
ಅರಸೀಕೆರೆ (ಜು.27): ಇತ್ತೀಚಿನ ವರದಿ ಪ್ರಕಾರ ತಲಾದಾಯ ಹೆಚ್ಚಳದಲ್ಲಿ ಇಡೀ ದೇಶದಲ್ಲಿಯೇ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಇದಕ್ಕೆ ನಮ್ಮ ಪಂಚ ಗ್ಯಾರಂಟಿಗಳೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಜೊತೆಗೆ, ಬಿಜೆಪಿಯವರು ತಾಕತ್ತಿದ್ದರೆ ಜನಸಾಮಾನ್ಯರ ಒಳಿತಿಗಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳನ್ನು ನಿಲ್ಲಿಸಿ ಎಂದು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಲಾದಾಯದಲ್ಲಿ ಕರ್ನಾಟಕ ನಂಬರ್ ಒನ್ ಆಗಲು ಗ್ಯಾರಂಟಿಗಳೇ ಕಾರಣ. ಗ್ಯಾರಂಟಿಗಳಿಂದಾಗಿ ಜನರ ಬಳಿ ದುಡ್ಡು ಓಡಾಡುತ್ತಿದೆ.
ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿದೆ. ಇದರಿಂದ ಅಭಿವೃದ್ಧಿಯೂ ಆಗುತ್ತಿದೆ. ಆದರೆ, ಅರ್ಥಶಾಸ್ತ್ರದಲ್ಲಿ ವೀಕ್ ಇರುವ ಬಿಜೆಪಿಯವರಿಗೆ ಇದೆಲ್ಲಾ ಎಲ್ಲಿ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದರು. ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗಿಲ್ಲ. ಇಡೀ ದೇಶದಲ್ಲಿ ತಲಾದಾಯ ಹೆಚ್ಚಳದಲ್ಲಿ ಕರ್ನಾಟಕ ನಂಬರ್ ಒನ್ ಎಂಬುದನ್ನು ವಿಪಕ್ಷಗಳು ಗಮನಿಸಬೇಕು. ಸರ್ಕಾರ ದಿವಾಳಿ ಆಗಿದ್ದರೆ ಜನರ ತಲಾದಾಯ ಹೇಗೆ ಹೆಚ್ಚಾಗುತ್ತಿತ್ತು? ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ಸರ್ಕಾರಕ್ಕೆ ಬರುವ ಆದಾಯವೂ ಹೆಚ್ಚಾಗಿದೆ ಎಂದು ಗ್ಯಾರಂಟಿ ಯೋಜನೆಯನ್ನು ಸಮರ್ಥಿಸಿಕೊಂಡರು.
2 ವರ್ಷದಲ್ಲಿ ಎತ್ತಿನಹೊಳೆ ಪೂರ್ಣ: ಎತ್ತಿನಹೊಳೆ, ಕುಡಿಯುವ ನೀರಿನ ಯೋಜನೆಯಾಗಿದೆ. ಇನ್ನೆರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿ, 7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು. ಈ ಯೋಜನೆ ಪೂರ್ಣಗೊಳಿಸಿ, ಕುಡಿಯುವ ನೀರು ಮತ್ತು 527 ಕೆರೆಗಳನ್ನು ತುಂಬಿಸುವ ಕೆಲಸವನ್ನು ಮಾಡಿಯೇ ಮಾಡುತ್ತೇವೆ ಎಂದು ಭರವಸೆ ನೀಡಿದರು. ಎತ್ತಿನಹೊಳೆ ಸಾಧ್ಯವೇ ಇಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿದ್ದರು. ಇದುವರೆಗೆ, ಯೋಜನೆಗೆ ₹17 ಸಾವಿರ ಕೋಟಿ ಖರ್ಚಾಗಿದ್ದು, ಮೊದಲ ಹಂತದ ಕೆಲಸ ಮುಗಿದಿದೆ. 2ನೇ ಹಂತದ ಕೆಲಸ ಆರಂಭವಾಗಿದೆ. ಇನ್ನೂ, ₹6 ಸಾವಿರ ಕೋಟಿ ಬೇಕಿದೆ. ಇನ್ನೆರಡು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಿ, 7 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು.
ಅರ್ಧಕ್ಕೆ ಭಾಷಣ ನಿಲ್ಲಿಸಿದ ಸಿಎಂ: ಸಮಾವೇಶದಲ್ಲಿ ಸಿಎಂ ಭಾಷಣದ ಆರಂಭದಿಂದಲೂ ಜನರು ಶಿವಲಿಂಗೇಗೌಡರನ್ನು ಸಚಿವರನ್ನಾಗಿ ಮಾಡಬೇಕೆಂದು ಘೋಷಣೆ ಕೂಗುತ್ತಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಮಾಧಾನವಾಗಿಯೇ ಪ್ರತಿಕ್ರಿಯಿಸಿ, ‘ಶಿವಲಿಂಗೇಗೌಡರಿಗೆ ರಾಜಕೀಯ ಭವಿಷ್ಯ ಚೆನ್ನಾಗಿದೆ’ ಎಂದು ಹೇಳುತ್ತಿದ್ದರು. ಆದರೂ, ಸುಮ್ಮನಾಗದ ಕೆಲ ಅಭಿಮಾನಿಗಳು ತಮ್ಮ ಚೀರಾಟ ಮುಂದುವರಿಸಿದರು. ಇದರಿಂದ ಸಿಟ್ಟಾದ ಸಿಎಂ, ಅರ್ಧಕ್ಕೇ ಭಾಷಣ ನಿಲ್ಲಿಸಿ, ಕುರ್ಚಿಯತ್ತ ತೆರಳಿದರು. ಇದರಿಂದ ವೇದಿಕೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ನಂತರ, ಶಿವಲಿಂಗೇಗೌಡರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ರಾಜಣ್ಣ, ಜನರನ್ನು ಸಮಾಧಾನಪಡಿಸಿದರು. ಬಳಿಕ, ಮಾತು ಮುಂದುವರೆಸಿದ ಸಿದ್ದರಾಮಯ್ಯ, ಶಿವಲಿಂಗೇಗೌಡರು ಸಚಿವರಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ. ಆದರೆ, ಎಲ್ಲವನ್ನು ಬಹಿರಂಗವಾಗಿ ಚರ್ಚೆ ಮಾಡಲು ಆಗುವುದಿಲ್ಲ ಎಂದರು.
ರಾಕೇಶ್ ಪುಣ್ಯಸ್ಮರಣೆಗಾಗಿ ಮೈಸೂರಿಗೆ ಸಿದ್ದು ಆಗಮನ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸಂಜೆ ಹಾಸನದಿಂದ ರಸ್ತೆ ಮೂಲಕ ಮೈಸೂರಿಗೆ ಆಗಮಿಸಿದರು. ಅರಸೀಕೆರೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಆಗಮಿಸಬೇಕಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ರಸ್ತೆಯ ಮೂಲಕ ಬಂದರು. ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಭಾನುವಾರ ಬೆಳಗ್ಗೆ ಟಿ. ಕಾಟೂರಿನ ತೋಟದಲ್ಲಿ ಜರುಗಲಿದ್ದು, ಇದರಲ್ಲಿ ಭಾಗವಹಿಸುವ ಸಲುವಾಗಿ ಅವರು ಮೈಸೂರಿಗೆ ಆಗಮಿಸಿದ್ದಾರೆ.
ದೆಹಲಿಯಲ್ಲಿ ಹಿಂದುಳಿದ ವರ್ಗಗಳ ಸಮ್ಮೇಳನ ಇತ್ತು. ಅದಕ್ಕೆ ಹೋಗಿದ್ದೆ. ನಾನು ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸದಸ್ಯ ಆಗಿದ್ದೇನೆ, ಅದಕ್ಕೇ ಭಾಗಿಯಾಗಿದ್ದೆ. ರಾಜ್ಯದಲ್ಲಿ ಯೂರಿಯಾ ರಸಗೊಬ್ಬರ ಕೊರತೆ ಇಲ್ಲ. ಈ ಬಾರಿ 5 ಲಕ್ಷ ಹೆಕ್ಟೇರ್ ಹೆಚ್ಚು ಬಿತ್ತನೆ ಆಗಿರುವುದರಿಂದ ಗೊಬ್ಬರದ ಬೇಡಿಕೆ ಸ್ವಲ್ಪ ಹೆಚ್ಚಾಗಿದೆ. ಮಳೆ ಹೆಚ್ಚಾಗಿದ್ದು, ಮುಂಗಾರು ಮಳೆ ಬೇಗ ಶುರುವಾಯಿತು. ಜೋಳ ಹಾಕಿರುವುದು ಕೂಡ ಸ್ವಲ್ಪ ಜಾಸ್ತಿ ಆಗಿದೆ. ಹಾಗಾಗಿ, ರೈತರು ಜಾಸ್ತಿ ರಸಗೊಬ್ಬರ ಉಪಯೋಗಿಸಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.