ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವಂತಹ ದೌರ್ಭಾಗ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಬೆಂಗಳೂರು (ನ.04): ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವಂತಹ ದೌರ್ಭಾಗ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂಬುದಾಗಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ದಿನದಿಂದ ಕಾಂಗ್ರೆಸ್ ಸರ್ಕಾರದ ಅವನತಿ ಆರಂಭವಾದಂತಾಗಿದೆ ಎಂದೂ ಅವರು ಲೇವಡಿ ಮಾಡಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದರು.
ಸಿದ್ದರಾಮಯ್ಯ ಅವರು ನಾನೇ ಐದು ವರ್ಷ ಮುಖ್ಯ ಮಂತ್ರಿ ಎಂದು ಹೇಳಿದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದಿದ್ದಾರೆ. ಇದರಿಂದ ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲ್ಲ ಎಂಬುದು ಸ್ಪಷ್ಟ ಎಂದರು. ರೈತರು ಆತ್ಮಹತ್ಯೆ ಮಾಡಿಕೊಳ್ಳಲು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತಂದಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಅಲ್ಲ, ಸಮ್ಮಿಶ್ರ ಸರ್ಕಾರ. ರಾಜ್ಯದಲ್ಲಿ ಈ ಸರ್ಕಾರ ಇರಬಾರದು ಎಂದು ಹೇಳಿದರು.
ಬಿಎಸ್‌ವೈದು ಗುಲಾಮಿ ಮನಸ್ಥಿತಿ: ಸಿದ್ದರಾಮಯ್ಯ ಕಿಡಿ
ಇಲ್ಲಿ ಎಷ್ಟು ಅಜಿತ್ ಪವಾರ್‌ಗಳಿದ್ದಾರೋ ಗೊತ್ತಿಲ್ಲ: ಅಲ್ಲಿ (ಮಹಾರಾಷ್ಟ್ರ) ಒಬ್ಬನೇ ಅಜಿತ್ ಪವಾರ್ ಇದ್ದಾರೆ. ಇಲ್ಲಿ (ಕರ್ನಾಟಕದಲ್ಲಿ) ಎಷ್ಟು ಅಜಿತ್ ಪವಾರ್‌ಗಳು ಇದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಶಾಸಕರಿಗೆ ಅನುದಾನ ನೀಡಿಲ್ಲ. ಹೀಗಾಗಿ ಅರು ತಿಂಗಳಲ್ಲಿ ಈ ಸರ್ಕಾರ ಇರುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ಆರು ತಿಂಗಳು ಈ ಸರ್ಕಾರ ಇರಬಹುದು ಎಂದು ನಾನು ಹೇಳಿದರೆ ಕಾಂಗ್ರೆಸ್ ಶಾಸಕರೇ ನನಗೆ ಬೈಯಬಹುದು. ನಾವೇನು ಸರ್ಕಾರ ಬೀಳಿಸಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಇದುವರೆಗೆ ನಮ್ಮ ಪಕ್ಷದ ಒಬ್ಬ ಶಾಸಕನನ್ನೂ ಸೇರ್ಪಡೆ ಮಾಡಿಕೊಳ್ಳಲು ಆಗಿಲ್ಲ. ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಶಾಸಕರ ವಿರುದ್ಧ ಮಾತನಾಡಲ್ಲ. ಯಾಕೆಂದರೆ ಅವರೆಲ್ಲಾ ಮುಂದಿನ ದಿನದಲ್ಲಿ ನಮ್ಮಲ್ಲಿಗೆ ಬರುತ್ತಾರೆ ಎಂದು ಮಾರ್ಮಿಕವಾಗಿ ತಿಳಿಸಿದರು. ಕಾಂಗ್ರೆಸ್‌ನಲ್ಲಿ ಎರಡು ಗುಂಪುಗಳಿವೆ. ಬರ ಪರಿಸ್ಥಿತಿ ಮತ್ತು ರೈತರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಮಾತಿಗೆ ಮೊದಲು ಕೇಂದ್ರದ ಪರಿಹಾರ ನೀಡಿಲ್ಲ ಎಂದು ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಒಬ್ಬ ಉಸ್ತುವಾರಿ ಸಚಿವನೂ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ.
ಕಾಂಗ್ರೆಸ್‌ನ ಒಳಜಗಳದಿಂದಲೇ ರಾಜ್ಯ ಸರ್ಕಾರ ಪತನ: ನಳಿನ್ ಕಟೀಲ್
ಪರಿಹಾರ ನೀಡುವುದಿರಲಿ, ರೈತರಿಗೆ ಕನಿಷ್ಠ ಸಾಂತ್ವನವನ್ನೂ ಹೇಳಿಲ್ಲ. ಇಂತಹ ಭೀಕರ ಬರಗಾಲ ಹಿಂದೆ ಬಂದಿರಲಿಲ್ಲ. ಆದರೂ ಕಾಂಗ್ರೆಸ್ ನಾಯಕರು ಕುರ್ಚಿ ಕಚ್ಚಾಟದಲ್ಲಿ ತೊಡಗಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಆಪರೇಷನ್ ಕಮಲದ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರು. ನೀಡಲು ನಮಗೇನು ಗ್ರಹಚಾರ ಕೆಟ್ಟಿದೆಯಾ? ಇದರ ಬಗ್ಗೆ ನಾವು ಚರ್ಚೆಗೆ ಸಿದ್ಧ. ಅವರ ಶಾಸಕರನ್ನು ಚರ್ಚೆಗೆ ಕರೆತರಲಿ. ನಾವು ಅವರಿಗೆ 50 ಕೋಟಿ ರು. ಆಫರ್ ಮಾಡಿದ್ದೇವೆ ಎಂದು ಹೇಳಿದರೆ, ನಾವು ಭಿಕ್ಷೆಯಾದರೂ ಬೇಡಿ 50 ಕೋಟಿ ರು. ತಂದು ಕೊಡುತ್ತೇವೆ ಎಂದು ಕಿಡಿಕಾರಿದರು.