ಸಚಿವ ಆನಂದ್ ಸಿಂಗ್ ನಡೆಗೆ ರೊಚ್ಚಿಗೆದ್ದಿರುವ ಶಾಸಕ ಸೋಮಶೇಖರ ರೆಡ್ಡಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬಳ್ಳಾರಿ, (ಫೆ.09): ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿರುವ ಸಚಿವ ಆನಂದ್ ಸಿಂಗ್ ಅವರು ಪ್ರಾಬಲ್ಯರಾಗುತ್ತಿದ್ದಾರೆ. ರೆಡ್ಡಿ ಬ್ರದರ್ಸ್‌ಗೆ ಸೆಡ್ಡು ಹೊಡೆದು ತಮ್ಮ ಬೇಡಿಕೆಗಳನ್ನ ಒಂದೊಂದಾಗಿಯೇ ಈಡೇರಿಸಿಕೊಳ್ಳುತ್ತಿದ್ದಾರೆ.
ಹೌದು...ಆನಂದ್ ಸಿಂಗ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಡೆಯಾದ ಬಳಿಕ ಶ್ರೀರಾಮುಲು ಹಾಗೂ ರೆಡ್ಡಿ ಬ್ರದರ್ಸ್‌ಗೆ ತೊಡೆತಟ್ಟಿ ಬಳ್ಳಾರಿ ಉಸ್ತುವಾರಿಯನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನೊಂದು ಹೆಜ್ಜೆ ಮುಂದೋಗಿ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಅಧ್ಯಕ್ಷರಾದರು.
ಆನಂದ ಸಿಂಗ್ ಬೇಡಿಕೆ ಈಡೇರಿಸಿದ ಸಿಎಂ: ಸಂಭ್ರಮಾಚರಣೆಗಾಗಿ ಬೆಂಗ್ಳೂರಿನಿಂದ ಹೊರಟ ಸಚಿವ
ಇದೀಗ ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಿ ಹೊಸ ಜಿಲ್ಲೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಇದು ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್‌ಗೆ ಭಾರೀ ಹಿನ್ನಡೆಯಾಗಿದೆ. ಅದರಲ್ಲೂ ಶಾಸಕ ಜಿ. ಸೋಮಶೇಖರ ರೆಡ್ಡಿ ಆಕ್ರೋಶದ ಕಟ್ಟೆಹೊಡೆದಿದ್ದು, ಉಸ್ತುವಾರಿಯಿಂದ ಆನಂದ್ ಸಿಂಗ್ ತೆರವಿಗೆ ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ತೆರವಿಗೆ ಆಗ್ರಹ
ಜಿಲ್ಲಾ ಉಸ್ತುವಾರಿ ಹೊಣೆಯಿಂದ ಸಚಿವ ಆನಂದ್ ಸಿಂಗ್ ಅವರನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವೆ ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಅವರು ಪರೋಕ್ಷವಾಗಿ ಸಿಎಂಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರಿನ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜಿಲ್ಲೆ ವಿಭಜನೆಯಿಂದ ನೋವಾಗಿದೆ. ಸರ್ಕಾರ ಪಕ್ಷ ನಿಷ್ಠೆಯನ್ನು ಕಡೆಗಣಿಸಿ ಪಕ್ಷಾಂತರಿಗಳಿಗೆ ಮಣೆ ಹಾಕಿದೆ ಎಂದು ಯಡಿಯೂರಪ್ಪ ತೆಗೆದುಕೊಂಡ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದರು.
ಸಚಿವ ಆನಂದ ಸಿಂಗ್ ಕೇಳಿದ್ದನ್ನೆಲ್ಲ ಮುಖ್ಯಮಂತ್ರಿ ಕೊಡುತ್ತಿದ್ದಾರೆ. ಜಿಲ್ಲೆಯನ್ನು ಹೋಳು ಮಾಡಿದ ಉಸ್ತುವಾರಿ ಸಚಿವ ನಮಗೆ ಬೇಡವೇ ಬೇಡ ಎಂದು ಆಗ್ರಹಿಸಿದರು.
. ಆಂಧ್ರ ಗಡಿಯಿಂದ ಬಳ್ಳಾರಿ ಕೇವಲ 10 ಕಿಲೋಮೀಟರ್ ದೂರದಲ್ಲಿದೆ. ಬೆಳಗಾವಿ ಜಿಲ್ಲೆಯ ರೀತಿಯಲ್ಲಿ ಇನ್ನೊಂದು ಜಿಲ್ಲೆಯಲ್ಲಿ ಬೆಂಕಿ ಹಚ್ಚುವ ಪ್ರಯತ್ನದ ಭಾಗವಾಗಿ ವಿಭಜನೆ ನಡೆದಿದೆ ಎಂದು ಹೇಳಿದರು.