ಯಾವುದೇ ಪಕ್ಷದಲ್ಲಿ ಇದ್ದರೂ ಸಿದ್ದರಾಮಯ್ಯ ಅವರು ನಮ್ಮ ನಾಯಕರು ಎಂದು ಸಚಿವ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಬಿಜೆಪಿಗೆ ಇರಿಸುಮುರಿಸು ಉಂಟುಮಾಡಿದ್ದಾರೆ.
ಮೈಸೂರು, (ಫೆ.09): ಮೊನ್ನೇ ಅಷ್ಟೇ ಸಿದ್ದರಾಮಯ್ಯ ಒಬ್ಬರು ಡಕೋಟ ಎಂದು ವಾಗ್ದಾಳಿ ನಡೆಸಿದ್ದ ಸಚಿವರೊಬ್ಬರು ಇದೀಗ ಅವರೇ ನಮ್ಮ ನಾಯಕರು ಎಂದು ಗುಣಗಾನ ಮಾಡಿದ್ದಾರೆ.
ಹೌದು...ನಾವು ಯಾವುದೇ ಪಕ್ಷದಲ್ಲಿ ಇದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ನಾಯಕರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಸಿದ್ದರಾಮಯ್ಯ ಒಬ್ಬರು ಡಕೋಟಾ: ಟಗರಿಗೆ ತಿರುಗೇಟು ಕೊಟ್ಟ ಸಚಿವ
ಸುತ್ತೂರು ಶ್ರೀ ಕ್ಷೇತ್ರದಲ್ಲಿ ಮಂಗಳವಾರ ಆಯೋಜಿಸಿದ್ದ 'ಮಾಸಿಕ ಸಾಮೂಹಿಕ ವಿವಾಹ-95′ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಸಿದ್ದರಾಮಯ್ಯ ನಮ್ಮ ಹಳೇ ನಾಯಕರು. ಕಾಂಗ್ರೆಸ್ ಬಿಟ್ಟ ಮೇಲೆ ಸಿದ್ದರಾಮಯ್ಯರ ಜತೆ ಮೊದಲ ಬಾರಿಗೆ ವೇದಿಕೆ ಹಂಚಿಕೊಂಡಿದ್ದೇನೆ. ಬಹಳ ಸಂತೋಷದಿಂದ ಮಾತನಾಡಿಸಿದರು ಎಂದರು.
ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆಯಲ್ಲಿ ನಾನು ಮಾತನಾಡೋಲ್ಲ ನೀವೇ ಮಾತನಾಡಿ ಎಂದು ಸಿದ್ದರಾಮಯ್ಯಗೆ ಹೇಳಿದೆ. ಅದಕ್ಕೆ 'ಬಹಳ ಕಿಲಾಡಿ ಇದ್ದೀಯಾ ನೀನು' ಅಂತ ಅವರು ಹಾಸ್ಯ ಮಾಡಿದರು. ಅವರು ಜಿಲ್ಲೆಯ ಒಂದೆರಡು ಕೆಲಸಗಳನ್ನು ಮಾಡಿಕೊಡುವಂತೆ ಹೇಳಿದ್ದಾರೆ. ಆ ಕೆಲಸಗಳನ್ನು ಪರಿಶೀಲನೆ ಮಾಡಿ ಅವರ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದರು.
ಇದೇ ಸೋಮಶೇಖರ್ ಅವರು ಮೊನ್ನೇ ಮಾಧ್ಯಮಗಳ ಮುಂದೆ ಮಾತನಾಡಿ, ಸಿದ್ದರಾಮಯ್ಯ ಒಬ್ಬರು ಡಕೋಟಾ. ವಿರೋಧ ಪಕ್ಷದ ನಾಯಕರಾಗಿ ಸರಿಯಾಗಿ ಕೆಲಸ ಕೂಡ ಮಾಡುತ್ತಿಲ್ಲ ಎಂದು ಕಿಡಕಾರಿದ್ದರು.