ಲೆಕ್ಕ ಕೊಡಿ: ಬಿಜೆಪಿ ಲೀಗಲ್ ನೋಟಿಸ್‌ಗೆ ಸಿದ್ದರಾಮಯ್ಯ ಕ್ವಿಕ್ ರಿಯಾಕ್ಷನ್....!

By Suvarna NewsFirst Published Jul 31, 2020, 2:21 PM IST
Highlights

ಕೊರೋನಾ ವೈದ್ಯಕೀಯ ಉಪಕರಣ ಖರೀದಿ ಸಂಬಂಧ ಲೆಕ್ಕ ಕೊಡಿ ಎಂದಿದ್ದ ಸಿದ್ದರಾಮಯ್ಯಗೆ ಬಿಜೆಪಿ ಲೀಗಲ್ ನೋಟಿಸ್ ಕೊಟ್ಟಿದ್ದಾರೆ. ಇದಕ್ಕೆ ಸಿದ್ದು ಪ್ರತಿಕ್ರಿಯೆ ಹೀಗಿದೆ.

ಮಂಡ್ಯ, (ಜುಲೈ.31): ವಿಪಕ್ಷ ನಾಯಕರಿಗೆ ಬಿಜೆಪಿ ಲೀಗಲ್‌ ನೋಟಿಸ್‌ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಲೀಗಲ್‌ ನೋಟಿಸ್‌ ಕೊಡಲಿ ಅಂತಾನೇ ಕಾಯುತ್ತಿದ್ದೆ. ಆದ್ರೆ, ಬಿಜೆಪಿ ಯಾರೋ ಒಬ್ಬ ಎಂಎಲ್‌ಸಿ ಕೈಯಲ್ಲಿ ನೋಟಿಸ್‌ ಕೊಡಿಸಿದೆ ಎಂದು ಲೇವಡಿ ಮಾಡಿದ್ದಾರೆ.

ಇಂದು (ಶುಕ್ರವಾರ) ವಿಧಾನಪರಿಷತ್ ಸದಸ್ಯ ಮತ್ತು  ಡಿಸಿಎಂ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ಜಾರಿ ಮಾಡಿದರು.. 

ಸರ್ಕಾರದ ಮೇಲೆ ನಿರಾಧಾರ ಆರೋಪ ಹೊರಿಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೋರಲು‌ ಒತ್ತಾಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಎಂಎಲ್ಸಿ ಎನ್. ರವಿಕುಮಾರ್ ಮತ್ತು ರಾಜ್ಯ ವಕ್ತಾರ ಅಶ್ವತ್ಥನಾರಾಯಣ, ಲೀಗಲ್ ನೋಟಿಸ್​ಗೆ 15 ದಿನದೊಳಗೆ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ಗಂಭೀರ ಕ್ರಮ ಎದುರಿಸಬೇಕಾದೀತು ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಳಗ್ಗೆಯಿಂದ ಅಬ್ಬರಿಸಿ ಸಂಜೆ ಬಿಎಸ್‌ವೈಗೆ ಅಭಿನಂದನೆ ತಿಳಿಸಿದ ಸಿದ್ದು, ಇದೇ ರಾಜಕೀಯ ಗುರು...!

ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮಗೆ ಬಿಜೆಪಿ ಲೀಗಲ್‌ ನೋಟಿಸ್‌ ನೀಡಿದೆ. ನಾನು ನೋಟಿಸ್‌ ಕೊಡಲಿ ಅಂತಾನೇ ಕಾಯ್ತಾ ಇದ್ದೆ. ಆದ್ರೆ, ಯಾರೋ ಎಂಎಲ್‌ಸಿ ಕೈಯಿಂದ ನೋಟಿಸ್‌ ಕೊಡಿಸಿದೆ. ನಾವು ಸರ್ಕಾರದ ಮೇಲೆ ಆರೋಪ ಮಾಡಿದ್ದೇವೆ. ಹಾಗಾಗಿ ನಮಗೆ ನೋಟಿಸ್‌ ಕೊಡಬೇಕಾದದ್ದು ಚೀಫ್‌ ಸೆಕ್ರಟರಿ. ಇಲ್ಲವೇ ಸಿಎಂ, ಡಿಸಿಎಂ, ಸಚಿವರ ಕೈಯಿಂದಾದ್ರು ನೋಟಿಸ್ ಕೊಡಿಸಬೇಕಿತ್ತು. ಅದು ಬಿಟ್ಟು ಒಬ್ಬ ಎಂಎಲ್‌ಸಿ ಕೈಯಿಂದ ನೋಟಿಸ್‌ ಕೊಡಿಸಿದೆ ಎಂದು ವ್ಯಂಗ್ಯವಾಡಿದರು.

ಇನ್ನು ಸರ್ಕಾರ ಕೊರೋನಾಗೆ 4 ಸಾವಿರ ಕೋಟಿ ಖರ್ಚು ಮಾಡಿದೆ ಎಂದು ಹೇಳ್ತಿದೆ. ಆದ್ರೆ, 2000 ಕೋಟಿ ತಮ್ಮ ಜೇಬಿಗೆ ಇಳಿಸಿಕೊಂಡಿದೆ ಎಂದು ಮತ್ತೊಮ್ಮೆ ಪುನಾರುಚ್ಚರಿಸಿದರು.

ಸದ್ಯ ರಾಜ್ಯದಲ್ಲಿ ಒಬ್ಬ ಮಂತ್ರಿ ಸಹ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ, ನಾನು ಸಿಎಂ ಆಗಿದ್ರೆ ರಾಜ್ಯದ ಎಲ್ಲಾ ಜನಕ್ಕೆ ತಲಾ ಹತ್ತು ಸಾವಿರ ಹಣ ಘೋಷಿಸುವೆ. ನಾನು ಲೆಕ್ಕ ಕೊಡಿ ಅಂತ ಸರ್ಕಾರವನ್ನ ಕೇಳಿದ್ರೆ ಸಿದ್ದರಾಮಯ್ಯ ಯಾರು ಲೆಕ್ಕ ಕೇಳೋಕೆ ಅಂತಾರೆ. ಒಬ್ಬ ಸಾಮಾನ್ಯ ಪ್ರಜೆಗೂ ಸರ್ಕಾರವನ್ನು ಪ್ರಶ್ನಿಸುವ ಅಧಿಕಾರ ಇದೆ ಅಂತ ಸರ್ಕಾರ ಹೇಳುತ್ತೆ. ಸಚಿವ ಅಶೋಕ್ ಪಾಪಾ ಸಂವಿಧಾನವೇ ಓದಿಲ್ಲ ಅನ್ಸುತ್ತೆ ಎಂದು ಸಿದ್ದರಾಮಯ್ಯ ಟಾಂಗ್ ಕೊಟ್ಟರು.

click me!