
ಬೆಂಗಳೂರು (ಜು.7): ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಬೇಕು ಎಂಬ ಕೋಲಾರ ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಸಿದ್ದರಾಮಯ್ಯ ಅವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅವರ ಆಪ್ತ ಮೂಲಗಳ ಪ್ರಕಾರ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರ ನೇತೃತ್ವದ ನಾಯಕರ ಮನವಿಗೆ ಸಿದ್ದರಾಮಯ್ಯ ಅವರು ಪೂರಕವಾಗಿ ಸ್ಪಂದಿಸಿದ್ದಾರೆ. ತನ್ಮೂಲಕ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಆಯ್ಕೆ ಮಾಡಿರುವ ಕ್ಷೇತ್ರಗಳ ಪಟ್ಟಿಯಲ್ಲಿ ಕೋಲಾರ ಮೊದಲ ಸ್ಥಾನದಲ್ಲಿದೆ ಎನ್ನಲಾಗಿದೆ.
ನನ್ನ ಅವಧೀಲಿ ಬೊಮ್ಮಾಯಿ ಕಡ್ಲೆಪುರಿ ತಿಂತಿದ್ರಾ?: ಸಿಎಂ ವಿರುದ್ಧ ಸಿದ್ದು ಏಕವಚನದ ವಾಗ್ದಾಳಿ
ಮಂಗಳವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ರಮೇಶ್‌ಕುಮಾರ್, ಕೃಷ್ಣ ಬೈರೇಗೌಡ, ವಿಧಾನಪರಿಷತ್ ಸದಸ್ಯ ನಜೀರ್ ಅಹಮದ್ ಹಾಗೂ ಇತ್ತೀಚೆಗೆ ಪಕ್ಷ ಸೇರ್ಪಡೆಯಾದ ಮಾಜಿ ಶಾಸಕರಾದ ಕೊತ್ತೂರು ಜಿ. ಮಂಜುನಾಥ್, ಡಾ.ಎಂ.ಸಿ. ಸುಧಾಕರ್ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದರು.
ಬಾದಾಮಿ ಕ್ಷೇತ್ರ ದೂರವಿರುವುದರಿಂದ ರಾಜಧಾನಿಗೆ ಹತ್ತಿರವಿರುವ ಹಾಗೂ ಸುರಕ್ಷಿತ ಕ್ಷೇತ್ರಗಳ ಹುಡುಕಾಟದಲ್ಲಿ ಸಿದ್ದರಾಮಯ್ಯ ಇದ್ದಾರೆ. ಕೋಲಾರ ಹಾಲಿ ಶಾಸಕ ಕೆ.ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಸಿದ್ದರಾಮಯ್ಯ ಅವರಿಗಾಗಿ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂದು ಘೋಷಿಸಿದ್ದಾರೆ.
ಪ್ರತಿ ಚುನಾವಣೇಲಿ ಸಿದ್ದು ಕ್ಷೇತ್ರ ಬದಲು ಸರಿಯಲ್ಲ: ಸುಧಾಕರ್
ಇನ್ನು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಅಹಿಂದ ಮತ ಬ್ಯಾಂಕ್ ಹೊಂದಿರುವ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸಿದರೆ ಗೆಲುವು ಸುಲಭ ಎಂಬುದು ಲೆಕ್ಕಾಚಾರ. ಹೀಗಾಗಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದಾರೆ.
ಇವೆಲ್ಲಾ ಅಂಶಗಳನ್ನು ಈಗಾಗಲೇ ಕೂಲಂಕುಷವಾಗಿ ಪರಿಶೀಲಿಸಿರುವ ಸಿದ್ದರಾಮಯ್ಯ ಅವರು ಕೋಲಾರ ಮುಖಂಡರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಆದರೆ, ಇನ್ನು ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.