ಸಿದ್ದರಾಮಯ್ಯನವರು ವರುಣ ಕ್ಷೇತ್ರದಲ್ಲಿ ಮಾತ್ರ ಪ್ರಬಲರು. ಕೋಲಾರದಲ್ಲಿ ಅಲ್ಲ. ಮಗನ ಮೇಲಿನ ವ್ಯಾಮೋಹದಿಂದ ಕೋಲಾರಕ್ಕೆ ಬಂದಿದ್ದಾರೆ. ನನ್ನ ವಿರುದ್ಧ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯ, ಅಹಿಂದ ನಾಯಕರೇ ಅಲ್ಲ ಎಂದ ವರ್ತೂರು ಪ್ರಕಾಶ್
ಕೋಲಾರ(ಜ.10): ಸಿದ್ದರಾಮಯ್ಯ ನನಗೆ ಪ್ರತಿಸ್ಪರ್ಧಿ ಅಲ್ಲವೇ ಅಲ್ಲ, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರ ಮತ ಕೇಳಲು ಯಾರೂ ಇಲ್ಲ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದರು. ಸೋಮವಾರ ಕೋಲಾರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ವರುಣ ಕ್ಷೇತ್ರದಲ್ಲಿ ಮಾತ್ರ ಪ್ರಬಲರು. ಕೋಲಾರದಲ್ಲಿ ಅಲ್ಲ. ಮಗನ ಮೇಲಿನ ವ್ಯಾಮೋಹದಿಂದ ಕೋಲಾರಕ್ಕೆ ಬಂದಿದ್ದಾರೆ. ನನ್ನ ವಿರುದ್ಧ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯ, ಅಹಿಂದ ನಾಯಕರೇ ಅಲ್ಲ ಎಂದರು.
‘ನಾನು ಒಬ್ಬ ಅಹಿಂದ ಮುಖಂಡ. ನನ್ನ ವಿರುದ್ಧ ಸ್ಪರ್ಧೆ ಮಾಡಲು ಬಂದಿರುವ ಸಿದ್ದರಾಮಯ್ಯಗೆ ಅಹಿಂದ ಮತದಾರರೇ ಸರಿಯಾದ ಪಾಠ ಕಲಿಸುತ್ತಾರೆ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ಗೆ ಇಡೀ ರಾಜ್ಯದಲ್ಲೇ ಹಿನ್ನಡೆಯಾಗುತ್ತದೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡ್ತೀನಿ’ ಎಂದು ತಿಳಿಸಿದರು.
ನನ್ನ ಸ್ಪರ್ಧೆಯಿಂದ ಕುರುಬ ಸಮುದಾಯ ಇಬ್ಬಾಗ ಮಾತು ಸುಳ್ಳು: ಸಿದ್ದರಾಮಯ್ಯ
ನನ್ನ ಸ್ಪರ್ಧೆಯಿಂದ ಕುರುಬ ಸಮುದಾಯ ಇಬ್ಬಾಗ ಮಾತು ಸುಳ್ಳು
ಕೋಲಾರ: ಕುರುಬ ಸಮುದಾಯ ಇಬ್ಬಾಗ ಮಾಡುವ ಮಾತು ಸುಳ್ಳು. ಆ ಒಂದು ಸಮುದಾಯವೊಂದರಿಂದಲೇ ನಾನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲಾ ಜಾತಿ, ಧರ್ಮಗಳವರ ಬೆಂಬಲವೂ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಒಂದೊಮ್ಮೆ ಕೋಲಾರದಲ್ಲಿ ಬಿಜೆಪಿಯಿಂದ ಕುರುಬ ಸಮಾಜದ ವರ್ತೂರು ಪ್ರಕಾಶ್ ಸ್ಪರ್ಧಿಸಿದರೆ, ಕುರುಬ ಸಮುದಾಯ ಇಬ್ಬಾಗವಾಗುವುದಿಲ್ಲವೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಮುದಾಯ ಇಬ್ಬಾಗ ಮಾಡುವ ಮಾತು ಸುಳ್ಳು. ಆ ಒಂದು ಸಮುದಾಯವೊಂದರಿಂದಲೇ ನಾನು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಜನರು ಕೋಲಾರದಲ್ಲಿ ಸ್ಪರ್ಧಿಸಲು ಒತ್ತಡ ಹಾಕಿದ್ದಾರೆ. ಅವರಿಗೆ ಬೇಸರ ತರಿಸಲು ಇಷ್ಟವಿಲ್ಲ. ಹೀಗಾಗಿ, ಇಲ್ಲಿಂದ ಕಣಕ್ಕಿಳಿಯಲು ನಿರ್ಧರಿಸಿದ್ದೇನೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲವೇ ಇಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ. ಒಂದು ಪಕ್ಷ, ಕುಟುಂಬ ಎಂದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಇದನ್ನೇ ಗುಂಪುಗಾರಿಕೆ ಎಂದು ಹೇಳುವುದು ಸರಿಯಲ್ಲ ಎಂದರು.
ಸಿದ್ದರಾಮಯ್ಯಗೆ ಬೆಂಬಲ: ಕೆ.ಎಚ್.ಮುನಿಯಪ್ಪ ಮನವೊಲಿಕೆ ಯಶಸ್ವಿ
ವರುಣದಲ್ಲಿ ಪುತ್ರ ವ್ಯಾಮೋಹದಿಂದ ಕಣಕ್ಕಿಳಿಯುತ್ತಿಲ್ಲವೇ ಎಂದು ಪ್ರಶ್ನಿಸಿದಾಗ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ವರಣದಲ್ಲಿ ಹಾಲಿ ಶಾಸಕ ಡಾ.ಯತೀಂದ್ರ ಇದ್ದಾರೆ. ಅಲ್ಲಿ ಕ್ಷೇತ್ರ ಖಾಲಿ ಇಲ್ಲ. ಕೋಲಾರದಲ್ಲಿ ಹಾಲಿ ಶಾಸಕರೇ ನನಗೆ ಕ್ಷೇತ್ರ ಬಿಟ್ಟು ಕೊಡಲು ಮುಂದೆ ಬಂದಿದ್ದಾರೆ ಎಂದರು.
ನಾನು ಆಯ್ಕೆಯಾದ ಮೇಲೆ ಕ್ಷೇತ್ರಕ್ಕೆ ಬರುವುದಿಲ್ಲ. ರಾಜ್ಯದ ರಾಜಕಾರಣ ಮಾಡಿಕೊಂಡು ಇರುತ್ತೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ಗೆದ್ದರೆ ನಾನು ಪ್ರತಿವಾರ ಕ್ಷೇತ್ರಕ್ಕೆ ಭೇಟಿ ನೀಡುತ್ತೇನೆ. ಎತ್ತಿನಹೊಳೆ ಯೋಜನೆಯನ್ನು 2 ವರ್ಷದಲ್ಲಿ ಮುಗಿಸುತ್ತೇವೆ. ನಿಕ್ಕರ್ ಹಾಕಿಕೊಂಡಿರುವ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ನನ್ನನ್ನು ನೇರವಾಗಿ ಭೇಟಿ ಮಾಡಬಹುದು. ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ನಾನು ಬದ್ದನಾಗಿರುತ್ತೇನೆ ಎಂದರು.