ತಮ್ಮ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ: ಸಿದ್ದರಾಮಯ್ಯ
ಮದ್ದೂರು(ನ.22): ನನ್ನ ಕಾಲದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡುತ್ತಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧವೇ ನಾವು ದೂರು ಕೊಟ್ಟಿದ್ದೇವೆ. ಹೀಗಾಗಿ ಯಾರ ಮೇಲೆ ಅವರು ತನಿಖೆ ಮಾಡಿಸುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ತಾಲೂಕಿನ ಶಿವಪುರದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಹಿಂದಿನ ಸರ್ಕಾರದಲ್ಲಿ ತಪ್ಪು ಮಾಡಿದ್ದಾರೆಂದರೆ ನೀವೂ ಅದನ್ನೇ ಮಾಡಬೇಕಾ? ಭ್ರಷ್ಟಾಚಾರ ಮಾಡಿದ್ದಾರೆಂದು ಆರೋಪಿಸುತ್ತಲೇ ನೀವೂ ಅದೇ ರೀತಿಯಲ್ಲಿ ನಡೆದುಕೊಂಡರೆ ಸರ್ಕಾರವನ್ನೇಕೆ ನಡೆಸುತ್ತೀರಿ ಎಂದು ಕಿಡಿಕಾರಿದರು.
ಮತದಾರರ ಪಟ್ಟಿ ವಿವಾದ: ಇದು ಕೆಜಿಎಫ್, ಕಾಂತಾರದ ಕಥೆ ಅಲ್ಲ ಎಂದ ಸಿದ್ದರಾಮಯ್ಯ
ತಮ್ಮ ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ಳಲು ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ. ಹಿಂದಿನ ಸರ್ಕಾರ ಕೊಲೆ ಮಾಡಿದ್ದರೆ ನೀವೂ ಕೊಲೆ ಮಾಡುತ್ತೀರಾ? ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನೀವು ವಿರೋಧ ಪಕ್ಷದಲ್ಲಿದ್ದಿರಿ. ಆ ಸಂದರ್ಭದಲ್ಲಿ ಸುಮ್ಮನಿದ್ದು, ಈಗ ಆ ವಿಚಾರ ಪ್ರಸ್ತಾಪ ಮಾಡುತ್ತಿರುವುದನ್ನು ನೋಡಿದರೆ ತಮ್ಮ ತಪ್ಪನ್ನು ಮುಚ್ಚಿಹಾಕಿಕೊಳ್ಳಲು ಕಾಂಗ್ರೆಸ್ ವಿರುದ್ಧ ಇಲ್ಲ, ಸಲ್ಲದ ಆರೋಪ ಮಾಡುತ್ತಿರುವಂತಿದೆ ಎಂದು ದೂರಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬೊಮ್ಮಾಯಿ ಆಡಳಿತಕ್ಕೆ ಶಹಬಾಸ್‌ಗಿರಿ ಕೊಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಬೊಮ್ಮಾಯಿ ಆಡಳಿತಕ್ಕೆ ನಡ್ಡಾ ಅಲ್ಲ ರಾಜ್ಯದ ಜನ ಶಹಬ್ಬಾಸ್‌ಗಿರಿ ಕೊಡಬೇಕು ಎಂದು ಕಾಲೆಳೆದರು.