ಸವಾಲು ಹಾಕ್ತೇನೆ, ಯತ್ನಾಳ ಸಿಎಂ ಆಗಲ್ಲ: ರೇಣುಕಾಚಾರ್ಯ| ಮಂತ್ರಿ ಸ್ಥಾನ ಸಿಗದ್ದಕ್ಕೆ ನಾಲಿಗೆ ಹರಿಬಿಟ್ಟ ಬಸನಗೌಡ ಅವರು ಕೂಡಲೇ ಕ್ಷಮೆ ಕೇಳಬೇಕು| ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ|
ಬೆಂಗಳೂರು(ಅ.22): ಬಿಜೆಪಿ ನಾಯಕತ್ವದ ಬದಲಾವಣೆ ಕುರಿತು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹರಿಹಾಯ್ದಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ‘ಸಚಿವ ಸ್ಥಾನ ನೀಡದ ಕಾರಣಕ್ಕಾಗಿ ಆ ರೀತಿಯಾಗಿ ನಾಲಿಗೆಯನ್ನು ಹರಿಬಿಟ್ಟಿದ್ದಾರೆ. ತಕ್ಷಣ ಬಹಿರಂಗ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಯತ್ನಾಳ್ ತಿರುಕನ ಕನಸು ಕಾಣಬೇಡಿ. ನೀವು ಮುಖ್ಯಮಂತ್ರಿಯಾಗುವುದಿಲ್ಲ. ನಾನು ಸವಾಲು ಹಾಕುತ್ತೇನೆ’ ಎಂದು ಹೇಳಿದರು.
ಯತ್ನಾಳ್ ಉಚ್ಚಾಟನೆ ಮಾಡಲು ಶಿಫಾರಸ್ಸು ಮಾಡಿದ್ದೇನೆ: ಸಚಿವ ಈಶ್ವರಪ್ಪ
‘ಸಚಿವ ಸ್ಥಾನ ಸಿಗದ ಕಾರಣಕ್ಕಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ನಾಯಕತ್ವ ಕುರಿತು ನೀಡಿರುವ ಹೇಳಿಕೆಗಳು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂಥವುಗಳು. ಜನರ ಮತ್ತು ಸಮಾಜದ ದೃಷ್ಟಿಯಲ್ಲಿ ವಿಲನ್ ಆಗಿದ್ದಾರೆ. ಯತ್ನಾಳ್ ಅವರು ಹಿರಿಯರಾಗಿದ್ದು, ಈ ರೀತಿ ಹೇಳಿಕೆ ನೀಡಬಾರದು. ಚುನಾವಣೆ ವೇಳೆ ಇಂತಹ ಹೇಳಿಕೆಗಳಿಂದ ಕಾರ್ಯಕರ್ತರಿಗೆ ಗೊಂದಲವಾಗಲಿದೆ. ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇದನ್ನು ಸಹಿಸದೆ ಮಾತನಾಡುತ್ತಿದ್ದಾರೆ. ಮನಬಂದಂತೆ ಮಾತನಾಡಿದರೆ ಜನರು ಬುದ್ಧಿ ಭ್ರಮಣೆಯಾಗಿದೆ ಎಂದು ಭಾವಿಸುತ್ತಾರೆ’ ಎಂದರು.