
ಬೆಂಗಳೂರು [ಅ.27]: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ನಿವಾಸ ನೀಡುವ ಸಂಬಂಧ ನಡೆಯುತ್ತಿದ್ದ ಜಟಾಪಟಿ ಕೊನೆಗೂ ಅಂತ್ಯಗೊಂಡಿದ್ದು, ರಾಜ್ಯ ಸರ್ಕಾರ ಅಧಿಕೃತವಾಗಿ ಬೇರೆ ನಿವಾಸವನ್ನು ಮಂಜೂರು ಮಾಡಿದೆ.
ಕಳೆದ ಆರು ವರ್ಷಗಳಿಂದ ವಾಸ್ತವ್ಯ ಮಾಡುತ್ತಿದ್ದ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲೇ ಮುಂದುವರಿಯಲು ಅವಕಾಶ ನೀಡಬೇಕೆಂದು ಮಾಡಿದ್ದ ಮನವಿಯನ್ನು ಒಪ್ಪಿಕೊಳ್ಳದ ಸರ್ಕಾರ ಇದಕ್ಕೆ ಬದಲಾಗಿ ರೇಸ್ ಕೋರ್ಸ್ ರಸ್ತೆಯಲ್ಲಿ ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ವಾಸವಿದ್ದ ನಿವಾಸವನ್ನು ನೀಡುವುದಾಗಿ ತಿಳಿಸಿ, ಮಂಜೂರು ಮಾಡಿತ್ತು. ಆದರೆ ಇದಕ್ಕೆ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸದೇ, ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಎಚ್.ಡಿ. ರೇವಣ್ಣ ಅವರಿಗೆ ಮಂಜೂರಾಗಿದ್ದ ನಿವಾಸವನ್ನು ನೀಡಬೇಕೆಂದು ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರ ಮನವಿಯಂತೆ ಸರ್ಕಾರ ಈಗ ‘ನಂ. 1 ಕುಮಾರ ಕೃಪ ಪೂರ್ವ’ ಮಂಜೂರು ಮಾಡಿದೆ.
ಕಾವೇರಿ ಮನೆಗೆ ಪಟ್ಟು: ಬೆಳವಣಿಗೆ ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ‘ಕಾವೇರಿ’ ಬದಲು ರೇಸ್ ಕೋರ್ಸ್ ರಸ್ತೆಯಲ್ಲಿರುವ ‘ಅದೃಷ್ಟದ ಮನೆ’ಯಲ್ಲಿ ವಾಸ್ತವ್ಯ ಹೂಡಲು ಸಜ್ಜುಗೊಳಿಸಿದ್ದರು. ಸರ್ಕಾರ ಅಧಿಕೃತವಾಗಿ ಈ ನಿವಾಸವನ್ನು ಮಂಜೂರು ಮಾಡಿತ್ತು.
‘ಕಾವೇರಿ’ ನಿವಾಸ ಅಧಿಕೃತವಾಗಿ ಹಿಂದೆ ಸಚಿವರಾಗಿದ್ದ ಕೆ.ಜೆ. ಜಾಜ್‌ರ್ ಅವರಿಗೆ ಮಂಜೂರಾಗಿದ್ದರೂ ಸಿದ್ದರಾಮಯ್ಯ ಅವರೇ ‘ಕಾವೇರಿ’ಯಲ್ಲಿ ವಾಸವಾಗಿದ್ದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ನಂತರ ಮೈತ್ರಿ ಸರ್ಕಾರ ಬಂದಾಗಲೂ ಸಹ ಅಲ್ಲಿಯೇ ಇದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷನಾಯಕರಾಗುತ್ತಿದ್ದಂತೆ ಕಾವೇರಿಯಲ್ಲೇ ಮುಂದುವರೆಯಲು ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ನಡುವೆ ಯಡಿಯೂರಪ್ಪ ಅವರು ‘ಅದೃಷ್ಟದ ನಿವಾಸ’ದ ಬದಲು ‘ಕಾವೇರಿ’ಯಲ್ಲಿ ಉಳಿದುಕೊಳ್ಳುವುದಾಗಿ ಹೇಳಿದಾಗ ಸಂಬಂಧಪಟ್ಟಇಲಾಖೆ (ಡಿಪಿಎಆರ್) ಒಪ್ಪಿಗೆ ಸೂಚಿಸಿ, ಅದೃಷ್ಟದ ನಿವಾಸವನ್ನು ಸಿದ್ದರಾಮಯ್ಯ ಅವರಿಗೆ ಮಂಜೂರು ಮಾಡಿತು.
ಆದರೆ ಸಿದ್ದರಾಮಯ್ಯ ತಮಗೆ ಈ ನಿವಾಸ ಬೇಡ, ಬದಲಾಗಿ ಕುಮಾರಕೃಪ ರಸ್ತೆ (ಗಾಂಧಿ ಭವನ) ರಸ್ತೆಯಲ್ಲಿ ಎಚ್.ಡಿ. ರೇವಣ್ಣ ಅವರು ವಾಸವಿದ್ದ ನಿವಾಸವನ್ನು ನೀಡುವಂತೆ ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.