ಯಡಿಯೂರಪ್ಪ ಸಿಎಂ ಆಗಿ ಇರಬೇಕಾ?ಸಿದ್ದರಾಮಯ್ಯ| ಕೊರೋನಾ ನಿರ್ವಹಣೆಗೆ ಬಿಜೆಪಿ ವಿಫಲ| ಇಲ್ಲಿದ್ದು ಚೂರಿ ಹಾಕುವವರು ಹೊರಗೆ ಹೋಗಿ ನೇರ ಫೈಟ್ ಮಾಡಿ| ಕೊರೋನಾ ನಿಯಂತ್ರಣದಲ್ಲಿ ಭ್ರಷ್ಟಾಚಾರ|
ಹುಬ್ಬಳ್ಳಿ(ಅ.22): ಸರ್ಕಾರದಲ್ಲಿ ದುಡ್ಡು ಇಲ್ಲ ಎಂದರೆ ಅಧಿಕಾರ ಬಿಟ್ಟು ಕೆಳಗಿಳಿಯಿರಿ. ನಾವು ಅಧಿಕಾರಕ್ಕೆ ಬರುತ್ತೇವೆ. ದುಡ್ಡನ್ನು ಹೇಗೆ ಜನರೇಟ್ ಮಾಡಬೇಕು ಎಂಬುದು ನಮಗೆ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಅತಿವೃಷ್ಟಿಯಿಂದ ತೊಂದರೆ ಅನುಭವಿಸಿದ್ದರೂ ಪರಿಹಾರ ಕೊಟ್ಟಿಲ್ಲ. ಬರೀ ಬುರುಡೆ ಬಿಡ್ತಾರೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಇರಬೇಕಾ ಎಂದು ಪ್ರಶ್ನಿಸಿದರು. ಇಂತಹ ಕೆಟ್ಟ ಸರ್ಕಾರವನ್ನು ನಾನ್ಯಾವತ್ತೂ ನೋಡಿಲ್ಲ. ಏನೇ ಕೇಳಿದರೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಅಧಿಕಾರ ಬಿಟ್ಟು ಕೆಳಕ್ಕಿಳಿಯಲಿ. ನಾವು ಬರುತ್ತೇವೆ. ದುಡ್ಡನ್ನು ಹೇಗೆ ಜನರೇಟ್ ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದರು.
2014 ಹಾಗೂ 2019ರಲ್ಲಿ ಮೋದಿ ಮೋದಿ ಎಂದು ಯುವಕರು ಬಿಜೆಪಿಗೆ ಮತ ಹಾಕಿದರು. ಮತ ಹಾಕಿದವರಿಗೆ ಮೋದಿ ಮೂರು ನಾಮ ಹಾಕಿದರು. ಜಿಡಿಪಿ ಬಿದ್ದು ಹೋಗಿದೆ. ಸಂಬಳ ನೀಡಲು ಸರ್ಕಾರದ ಬಳಿ ದುಡ್ಡಿಲ್ಲ. ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೊಡುತ್ತಿಲ್ಲ. ಜಿಎಸ್‌ಟಿ ಪರಿಹಾರ ನಿಧಿ ಈ ವರೆಗೂ ಕೊಟ್ಟಿಲ್ಲ. ಎಲ್ಲವೂ ಅವೈಜ್ಞಾನಿಕ ಯೋಜನೆಗಳನ್ನು ಜಾರಿಗೊಳಿಸಿದರು ಎಂದರು.
ಸಿಎಂ ವೈಮಾನಿಕ ಸಮೀಕ್ಷೆಗೆ ಸಿದ್ದು ಕಿಡಿ: 'ನಾನು ಕಾರ್‌ನಲ್ಲೇ ಪ್ರವಾಸ ಮಾಡಿ ನೊಂದವರ ಅಳಲು ಕೇಳ್ತೇನೆ'
ಕೊರೋನಾ ವಿಫಲ:
ಕೊರೋನಾ ವಿಷಯದಲ್ಲೂ ಬಿಜೆಪಿ ಸರ್ಕಾರ ಎಡವಿದೆ. ಮಂಗಳವಾರ ಪ್ರಧಾನಿ ಮೋದಿ ಭಾಷಣ ಮಾಡಿ ಮಾಸ್ಕ್ ಹಾಕಿಕೊಳ್ಳಿ, ದೂರ ದೂರ ಇರಿ ಎಂದು ಹೇಳಿದರು. ಕೊರೋನಾ ತಡೆಗಟ್ಟಿಅಂತಹ ಕೇಳಿದರೆ, ದೀಪ ಹಚ್ಚಿ, ಗಂಟೆ, ಜಾಗಟೆ ಬಾರಿಸಿ ಎನ್ನುತ್ತಾರೆ. ಯಾವ ಶತಮಾನದಲ್ಲಿದ್ದೇವೆ ನಾವೆಲ್ಲ? ಇದೆಲ್ಲ ಅವೈಜ್ಞಾನಿಕ ಎಂದು ನುಡಿದರು.
ಕೊರೋನಾ ನಿಯಂತ್ರಣದಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ ಎಂದು ಆರೋಪ ಮಾಡಿದೆ. 4 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. 2 ಸಾವಿರ ಕೋಟಿ ಲಂಚ ಹೊಡೆದಿದ್ದಾರೆ ಅಯೋಗ್ಯರು ಎಂದು ಕಿಡಿಕಾರಿದರು.
ಪ್ರಜ್ಞಾವಂತರಾರಯರೂ ಬಿಜೆಪಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದ ಅವರು, ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಮುಖಂಡರಿಗೆ ಕರೆ ನೀಡಿದರು.
ಚೂರಿ ಹಾಕೋರು ಹೊರಹೋಗಿ:
ಇಲ್ಲಿದ್ದು ಚೂರಿ ಹಾಕೋದು ಬದಲು, ಹೊರಗಡೆಯಿಂದಲೇ ನೇರ ನೇರ ಫೈಟ್ ಮಾಡೋಣ. ನಮ್ಮ ವೈರಿ ಯಾರು ಅಂತಾ ಗೊತ್ತಾಗುತ್ತದೆ. ಹಿತಶತ್ರುಗಳ ಬಗ್ಗೆ ಎಚ್ಚರ ಇರಬೇಕು ಎಂದು ಹೇಳುವ ಮೂಲಕ ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳ ಬಗ್ಗೆಯೂ ಸೂಚ್ಯವಾಗಿ ಎಚ್ಚರಿಕೆ ನೀಡಿದರು.
ಮಾಜಿ ಸಚಿವ ಸತೀಶ ಜಾರಕಿಹೊಳಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಸದಸ್ಯರಾದ ನಾಗರಾಜ ಛಬ್ಬಿ, ವೀರಣ್ಣ ಮತ್ತಿಗಟ್ಟಿ, ಶಾಸಕರಾದ ಕುಸುಮಾವತಿ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವ ವಿನಯ್ ಕುಲಕರ್ಣಿ, ಕಾಂಗ್ರೆಸ್ ಅಭ್ಯರ್ಥಿ ಆರ್.ಎಂ. ಕುಬೇರಪ್ಪ, ಮುಖಂಡರಾದ ಎಫ್.ಎಚ್.ಜಕ್ಕಪ್ಪನವರ, ಸದಾನಂದ ಡಂಗನವರ, ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರು, ಅನಿಲಕುಮಾರ ಪಾಟೀಲ, ಮೋಹನ ಹಿರೇಮನಿ, ರಾಜಶೇಖರ ಮೆಣಸಿನಕಾಯಿ, ವಿನೋದ ಅಸೂಟಿ, ಮುತ್ತಣ್ಣ ಶಿವಳ್ಳಿ, ರಜತ್ ಉಳ್ಳಾಗಡ್ಡಿಮಠ ಸೇರಿದಂತೆ ಹಲವು ಮುಖಂಡರಿದ್ದರು.