ಸಿದ್ದು ಸ್ಪರ್ಧೆ ಎಲ್ಲಿಂದ ಎಂಬ ಕುತೂಹಲಕ್ಕೆ ತೆರೆ, ಕೋಲಾರ, ವರುಣ, ಬಾದಾಮಿ ಟಿಕೆಟ್‌ಗೆ ಅರ್ಜಿ ಹಾಕಿರುವ ಸಿದ್ದು
ಬೆಂಗಳೂರು(ಜ.09): ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಮಿನಿಯನ್ ಡಾಲರ್ ಪ್ರಶ್ನೆಯೆನಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಇಂದು(ಸೋಮವಾರ) ಭಾಗಶಃ ಉತ್ತರ ದೊರೆಯುವ ನಿರೀಕ್ಷೆಯಿದೆ. ಹೌದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಕೋಲಾರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ನಡೆಯುವ ಕಾರ್ಯಕರ್ತರ ಸಮಾವೇಶದಲ್ಲಿ ತಾವು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಈ ಬಾರಿಯ ಚುನಾವಣೆಯ ಬಹು ಚರ್ಚಿತ ವಿಷಯವಾಗಿದೆ. ತಾವು ಹಾಲಿ ಪ್ರತಿನಿಧಿಸಿರುವ ಬಾದಾಮಿ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜತೆಗೆ ಬಾದಾಮಿ, ಕೋಲಾರ ಹಾಗೂ ವರುಣ ಕ್ಷೇತ್ರದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ.
CONGRESS SC ST CONVENTION: ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ, ಬದ್ಧತೆ ಇಲ್ಲ: ಸಿದ್ದರಾಮಯ್ಯ
ಆದರೆ, ನಿರ್ದಿಷ್ಟವಾಗಿ ಯಾವ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅವರು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಅವರ ವಿರೋಧಿಗಳು ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲ. ಎಲ್ಲಿ ಸ್ಪರ್ಧಿಸಿದರೂ ಸೋಲುತ್ತಾರೆ ಎಂದು ಟೀಕಿಸುತ್ತಾ ಬಂದಿದ್ದಾರೆ. ಇದೇ ವೇಳೆ ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸಿ ಎಂದು ಅವರ ಅಭಿಮಾನಿಗಳು ಹಲವು ಕ್ಷೇತ್ರಗಳಿಂದ ಆಹ್ವಾನ ನೀಡುತ್ತಾ ಬಂದಿದ್ದಾರೆ. ಹೆಬ್ಬಾಳ, ಕೊಪ್ಪಳ, ಬಾದಾಮಿ, ವರುಣ, ಚಾಮರಾಜಪೇಟೆ, ಕೋಲಾರ ಸೇರಿದಂತೆ ಹಲವು ಕ್ಷೇತ್ರಗಳಿಂದ ಅವರಿಗೆ ಆಹ್ವಾನ ಬಂದಿದೆ.
ಈ ಪೈಕಿ ಕೋಲಾರ ಜಿಲ್ಲಾ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಈ ಬಾರಿ ಕೋಲಾರದಿಂದಲೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದು, ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿಯೇ ಸಿದ್ದರಾಮಯ್ಯ ಈಗಾಗಲೇ ಒಂದು ಬಾರಿ ಕೋಲಾರದಲ್ಲಿ ದಿನವಿಡೀ ಕಾರ್ಯಕ್ರಮ ನಡೆಸಿ ಕೋಲಾರ ಕಣ ಪರೀಕ್ಷೆಯನ್ನು ನಡೆಸಿದ್ದರು. ಇದಾದ ನಂತರವೂ ಅವರು ಸ್ಪರ್ಧೆ ಬಗ್ಗೆ ತೀರ್ಮಾನ ಕೈಗೊಂಡಿರಲಿಲ್ಲ.
Karnataka Assembly election: ಕಾಂಗ್ರೆಸ್‌ನಿಂದ ಪ್ರತ್ಯೇಕ ಮಹಿಳಾ ಪ್ರಣಾಳಿಕೆ ಸಿದ್ಧ: ಡಿ.ಕೆ. ಶಿವಕುಮಾರ್
ಆದರೆ, ಪಟ್ಟು ಬಿಡದ ಕೋಲಾರ ಕಾಂಗ್ರೆಸ್ಸಿಗರು ವಿಶೇಷವಾಗಿ ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಶಾಸಕರಾದ ಕೃಷ್ಣ ಬೈರೇಗೌಡ ಮೊದಲಾದವರು ಸತತವಾಗಿ ಒತ್ತಡ ಹಾಕಿ ಸಿದ್ದರಾಮಯ್ಯ ಅವರು ಮತ್ತೆ ಕೋಲಾರಕ್ಕೆ ಭೇಟಿ ನೀಡುವಂತೆ ಮನವೊಲಿಸಿದ್ದಾರೆ.
ಅದರಂತೆ ಸಿದ್ದರಾಮಯ್ಯ ಅವರು ಸೋಮವಾರ 12.30ಕ್ಕೆ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಮೊದಲಿಗೆ ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿರುವ ಅವರು ಅಲ್ಲಿ ನಾಯಕರೊಂದಿಗೆ ಸಮಾಲೋಚನೆ ನಡೆಸುತ್ತಾರೆ. ಅನಂತರ ಸುಮಾರು 1ರ ಸುಮಾರಿಗೆ ಕೋಲಾರ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಈ ಸಮಾವೇಶದಲ್ಲೇ ಸಿದ್ದರಾಮಯ್ಯ ಅವರು ತಾವು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸವುದಾಗಿ ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.