ದಲಿತರ ಬಗ್ಗೆ ನಿರ್ಮಲಾ ಮೊಸಳೆ ಕಣ್ಣೀರು: ಸಿದ್ದು ತೀವ್ರ ಆಕ್ರೋಶ

By Kannadaprabha News  |  First Published Aug 1, 2024, 5:00 AM IST

ಕೇಂದ್ರ ಮಟ್ಟದಲ್ಲಿ ಎಸ್ಸಿಪಿ, ಟಿಎಸ್‌ಪಿ ಯೋಜನೆ ಜಾರಿಗೊಳಿಸದೆ ಪರಿಶಿಷ್ಟರ ಬಜೆಟ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರವನ್ನು ಪ್ರಶ್ನಿಸಲು ಯಾವ ನೈತಿಕ ಅಧಿಕಾರ ಇದೆ ಎಂದು ಕಿಡಿ ಕಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ 
 


ಬೆಂಗಳೂರು(ಆ.01): ರಾಜ್ಯದ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ನಿರ್ಮಲಾ ಸೀತಾರಾಮನ್‌ ಅವರೇ, ಮೊದಲು ಕೇಂದ್ರದಲ್ಲಿ ಎಸ್ಸಿಪಿ-ಟಿಎಸ್ಪಿ ಯೋಜನೆ ಜಾರಿಗೆ ತಂದು ಪರಿಶಿಷ್ಟರಿಗೆ ಕೇಂದ್ರ ಬಜೆಟ್‌ನಲ್ಲಿ ಶೇ.25ರಷ್ಟು ಅನುದಾನ ಮೀಸಲಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೇಂದ್ರ ಮಟ್ಟದಲ್ಲಿ ಎಸ್ಸಿಪಿ, ಟಿಎಸ್‌ಪಿ ಯೋಜನೆ ಜಾರಿಗೊಳಿಸದೆ ಪರಿಶಿಷ್ಟರ ಬಜೆಟ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರವನ್ನು ಪ್ರಶ್ನಿಸಲು ಯಾವ ನೈತಿಕ ಅಧಿಕಾರ ಇದೆ ಎಂದು ಕಿಡಿ ಕಾರಿದ್ದಾರೆ.

Tap to resize

Latest Videos

ಸಿದ್ದರಾಮಯ್ಯ ವಿರುದ್ಧ ಸುಳ್ಳುಸುದ್ದಿ: ತನಿಖೆಗೆ ಹೈಕೋರ್ಟ್‌ ತಡೆ

ಮೌನವಾಗಿರುವುದು ಕ್ಷೇಮ:

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪರಿಶಿಷ್ಟರ ಕಲ್ಯಾಣದ ಬಗ್ಗೆ ರಾಜ್ಯ ಸರ್ಕಾರವನ್ನು ಪ್ರಶ್ನಿಸಲು ಕರೆ ನೀಡಿದ್ದಾರೆ. ಮೊದಲು ನೀವು ಕೇಂದ್ರದಲ್ಲಿ ಎಸ್ಸಿಪಿ, ಟಿಎಸ್‌ಪಿ ಜಾರಿ ಮಾಡಿ ನಮ್ಮನ್ನು ಪ್ರಶ್ನಿಸಿ. ಅಲ್ಲಿಯವರೆಗೂ ಮೌನವಾಗಿರುವುದು ನಿಮಗೆ ಕ್ಷೇಮ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ರಾಜ್ಯದ ಬಜೆಟ್ ಗಾತ್ರ 3.71 ಲಕ್ಷ ಕೋಟಿ ರು. ಅದರಲ್ಲಿ 39,121 ಕೋಟಿಯನ್ನು ಎಸ್ಸಿಪಿ-ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಕೇಂದ್ರ ಬಜೆಟ್‌ 48.21 ಲಕ್ಷ ಕೋಟಿ. ಇದರಲ್ಲಿ ಎಸ್ಸಿ, ಎಸ್ಟಿ ಅಭಿವೃದ್ಧಿಗೆ ನೀವು ನೀಡಿರುವ ಅನುದಾನ 2.90 ಲಕ್ಷ ಕೋಟಿ ರು. ಮಾತ್ರ. ನಿಮ್ಮ ಬಜೆಟ್ ನೋಡಿದರೆ ನೀವು ಯಾರಿಗೆ ಹಲ್ವಾ ಹಂಚಿದ್ದೀರಿ ಎನ್ನುವುದು ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ದಲಿತರು ಪ್ರಶ್ನಿಸಬೇಕಿರುವುದು ಯಾರನ್ನು?

ನಮ್ಮ ರಾಜ್ಯದಲ್ಲಿ ಎಸ್ಸಿಪಿ-ಟಿಎಸ್‌ಪಿ ಕಾಯಿದೆ ಜಾರಿಗೆ ತರುವ ಮೊದಲು 2013-14ರ ಬಜೆಟ್‌ನಲ್ಲಿ ಪರಿಶಿಷ್ಟರಿಗೆ 8,616 ಕೋಟಿ ರು. ಹಣ ಮೀಸಲಿಡಲಾಗಿತ್ತು. ಕಾಯಿದೆ ಜಾರಿಯಾದ 2014-15ರಲ್ಲಿ 15,894 ಕೋಟಿ ರು. ಅನುದಾನ ನೀಡಲಾಯಿತು. ಇದು ಈಗ 40 ಸಾವಿರ ಕೋಟಿಗೆ ತಲುಪಿದೆ. ಇದು ನಮಗೆ ದಲಿತರ ಬಗೆಗಿರುವ ಕಾಳಜಿ. ಇದಲ್ಲದೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿದೆ. 1 ಕೋಟಿ ರು.ವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ಶೇ.24.1ರಷ್ಟು ಮೀಸಲಾತಿ ಕಲ್ಪಿಸಿದೆ. ಈಗ ಹೇಳಿ ನಿರ್ಮಲಾ ಸೀತಾರಾಮನ್ ಅವರೇ, ದಲಿತರು ಮೊದಲು ಪ್ರಶ್ನೆ ಮಾಡಬೇಕಾಗಿರುವುದು ಯಾರನ್ನು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

click me!