ನಾನು ಸಿಎಂ ಆಗಬೇಕು ಎಂದು ಹೇಳುತ್ತಿರುವ ಕೆಲ ಸಚಿವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಗೇಟು ನೀಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರ ಸಂತೆಯಲ್ಲಿ ನೂತನ ಸಾರಿಗೆ ಬಸ್ಸು ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.11): ನಾನು ಸಿಎಂ ಆಗಬೇಕು ಎಂದು ಹೇಳುತ್ತಿರುವ ಕೆಲ ಸಚಿವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಿರುಗೇಟು ನೀಡಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶನಿವಾರ ಸಂತೆಯಲ್ಲಿ ನೂತನ ಸಾರಿಗೆ ಬಸ್ಸು ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಕೆಲ ಹಿರಿಯ ಸಚಿವರು ಸೇರಿದಂತೆ ಏಳೆಂಟು ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಆದರೆ ಅವರ ಹೇಳಿಕೆ ಅರ್ಥವೇ ಇಲ್ಲ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಐದು ವರ್ಷ ಅವಧಿಯನ್ನು ಪೂರೈಸುತ್ತಾರೆ. ಮುಂದೆಯೂ ಅವರೇ ಸಿಎಂ ಆಗಿರುತ್ತಾರೆ ವಿನಃ ಯಾವುದೇ ರೀತಿಯಿಂದ ಸಿಎಂ ಬದಲಾವಣೆ ಇಲ್ಲವೇ ಇಲ್ಲ.
ಆದರೆ ಆ ರೀತಿ ಮಾತನಾಡುವುದಕ್ಕೆ ಅರ್ಥವೇ ಇಲ್ಲ. ಹಾಗೆ ಮಾತನಾಡುವುದಕ್ಕೆ ಹೋಗಲೂಬಾರದು ಅಂತ ನಾನು ಮನವಿ ಮಾಡುತ್ತೇನೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು ಅವರೆಲ್ಲರೂ ಸಿಎಂ ಆಗುತ್ತೇನೆ ಎನ್ನುತ್ತಿರುವುದು 2028 ರ ಚುನಾವಣೆಗೆ. ಆ ಚುನಾವಣೆಯಲ್ಲಿ ಗೆದ್ದು ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ ಅಷ್ಟೇ ಎಂದಿದ್ದಾರೆ. ಮುಡಾ ವಿಚಾರದಲ್ಲಿ ಪ್ರಾಸಿಕ್ಯೂಷನ್ ರಾಜ್ಯಪಾಲರು ಒಪ್ಪಿಗೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟಿನಲ್ಲಿ ರಿಟ್ ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಈ ಕುರಿತು ಕೋರ್ಟ್ ತೀರ್ಪು ನೀಡುತ್ತದೆ.
ಭಾರತೀಯ ಸೇನೆಯಿಂದ ವಿಜಯವಾಡ ಪ್ರವಾಹ ಪೀಡಿತ ಜನರ ರಕ್ಷಣೆ!
ಮುಡಾದಲ್ಲಿ ಆಗಿರುವ ಹಗರಣದಲ್ಲಿ ಸಿಎಂ ಪಾತ್ರ ಇದೆಯೋ ಇಲ್ಲವೋ ಎನ್ನುವುದನ್ನು ಕೋರ್ಟ್ ಹೇಳಬೇಕು ಎಂದಿದ್ದಾರೆ. ಇನ್ನು ದೀಪಾವಳಿ ಬಳಿಕ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ನಾವು ಸಿಎಂ ಆಗಬಹುದು ಎಂದು ವಿಜಯೇಂದ್ರ ಹಾಗೂ ಆರ್. ಅಶೋಕ್ ಕನಸು ಕಾಣುತ್ತಿದ್ದಾರೆ, ಕಾಣಲಿ ಬಿಡಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಮ್ಮ ಸರ್ಕಾರ ಯಾಕೆ ಬೀಳುತ್ತೆ, ನಮ್ಮ ಸರ್ಕಾರಕ್ಕೆ ಮೆಜಾರಿಟಿ ಇಲ್ವಾ, ನಮ್ಮ ಜೊತೆಗೆ 136 ಶಾಸಕರು ಇದ್ದಾರೆ.
ಇನ್ನು ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರಕ್ಕೆ ಸ್ವಂತ ಬಲ ಇಲ್ಲ. ಯಾವುದೋ ಪಕ್ಷಗಳನ್ನು ನಂಬಿಕೊಂಡು ರಾಜ್ಯಭಾರ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಸುಭದ್ರವಾಗಿ ಇರುತ್ತೆ. ಹೀಗಾಗಿ ಕೇಂದ್ರ ಸರ್ಕಾರದ ಬಗ್ಗೆ ವಿಜಯೇಂದ್ರ ಮತ್ತು ಆರ್ ಅಶೋಕ್ ಯೋಚಿಸಲಿ ಎಂದಿದ್ದಾರೆ. ರಾಜ್ಯ ಸರ್ಕಾರ ಬಿದ್ದು ಹೋಗುತ್ತದೆ ಅಂತ ಬಿಜೆಪಿಯವರು ಕನಸು ಕಾಣುತ್ತಿದ್ದಾರೆ, ಕಾಣಲಿ ಬಿಡಿ. ಕನಸು ಕಾಣುವವರಿಗೆ ಬೇಡ ಎನ್ನಲು ಸಾಧ್ಯವೇ. ವಿಜಯೇಂದ್ರ ಸಿಎಂ ಆದಂತೆ ಕನಸು ಕಾಣುತ್ತಿದ್ದರೆ, ಬಿಜೆಪಿಯ ಇನ್ನು ಕೆಲವರು ಉಪಮುಖ್ಯಮಂತ್ರಿ ಆದಂತೆ ಕನಸು ಕಾಣುತ್ತಿದ್ದಾರೆ.
ರೇಷ್ಮೆ ಅಭಿವೃದ್ಧಿಗೆ ಬಸವರಾಜು ವರದಿ ಅನುಷ್ಠಾನಗೊಳಿಸಿ: ಸಚಿವ ಕೆ.ವೆಂಕಟೇಶ್
ನಿಗಮ ಮಂಡಳಿಗಳ ಸ್ಥಾನಮಾನವೂ ಸಿಗುವ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಬದಲಾವಣೆಯಾದರೆ ಕಾಂಗ್ರೆಸ್ ನ 40 ಶಾಸಕರು ಹೊರಹೋಗಲಿದ್ದಾರೆ. ಆಗ ಸರ್ಕಾರ ಬೀಳುತ್ತೆ, ಆಪರೇಷನ್ ಕಮಲ ಆಗಬಹುದೇ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು ಆಪರೇಷನ್ ಕಮಲ ಸಾಧ್ಯವೇ ಇಲ್ಲ. ಅವರ ಪಕ್ಷದಲ್ಲಿ ಇರುವ ಜಗಳಗಳನ್ನು ಸರಿಮಾಡಿಕೊಳ್ಳಲಿ. ಆಂತರಿಕ ಕಿತ್ತಾಟಗಳು ತುಂಬಾ ಇವೆ ಅವುಗಳನ್ನು ಸರಿಮಾಡಿಕೊಳ್ಳಲಿ. ನಮ್ಮ ಪಕ್ಷದ ಶಾಸಕರಲ್ಲಿ 40 ಶಾಸಕರಲ್ಲ 4 ಶಾಸಕರು ಹೊರಹೋಗಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.