ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ಜತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡಲು ಅವಕಾಶ ನೀಡುವ ವಿಚಾರ ಇದೀಗ ರಾಹುಲ್ ಗಾಂಧಿ ಅಂಗಳ ತಲುಪಿದೆ. ರಾಹುಲ್ ಒಪ್ಪಿದರೆ ಮಾತ್ರ 2 ಕ್ಷೇತ್ರದಲ್ಲಿ ಸಿದ್ದು ಸ್ಪರ್ಧೆಗೆ ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ.
ಬೆಂಗಳೂರು (ಮಾ.26): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದ ಜತೆಗೆ ಕೋಲಾರದಿಂದಲೂ ಸ್ಪರ್ಧೆ ಮಾಡಲು ಅವಕಾಶ ನೀಡುವ ವಿಚಾರ ಇದೀಗ ರಾಹುಲ್ ಗಾಂಧಿ ಅಂಗಳ ತಲುಪಿದೆ. ರಾಹುಲ್ ಒಪ್ಪಿದರೆ ಮಾತ್ರ 2 ಕ್ಷೇತ್ರದಲ್ಲಿ ಸಿದ್ದು ಸ್ಪರ್ಧೆಗೆ ಅವಕಾಶ ಸಿಗಲಿದೆ ಎಂದು ಮೂಲಗಳು ಹೇಳಿವೆ. ‘ಕೋಲಾರ ಕ್ಷೇತ್ರದಿಂದ ಸ್ಪರ್ಧೆ ರಿಸ್ಕ್ ತೆಗೆದುಕೊಳ್ಳಬೇಡಿ. ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಿ’ ಎಂದು ಖುದ್ದು ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದರು. ಹೀಗಾಗಿ, ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಒಪ್ಪಿದ್ದು, ಅದರಂತೆ ಟಿಕೆಟ್ ಕೂಡ ಪ್ರಕಟವಾಗಿದೆ.
ಆದರೆ ಕೋಲಾರ ಟಿಕೆಟ್ ಇನ್ನೂ ಪ್ರಕಟವಾಗಿಲ್ಲ. ಇದೀಗ ಸಿದ್ದರಾಮಯ್ಯ ಅವರು ವರುಣದ ಜತೆಗೆ ಕೋಲಾರದಿಂದ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಹೈಕಮಾಂಡ್‌ಗೂ ತಲುಪಿದೆ. ಆದರೆ, ಕೋಲಾರ ಸ್ಪರ್ಧೆ ಬಗ್ಗೆ ಪುನರ್ ಪರಿಶೀಲಿಸುವಂತೆ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಸೂಚಿಸಿದ್ದರಿಂದ ಇದೀಗ ಕೋಲಾರದಿಂದ ಅವರಿಗೆ ಟಿಕೆಟ್ ನೀಡಬೇಕಾದರೆ ಆ ನಿರ್ಧಾರವನ್ನು ರಾಹುಲ್ ಗಾಂಧಿ ಅವರೇ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ, ಸಿದ್ದರಾಮಯ್ಯ ಅವರ ಈ ಪ್ರಸ್ತಾವನೆಯನ್ನು ರಾಹುಲ್ ಗಾಂಧಿ ಮುಂದಿಡಲು ಕಾಂಗ್ರೆಸ್‌ನ ದೆಹಲಿ ಮುಖಂಡರು ತೀರ್ಮಾನಿದ್ದಾರೆ ಎಂದು ಮೂಲಗಳು ಹೇಳಿವೆ.
ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರು ವಿಜಯೇಂದ್ರ ಸ್ಪರ್ಧೆ ಮಾಡ್ತಾರಾ
ಸಿದ್ದುಗೇಕೆ ಕೋಲಾರ ಸ್ಪರ್ಧೆ ಬಯಕೆ?: ಕೋಲಾರದಿಂದ ಸ್ಪರ್ಧೆಗೆ ಸಕಲ ಸಿದ್ಧತೆ ನಡೆಸಿ ಈ ಹಂತದಲ್ಲಿ ಕಣದಿಂದ ಹಿಂದೆ ಸರಿದರೆ ಅದು ನಕಾರಾತ್ಮಕ ಸಂದೇಶ ರವಾನಿಸಬಹುದು ಎಂಬ ಚಿಂತೆ ಸಿದ್ದರಾಮಯ್ಯ ಅವರಿಗೆ ಇದೆ. ಸೋಲುವ ಭೀತಿಯಿಂದ ಕೋಲಾರದಲ್ಲಿ ಸ್ಪರ್ಧಿಸಲಿಲ್ಲ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಲು ಅವರು ಸಿದ್ಧರಿಲ್ಲ. ಅಲ್ಲದೆ, ಕೋಲಾರ ಹಾಗೂ ವರುಣ ಎರಡು ಕ್ಷೇತ್ರದಿಂದ ಸ್ಪರ್ಧಿಸಿ ಒಂದು ವೇಳೆ ಎರಡು ಕ್ಷೇತ್ರಗಳಲ್ಲೂ ಗೆಲುವು ಕಂಡರೆ ಆಗ ತಮ್ಮ ಪುತ್ರನಿಗೆ ವರುಣ ಕ್ಷೇತ್ರವನ್ನು ಬಿಟ್ಟುಕೊಡುವ ಆಲೋಚನೆಯೂ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ.
ಈ ಕಾರಣದಿಂದಲೇ ಅವರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಯಕೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ ಮತ್ತು ತಮ್ಮ ಈ ನಿಲುವನ್ನು ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ‘ಇದೀಗ ಅವರ ಕೋಲಾರ ಸ್ಪರ್ಧೆ ತೀರ್ಮಾನ ರಾಹುಲ್ ಗಾಂಧಿ ಅಂಗಳದಲ್ಲಿದೆ. ರಾಹುಲ್ ಒಪ್ಪಿದರೆ ಕೋಲಾರದಲ್ಲೂ ಸ್ಪರ್ಧೆ. ಇಲ್ಲದಿದ್ದರೆ ವರುಣದಿಂದ ಮಾತ್ರ ಸಿದ್ದರಾಮಯ್ಯ ಸ್ಪರ್ಧಿಸಬೇಕಾಗುತ್ತದೆ’ ಎಂದು ಮೂಲಗಳು ಹೇಳಿವೆ.
4 ಅಪ್ಪ-ಮಕ್ಕಳ ಜೋಡಿಗೆ ಕಾಂಗ್ರೆಸ್ ಮಣೆ: ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ನಾಲ್ಕು ಅಪ್ಪ-ಮಕ್ಕಳ ಜೋಡಿಗಳಿಗೆ ಟಿಕೆಟ್ ಘೋಷಿಸಲಾಗಿದ್ದು, ತನ್ಮೂಲಕ 124 ಕ್ಷೇತ್ರಗಳ ಪೈಕಿ ಒಟ್ಟು ಎಂಟು ಕ್ಷೇತ್ರಗಳಲ್ಲಿ ಅಪ್ಪ-ಮಕ್ಕಳು ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ. ಬಿಟಿಎಂ ಬಡಾವಣೆ ಕ್ಷೇತ್ರದಿಂದ ರಾಮಲಿಂಗಾರೆಡ್ಡಿ ಹಾಗೂ ಜಯನಗರ ಕ್ಷೇತ್ರದಿಂದ ಪುತ್ರಿ ಸೌಮ್ಯಾರೆಡ್ಡಿ ಅವರಿಗೆ ಮತ್ತೊಮ್ಮೆ ಟಿಕೆಟ್ ಘೋಷಿಸಲಾಗಿದೆ.
ವಿಜಯನಗರ ಕ್ಷೇತ್ರದಿಂದ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಕ್ಷೇತ್ರದಿಂದ ಪುತ್ರ ಪ್ರಿಯಕೃಷ್ಣ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರದಿಂದ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಕಣಕ್ಕಿಳಿಯಲಿದ್ದಾರೆ. ಈ ಮೂರೂ ಅಪ್ಪ ಮಕ್ಕಳ ಜೋಡಿಗಳು ಕಳೆದ ಬಾರಿಯ (2018) ಚುನಾವಣೆಯಲ್ಲೂ ಒಟ್ಟಿಗೆ ಕಣಕ್ಕಿಳಿದಿದ್ದರು. ಆದರೆ, ಈ ಪೈಕಿ ರಾಮಲಿಂಗಾರೆಡ್ಡಿ ಹಾಗೂ ಸೌಮ್ಯಾರೆಡ್ಡಿ ಮಾತ್ರ ಇಬ್ಬರೂ ವಿಧಾನಸಭೆಗೆ ಪ್ರವೇಶಿಸಿದರು. ಉಳಿದಂತೆ ಎಂ. ಕೃಷ್ಣಪ್ಪ ಹಾಗೂ ಶಾಮನೂರು ಶಿವಶಂಕರಪ್ಪ ಅವರು ವಿಧಾನಸಭೆಗೆ ಪ್ರವೇಶಿಸಿದರೂ ಅವರ ಪುತ್ರರು ಸೋಲುಂಡಿದ್ದರು.
ಚುನಾವಣೆ ಘೋಷಣೆ ನಂತರ ಕಾಂಗ್ರೆಸ್ 2ನೇ ಪಟ್ಟಿ: 100 ಕ್ಷೇತ್ರಗಳ ಟಿಕೆಟ್‌ಗೆ ಇದೆ ಭಾರಿ ಪೈಪೋಟಿ
ಇದೀಗ ಅಪ್ಪ-ಮಕ್ಕಳ ಜೋಡಿಗೆ ಹೊಸ ಸೇರ್ಪಡೆಯಾಗಿ ಕೆ.ಎಚ್. ಮುನಿಯಪ್ಪ ಹಾಗೂ ರೂಪಕಲಾ ಶಶಿಧರ್ ಅವರಿಗೆ ಟಿಕೆಟ್ ನೀಡಲಾಗಿದೆ. ಈವರೆಗೆ ಲೋಕಸಭೆಗೆ ಸ್ಪರ್ಧಿಸುತ್ತಿದ್ದ ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ದೇವನಹಳ್ಳಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕೆಜಿಎಫ್‌ನಿಂದ ಪುತ್ರ ರೂಪಕಲಾ ಶಶಿಧರ್ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಕಳೆದ ಬಾರಿ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಅಪ್ಪ-ಮಕ್ಕಳು ಇಬ್ಬರೂ ವಿಧಾನಸಭೆಗೆ ಪ್ರವೇಶಿಸಿದ್ದರು. ಈ ಬಾರಿ ಯತೀಂದ್ರ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರಕ್ಕೆ ಸಿದ್ದರಾಮಯ್ಯ ವಾಪಸ್ಸಾಗಿರುವ ಹಿನ್ನೆಲೆಯಲ್ಲಿ ಯತೀಂದ್ರ ಕಣಕ್ಕಿಳಿಯುವುದು ಅನುಮಾನ.