
ಬೆಂಗಳೂರು (ಆ.13): ‘ಸ್ವತಂತ್ರ ಭಾರತದಲ್ಲಿ 52 ವರ್ಷಗಳವರೆಗೆ ಆರ್‌ಎಸ್‌ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸದಿರಲು ಕಾರಣವೇನು? ದೇಶಕ್ಕೆ ತ್ರಿವರ್ಣಧ್ವಜ ಅಲ್ಲ ಭಗವಾಧ್ವಜವೇ ಇರಬೇಕು ಎಂದು ಪ್ರತಿಪಾದಿಸುತ್ತಿದ್ದ ಆರ್‌ಎಸ್‌ಎಸ್ ಸರಸಂಘಚಾಲಕರಾದ ಕೆ.ಬಿ.ಹೆಡಗೆವಾರ್, ಎಂ.ಎಸ್.ಗೋಲ್ವಾಲ್ಕರ್ ಅವರ ನಿಲುವಿನ ಬಗ್ಗೆ ನಿಮ್ಮ ಹಾಗೂ ನಿಮ್ಮ ಪಕ್ಷದ ಅಭಿಪ್ರಾಯವೇನು?’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.
‘ಹರ್ ಘರ್ ತಿರಂಗಾ’ ಅಭಿಯಾನದ ಹಿನ್ನೆಲೆಯಲ್ಲಿ ‘ಏಕೆ ತ್ರಿವರ್ಣ ಧ್ವಜ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಧ್ವಜದ ಮಹತ್ವ ಸಾರುವ ಪ್ರಕಟಣೆ ನೀಡಿದ್ದರು. ಈ ಕುರಿತು ಟ್ವೀಟರ್ ಮೂಲಕ ಸರಣಿ ಪ್ರಶ್ನೆ ಕೇಳಿರುವ ಸಿದ್ದರಾಮಯ್ಯ ಅವರು, ‘ಬೊಮ್ಮಾಯಿ ಅವರೇ, ಸ್ವತಂತ್ರ ಭಾರತದಲ್ಲಿ 52 ವರ್ಷಗಳವರೆಗೆ ದೇಶ ಹೆಮ್ಮೆ ಪಡುವ ರಾಷ್ಟ್ರಧ್ವಜವನ್ನು ಆರ್‌ಎಸ್‌ಎಸ್ ಕಚೇರಿ ಮೇಲೆ ಹಾರಿಸದೇ ಇರಲು ಕಾರಣವೇನು? 2001ರಲ್ಲಿ ದೇಶಭಕ್ತ ಯುವಕರು ರಾಷ್ಟ್ರಧ್ವಜ ಹಾರಿಸಲು ಬಂದಾಗ ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದು ಏಕೆ? ಎಂದು ಪ್ರಶ್ನಿಸಿದರು.
ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ನಂಗೊತ್ತಿಲ್ಲ: ಸಿದ್ದರಾಮಯ್ಯ
ದೇಶಕ್ಕೆ ತ್ರಿವರ್ಣ ಧ್ವಜ ಅಲ್ಲ, ಭಗವಾಧ್ವಜವೇ ಇರಬೇಕು ಎಂದು ಪ್ರತಿಪಾದಿಸಿದ್ದ ಆರ್‌ಎಸ್‌ಎಸ್‌ನ ಕೆ.ಬಿ. ಹೆಡಗೆವಾರ್, ಎಂ.ಎಸ್. ಗೋಲ್ವಾಲ್ಕರ್ ಅವರ ನಿಲುವಿನ ಬಗ್ಗೆ ನಿಮ್ಮ ಹಾಗೂ ನಿಮ್ಮ ಪಕ್ಷದ ಈಗಿನ ಅಭಿಪ್ರಾಯವೇನು? ತ್ರಿವರ್ಣ ಧ್ವಜ ರಾಷ್ಟ್ರೀಯ ಮುನ್ನೋಟ, ಸತ್ಯ, ಇತಿಹಾಸ ಇಲ್ಲವೇ ಪರಂಪರೆಯಿಂದ ಪ್ರೇರಣೆಯಿಂದ ತಯಾರಿಸಿಲ್ಲ. ಇದು ಫ್ರೆಂಚ್ ಕ್ರಾಂತಿಯ ಘೋಷಣೆಗಳ ಎರವಲು ಎಂದು ಗೋಲ್ವಾಲ್ಕರ್ ತಮ್ಮ ‘ಬಂಚ್ ಆಫ್ ಥಾಟ್ಸ್’ನಲ್ಲಿ ಬರೆದಿರುವುದನ್ನು ನೀವು ಧಿಕ್ಕರಿಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಆರ್ಗನೈಸರ್ ವಿವಾದಿತ ಲೇಖನ: ಮೂರು ಎನ್ನುವುದೇ ಅಪಶಕುನ, ರಾಷ್ಟ್ರಧ್ವಜವನ್ನು ಭಾರತೀಯರು ಒಪ್ಪಲಾರರು. ತ್ರಿವರ್ಣಧ್ವಜ ದೇಶದ ಮೇಲೆ ಮಾನಸಿಕವಾಗಿ ದುಷ್ಪರಿಣಾಮ ಬೀರುವುದು ಮಾತ್ರವಲ್ಲ ಹಾನಿಕಾರ ಎಂದು 1947ರಲ್ಲಿ ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ಸ್ ಪತ್ರಿಕೆ ಪ್ರಕಟಿಸಿದ್ದ ಲೇಖನ ನೀವು ಒಪ್ಪುತ್ತೀರಾ? ಆರ್‌ಎಸ್‌ಎಸ್‌ನವರು ರಾಷ್ಟ್ರಧ್ವಜದ ಬಗೆಗಿನ ನಿಲುವು ಬದಲಿಸಿಕೊಂಡು ‘ಹರ್ ಘರ್ ತಿರಂಗಾ’ ಕಾರ್ಯಕ್ರಮ ಬೆಂಬಲಿಸುತ್ತಾರೆ ಎಂದು ನಿಮಗೆ ಅನಿಸುತ್ತಿದೆಯೇ? ಬದಲಾಯಿಸಿಕೊಂಡಿದ್ದರೆ ಅದಕ್ಕೆ ಕಾರಣಗಳೇನು? ದೇಶದ ಜನ ತಮ್ಮ ಟ್ವೀಟರ್ ಡಿಪಿಯಲ್ಲಿ ರಾಷ್ಟ್ರಧ್ವಜ ಹಾಕಬೇಕು ಎಂದು ತಿಳಿಸಿದರೂ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಪ್ರಧಾನಮಂತ್ರಿ ಕರೆಯನ್ನು ಪಾಲಿಸದಿರಲು ಕಾರಣವೇನು ಎಂದು ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.
ತಿರಂಗಾ ಅಭಿಯಾನ ಬಿಜೆಪಿಯ ನಾಟಕ: ‘ಮನೆ ಮನೆಯಲ್ಲೂ ತಿರಂಗಾ’ ಎಂಬುದು ಬಿಜೆಪಿಯವರ ನಾಟಕ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡದವರು ಈಗ ಮನೆ-ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದರೆ ಜನ ನಂಬುತ್ತಾರಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿದುರಾಶ್ವತ್ಥದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜತೆಗೂಡಿ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಬಾನಿ, ಅದಾನಿ ಕೈಗೆ ಚಿನ್ನದ ಖಜಾನೆ ನೀಡಲು ಕೇಂದ್ರ ಸಿದ್ಧತೆ: ಸಿದ್ದರಾಮಯ್ಯ ಕಿಡಿ
ದೇಶದಲ್ಲಿ ಸಹಜವಾಗಿಯೇ ಗೌರವಿಸಲ್ಪಡುವ ಎಲ್ಲಾ ವಿಚಾರಗಳನ್ನೂ ಪ್ರಚಾರದ ಗಿಮಿಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಲಜ್ಜೆಗೆಟ್ಟ ಬಿಜೆಪಿಯನ್ನು ದೇಶದೆಲ್ಲೆಡೆ ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಪೇಟ ಧರಿಸಿ ಗಮನ ಸೆಳೆದ ಅವರು, ಇಂದು ನಾವೆಲ್ಲರೂ ಸ್ವತಂತ್ರರಾಗಿದ್ದೇವೆ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ದೇಶಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಸಾರ್ವರ್ಕರ್ ಅವರನ್ನು ಹಾಡಿ ಹೊಗಳುತ್ತಾರೆ. ಆದರೆ, ಬ್ರಿಟೀಷರ ಕ್ಷಮೆ ಕೇಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟವರು ಅವರು. ಅಂತಹವರನ್ನು ಪೂಜಿಸುವ ಬಿಜೆಪಿಯವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕೆ? ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.