
ಬೆಂಗಳೂರು (ಜು.02): 'ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಮೊದಲು ಭೇಟಿ ಮಾಡಿಸಿದ್ದೇ ನಾನು. ಅವನ ಗ್ರಹಚಾರ ಚೆನ್ನಾಗಿತ್ತು, ಮುಖ್ಯಮಂತ್ರಿ ಆಗಿಬಿಟ್ಟ. ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ''.
‘ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಸ್ವಪಕ್ಷದ ವಿರುದ್ಧವೇ ‘ಬಾಂಬ್’ ಸಿಡಿಸಿದ್ದ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲರು, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಈ ರೀತಿ ಮಾತನಾಡಿರುವ ವಿಡಿಯೋವೊಂದು ಬಹಿರಂಗಗೊಂಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಗೆ ಪಾಟೀಲ್ ಅವರು ಆಗಮಿಸಿದ್ದಾಗ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದರಲ್ಲಿ ‘ಜೆಡಿಎಸ್ ಬಿಟ್ಟು ಬಂದ 8 ಶಾಸಕರಲ್ಲಿ ನಾನೂ ಒಬ್ಬ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದೆವು. ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಮೊದಲು ಭೇಟಿ ಮಾಡಿಸಿದ್ದೇ ನಾನು, ಸಿದ್ದರಾಮಯ್ಯ ಲಾಟರಿ ಮುಖ್ಯಮಂತ್ರಿ’ ಎಂದು ಹೇಳಿರುವುದು ಬಹಿರಂಗಗೊಂಡಿದೆ.
ಅಲ್ಲದೆ, ‘ಇಂದು ನನಗೆ ಗಾಡ್‌ಫಾದರ್ ಇಲ್ಲ. ಗಾಡೂ ಇಲ್ಲ, ಫಾದರ್ರೂ ಇಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಎಲ್ಲ ವಿಚಾರ ಹೇಳಿದ್ದೇನೆ. ಅವರು ಗಂಭೀರವಾಗಿ ನನ್ನ ಮಾತು ಕೇಳಿದರು. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆಯೋ ನೋಡೋಣ’ ಎಂದು ಪಾಟೀಲ್ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ನಾನು ಅದೃಷ್ಟವಂತ: ನಾನು ಹಾಗೂ ಬಿ.ಆರ್.ಪಾಟೀಲ್ ಒಟ್ಟಿಗೆ ಶಾಸಕರಾದೆವು. ನಾನು ಮುಖ್ಯಮಂತ್ರಿಯಾಗಿದ್ದೇನೆ. ನಾನು ಅದೃಷ್ಟವಂತ. ಅದಕ್ಕೆ ನನ್ನನ್ನು ''ಲಾಟರಿ ಸಿಎಂ'' ಎಂದು ಹೇಳಿದ್ದರೂ ಹೇಳಿರಬಹುದು! ತಮ್ಮನ್ನು ಲಾಟರಿ ಸಿಎಂ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ತಮ್ಮದೇ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಇದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.