ಬಿಸಿ ತಟ್ಟದಂತೆ ಸಿದ್ದರಾಮಯ್ಯ ಎಚ್ಚರಿಕೆಯ ನಡೆ! ಜಾಣ್ಮೆ ಮೆರೆದ ನಾಯಕ

By Kannadaprabha NewsFirst Published Nov 11, 2020, 7:28 AM IST
Highlights

ಮಾಜಿ ಸಿಎಂ ಸಿದ್ದರಾಮಯ್ಯ ತಮಗೆ ಬಿಸಿ ತಟ್ಟದಂತೆ ಜಾಣ್ಮೆ ಮೆರೆದಿದ್ದಾರೆ. ಉಪ ಚುನಾವಣೆ ಮುಕ್ತಾಯವಾಗಿ ಕೈಗೆ ಸೋಲುಂಟಾಗಿದ್ದು ತಾವು ತಟಸ್ಥ ದೋರಣೆಯೊಂದಿಗೆ ಬಚಾವ್ ಆಗಿದ್ದಾರೆ

ಬೆಂಗಳೂರು (ನ.11):  ಉಪ ಚುನಾವಣೆಗಳ ಫಲಿತಾಂಶ ಸಾಮಾನ್ಯವಾಗಿ ಆಡಳಿತಾರೂಢ ಪಕ್ಷದ ಪರವಾಗಿ ಇರುತ್ತದೆ ಎಂಬುದನ್ನು ಅನುಭವದಿಂದ ಬಲ್ಲ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಸೋಲಿನ ಬಿಸಿ ತಮಗೆ ನೇರವಾಗಿ ಮುಟ್ಟದಂತೆ ಆರಂಭದಿಂದಲೂ ಎಚ್ಚರಿಕೆ ವಹಿಸಿದಂತಿದೆ.

ವಿಶೇಷವಾಗಿ ರಾಜರಾಜೇಶ್ವರಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಂಪೂರ್ಣವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್‌ ಅವರ ನಿರ್ಧಾರವನ್ನು ಬೆಂಬಲಿಸಿದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಸಂಸದ ಸುರೇಶ್‌ ಅವರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದರಿಂದ ಹಾಗೂ ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದರಿಂದ ಅಭ್ಯರ್ಥಿ ಆಯ್ಕೆ ಹೊಣೆಗಾರಿಕೆ ಅವರದ್ದೇ ಆಗಿತ್ತು. ಸಿದ್ದರಾಮಯ್ಯ ಅವರು ಸಹ ಇದನ್ನು ಸಹಜವೆಂಬಂತೆ ಬೆಂಬಲಿಸಿದ್ದರು.

ಇನ್ನು ಶಿರಾ ಕ್ಷೇತ್ರದ ಆಯ್ಕೆ ವಿಚಾರದಲ್ಲಿ ಪಕ್ಷದ ಎಲ್ಲ ನಾಯಕರು ಸೇರಿ ಜಯಚಂದ್ರ ಅವರನ್ನು ಆಯ್ಕೆ ಮಾಡಿ ಹೈಕಮಾಂಡ್‌ಗೆ ಹೆಸರು ಸೂಚಿಸಿದ್ದರು. ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಅವರು ಈ ನಿರ್ಧಾರವನ್ನು ವಿರೋಧಿಸಿ ಹೊಸಬರನ್ನು ಆಯ್ಕೆ ಮಾಡಬೇಕಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇದು ರಾಜ್ಯದ ಎಲ್ಲ ನಾಯಕರು ಒಪ್ಪಿ ಸೂಚಿಸಿದ್ದ ಹೆಸರಾದ ಕಾರಣ ಹೈಕಮಾಂಡ್‌ ಒಪ್ಪಬೇಕಾಗಿ ಬಂದಿತ್ತು.

ಡಿಕೆಶಿ ಹೊಸ ಸವಾಲಿಗೆ ಸಿದ್ಧತೆ : ಭವಿಷ್ಯದ ಬಗ್ಗೆ ಮಾಸ್ಟರ್ ಪ್ಲಾನ್ ...

ಹೀಗೆ ಅಭ್ಯರ್ಥಿಯಾದ ಜಯಚಂದ್ರ ಅವರಿಗೆ ಕ್ಷೇತ್ರದಲ್ಲಿ ಪ್ರಭಾವಿಯಾಗಿರುವ ಹಾಗೂ ಸಿದ್ದರಾಮಯ್ಯ ಅವರ ಬೆಂಬಲಿಗ ಕೆ.ಎನ್‌.ರಾಜಣ್ಣ ಅವರ ಸಹಕಾರ ಸಿಗುವ ಬಗ್ಗೆ ಅನುಮಾನ ಮೂಡಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಧ್ಯಸ್ಥಿಕೆ ವಹಿಸುವಂತೆ ಸಿದ್ದರಾಮಯ್ಯ ಅವರನ್ನು ಕೋರಿದ್ದರು. ಅದರಂತೆ ನಡೆದುಕೊಂಡ ಸಿದ್ದರಾಮಯ್ಯ ರಾಜಣ್ಣ ಅವರನ್ನು ಕರೆಸಿ ಜಯಚಂದ್ರಗೆ ಬೆಂಬಲ ನೀಡುವಂತೆ ಸೂಚಿಸಿದ್ದರು.

ಪ್ರಚಾರದ ಸಂದರ್ಭದಲ್ಲೂ ಸಹ ಪಕ್ಷ ಸೂಚಿಸಿದ ದಿನಾಂಕಗಳಂದೇ ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರವನ್ನು ಕೈಗೊಂಡರು. ಹೀಗೆ ಮೇಲುನೋಟಕ್ಕೆ ಸಿದ್ದರಾಮಯ್ಯ ಅವರು ಉಪ ಚುನಾವಣೆಯಲ್ಲಿ ಪರಿಪೂರ್ಣವಾಗಿ ತೊಡಗಿಕೊಂಡಿದ್ದರು.

ಆದರೆ, ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ಅವರು ಸಿದ್ದರಾಮಯ್ಯ ಅವರ ಪುತ್ರ ಹಾಗೂ ಶಾಸಕ ಡಾ.ಯತೀಂದ್ರ ಅವರ ಸ್ನೇಹಿತರು ಹಾಗೂ ಕಾಂಗ್ರೆಸ್‌ನಿಂದ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯೂ ಆಗಿದ್ದರು. ಪಕ್ಷದ ಟಿಕೆಟ್‌ ದೊರೆಯದ ಹಿನ್ನೆಲೆಯಲ್ಲಿ ಕಡೆ ಕ್ಷಣದಲ್ಲಿ ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ್ದರು. ಇದರಲ್ಲಿ ಸಿದ್ದರಾಮಯ್ಯ ಅವರ ತಂತ್ರಗಾರಿಕೆ ಇದೆ ಎಂದು ಆರೋಪಿಸಲಾಗುತ್ತಿದೆಯಾದರೂ ಮೇಲುನೋಟಕ್ಕೆ ಅಂತಹ ಯಾವ ಅನುಮಾನವೂ ಬರದಂತೆ ಸಿದ್ದರಾಮಯ್ಯ ಅವರು ನಡೆದುಕೊಂಡಿದ್ದಾರೆ.

click me!