ಕೆ.ಎಚ್‌.ಮುನಿಯಪ್ಪ ಮತ್ತು ಬಿ.ಕೆ.ಹರಿಪ್ರಸಾದ್‌ ಅವರ ಹೆಸರುಗಳಿವೆ ಎಂದು ತೇಲಿಬಿಡಲಾಗಿದೆ. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌ ಮತ್ತು ಎಂ.ಬಿ.ಪಾಟೀಲ್‌ ಅವರ ನಡುವೆ ನೇರ ಸ್ಪರ್ಧೆ ನಡೆದಿದೆ ಎಂದು ಪಕ್ಷದ ನಂಬಲರ್ಹ ಮೂಲಗಳು ತಿಳಿಸಿವೆ.

ಸಂಕ್ರಾಂತಿಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಹೊಸ ಕಾಂತಿ: ಡಿಕೆಶಿಗೆ ನ್ಯೂ ಇಯರ್ ಗಿಫ್ಟ್..?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಹೈಕಮಾಂಡ್‌ ಒಪ್ಪಿಲ್ಲ. ದೆಹಲಿಗೆ ಕರೆಸಿಕೊಂಡು ಅವರ ಮನವೊಲಿಸಿ ಆ ಸ್ಥಾನದಲ್ಲಿ ಅವರನ್ನೇ ಮುಂದುವರೆಸುವ ಆಲೋಚನೆಯಲ್ಲಿದೆ. ಹಾಗಾಗಿ ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನದಲ್ಲಿ ಮುಂದುವರೆಯುವುದರಿಂದ ಹಿಂದುಳಿದ ವರ್ಗಕ್ಕೆ ಸೇರಿದ ಬಿ.ಕೆ.ಹರಿಪ್ರಸಾದ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಇನ್ನು, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರ ಪರ ಹೈಕಮಾಂಡ್‌ಗೆ ಒಲವಿಲ್ಲ ಎನ್ನಲಾಗಿದೆ. ಹಾಗಾಗಿ, ಡಿ.ಕೆ.ಶಿವಕುಮಾರ್‌ ಮತ್ತು ಎಂ.ಬಿ.ಪಾಟೀಲ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!