* ಕಾಂಗ್ರೆಸ್ಸಿಗರ ಮೇಲಿನ ಹಲ್ಲೆ ಸರ್ವಾಧಿಕಾರಿ ವರ್ತನೆ
* ಮೇಕೆದಾಟು ಬಗ್ಗೆ ಇಚ್ಛಾಶಕ್ತಿ ತೋರಲಿ
* ಬಿಜೆಪಿ ದ್ವೇಷದ ಹಾಗೂ ದುರುದ್ದೇಶದ ರಾಜಕಾರಣ ಮಾಡುತ್ತಿದೆ
ಬೆಂಗಳೂರು(ಜೂ.15): ‘ದೆಹಲಿಯ ಎಐಸಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಸರ್ವಾಧಿಕಾರಿ ವರ್ತನೆ. ಬಿಜೆಪಿಯವರಿಗೆ ಅಧಿಕಾರದ ಮದ ಏರಿದೆ. ಹೀಗಾಗಿ ಇಂತಹದ್ದೆಲ್ಲಾ ಮಾಡಿಸುತ್ತಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಈ ಹಿಂದೆ ಮುಚ್ಚಿ ಹೋಗಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮತ್ತೆ ಕೆದಕಿ ತನಿಖೆ ನಡೆಸುವ ಮೂಲಕ ದ್ವೇಷದ ಹಾಗೂ ದುರುದ್ದೇಶದ ರಾಜಕಾರಣ ಮಾಡುತ್ತಿದ್ದಾರೆ. ವಿನಾಕಾರಣ ಇಂತಹ ದ್ವೇಷದ ರಾಜಕಾರಣ ಮಾಡುವವರ ವಿರುದ್ಧ ಪ್ರತಿಭಟನೆ ಮಾಡಬೇಕು ತಾನೆ? ಇದನ್ನು ಖಂಡಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಲು ಎಐಸಿಸಿ ಕಚೇರಿಗೆ ಹೋದರೆ ಬಂಧಿಸಿದ್ದಾರೆ. ಬಂಧನದ ವೇಳೆ ಕೆಲವರ ಮೇಲೆ ಹಲ್ಲೆ ಮಾಡಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಬಿಜೆಪಿಯವರು ಅಧಿಕಾರದ ಮದದಲ್ಲಿ ಹೀಗೆಲ್ಲಾ ಮಾಡಿಸುತ್ತಿದ್ದಾರೆ. ಈಗ ದೇಶದಲ್ಲಿ ಪ್ರತಿಭಟನೆಯನ್ನೂ ನಡೆಸಬಾರದು ಎನ್ನಲು ತುರ್ತು ಪರಿಸ್ಥಿತಿ ಏನಾದ್ರೂ ಇದೆಯಾ?’ ಎಂದು ಪ್ರಶ್ನಿಸಿದರು.
ದಳಪತಿಗಳಿಗೆ ಮತ್ತೊಂದು ಶಾಕ್, ಜೆಡಿಎಸ್‌ಗೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಮನೆಗೆ ಹೋದ ಮಾಜಿ MLC
‘ಕಾನೂನು ರಕ್ಷಿಸಬೇಕಾದ ಪೊಲೀಸರೇ ಕಾನೂನನ್ನು ಕೈಗೆ ಎತ್ತಿಕೊಂಡಿದ್ದಾರೆ. ತಮಿಳುನಾಡು, ಕರ್ನಾಟಕ ಕಾಂಗ್ರೆಸ್ ನಾಯಕರನ್ನೂ ಬಂಧಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನೂ ಬಂಧಿಸಿದ್ದಾರೆ. ರಾಜಕೀಯ ಕಾರಣಕ್ಕೆ ಹಳೆಯ ಪ್ರಕರಣವನ್ನು ಮತ್ತೆ ಕೆದಕಿ ನಮ್ಮ ಪಕ್ಷದ ನಾಯಕರಿಗೆ ತೊಂದರೆ ನೀಡುತ್ತಿದ್ದಾರೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಇದರ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ನಡೆಸುತ್ತಿರುವ ಹೋರಾಟ ನಿಲ್ಲುವುದಿಲ್ಲ’ ಎಂದರು.
ಮೇಕೆದಾಟು ಬಗ್ಗೆ ಇಚ್ಛಾಶಕ್ತಿ ತೋರಲಿ:
ಕರ್ನಾಟಕ ಮೇಕೆದಾಟು ಯೋಜನೆ ವಿರೋಧಿಸಿ ಪ್ರಧಾನ ಮಂತ್ರಿ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆದಿರುವ ಕುರಿತು ಇದೇ ವೇಳೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ‘ತಮಿಳುನಾಡಿನವರು ಏನಾದರೂ ಬರೆದುಕೊಳ್ಳಲಿ ಅದು ಮುಖ್ಯವಲ್ಲ. ಯೋಜನೆಗೆ ಯಾವುದೇ ತಕರಾಗಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಯೋಜನೆ ಕೈಗೆತ್ತಿಕೊಳ್ಳಲು ಇಚ್ಛಾಶಕ್ತಿ ತೋರಬೇಕು’ ಎಂದರು.
‘ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಕೂಡಲೇ ಕರ್ನಾಟಕಕ್ಕೆ ಪರಿಸರ ಇಲಾಖೆಯ ನಿರಾಕ್ಷೇಪಣಾ ಪತ್ರ ನೀಡಬೇಕು. ಇದಕ್ಕೆ ರಾಜ್ಯ ಸರ್ಕಾರ ಕೇಂದ್ರಕ್ಕೆ ನಿಯೋಗ ತೆರಳಿ ಒತ್ತಡ ಹಾಕಬೇಕು’ ಎಂದು ಹೇಳಿದರು.