ಬಿಎಸ್‌ವೈದು ಗುಲಾಮಿ ಮನಸ್ಥಿತಿ: ಸಿದ್ದರಾಮಯ್ಯ ಕಿಡಿ

Published : Nov 04, 2023, 12:26 PM IST
ಬಿಎಸ್‌ವೈದು ಗುಲಾಮಿ ಮನಸ್ಥಿತಿ: ಸಿದ್ದರಾಮಯ್ಯ ಕಿಡಿ

ಸಾರಾಂಶ

‘ಒಂದು ಕಾಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗುಲಾಮಿ ಮನೋಭಾವ ಬೆಳೆಸಿಕೊಂಡಿರುವುದು ವಿಷಾದನೀಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

ಬೆಂಗಳೂರು (ನ.04): ‘ಒಂದು ಕಾಲದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಬಾಯಿಗೆ ಬಂದಂತೆ ಟೀಕಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಗುಲಾಮಿ ಮನೋಭಾವ ಬೆಳೆಸಿಕೊಂಡಿರುವುದು ವಿಷಾದನೀಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. 

‘ಪ್ರತಿನಿತ್ಯ ಬೈದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯಾಕೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗುತ್ತಾರೆ’ ಎಂಬ ಯಡಿಯೂರಪ್ಪ ಟೀಕೆಗೆ ಪ್ರತಿಕ್ರಿಯಿಸಿ ಸರಣಿ ಟ್ವೀಟ್ ಮಾಡಿರುವ ಅವರು, ‘ಯಡಿಯೂರಪ್ಪ ಅವರ ಹೇಳಿಕೆ ರಾಜ್ಯದ ಆರೂವರೆ ಕೋಟಿ ಜನರಿಗೆ ಮಾಡಿದ ಅವಮಾನ. ನರೇಂದ್ರ ಮೋದಿಯವರ ವಿರುದ್ಧ ವೈಯಕ್ತಿಕವಾಗಿ ನನಗೇನು ಪ್ರೀತಿ ಇಲ್ಲವೇ ದ್ವೇಷ ಇಲ್ಲ. ವೈಯಕ್ತಿಕವಾಗಿ ಅವರೇನು ನನಗೆ ಹಾನಿ ಮಾಡಿಲ್ಲ. ಆದರೆ ಆರೂವರೆ ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಮುಖ್ಯಮಂತ್ರಿಯಾಗಿ ನಮ್ಮ ಜನರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಅನ್ಯಾಯವನ್ನು ಕಂಡು ಕಣ್ಣುಮುಚ್ಚಿಕೊಂಡು ಇರಲಾಗುವುದಿಲ್ಲ. ಈ ಪ್ರಶ್ನಿಸುವ ಕೆಲಸವನ್ನು ಮಾಡದೆ ಇದ್ದರೆ ಅದು ಜನದ್ರೋಹವಾಗುತ್ತದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ ಒಳಜಗಳದಿಂದಲೇ ರಾಜ್ಯ ಸರ್ಕಾರ ಪತನ: ನಳಿನ್ ಕಟೀಲ್

ಮೋದಿಯವರು ಅರಸರಲ್ಲ: ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವುದನ್ನು ಯಡಿಯೂರಪ್ಪ ಅವರು ಮರೆತುಬಿಟ್ಟಂತಿದೆ. ಕೇಂದ್ರ ಸರ್ಕಾರ ಎಂದರೆ ಅರಸೊತ್ತಿಗೆಯೂ ಅಲ್ಲ, ಮೋದಿಯವರು ಅರಸರೂ  ಅಲ್ಲ. ಅವರೂ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿ ಅಷ್ಟೆ. ಒಕ್ಕೂಟ ವ್ಯವಸ್ಥೆಯಲ್ಲಿರುವ ಮುಖ್ಯಮಂತ್ರಿಗಳು ಪ್ರಧಾನಿಯ ಗುಲಾಮರಲ್ಲ. ಇಷ್ಟೊಂದು ದೀರ್ಘಕಾಲ ರಾಜಕೀಯ ದಲ್ಲಿರುವ ಯಡಿಯೂರಪ್ಪನವರಿಗೆ ಪ್ರಜಾಪ್ರಭುತ್ವದ ಈ ಮೂಲ ಪಾಠ ತಿಳಿಯದೆ ಇರುವುದು ದುರಂತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಹಳ ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ರೀತಿ ಹೇಳಿಕೆ ನೀಡುವ ಯಾವ ನೈತಿಕತೆಯೂ ಇಲ್ಲ. ಬಿಜೆಪಿ ತೊರೆದು ಸ್ವಂತ ಪಕ್ಷ ಕಟ್ಟಿಕೊಂಡ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬೆಂಬಲಿಗರು ಕೇವಲ ಮೋದಿಯವರ ವಿರುದ್ಧ ಮಾತ್ರ ಅಲ್ಲ ಎಲ್.ಕೆ.ಅಡ್ವಾಣಿಯವರಂತಹ ಪಕ್ಷದ ಹಿರಿಯ ನಾಯಕರ ವಿರುದ್ಧ ಹೇಗೆಲ್ಲಾ ಬೈದಿದ್ದಾರೆ ಎನ್ನುವುದನ್ನು ರಾಜ್ಯದ ಜನ ಕಂಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನೂ ನಿಲ್ಲದ ಸಿಎಂ ಚರ್ಚೆ: ಹೈಕಮಾಂಡ್ ಸೂಚನೆಗೂ ಡೋಂಟ್‌ಕೇರ್

ರಾಜಾಹುಲಿ ಇಲಿಯಂತೆ ವರ್ತಿಸಬಾರದು: ಯಡಿಯೂರಪ್ಪ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರೂ ಹೊತ್ತು ಹಾಡಿ ಹೊಗಳುತ್ತಿದ್ದಾರೆ. ಹೀಗಿದ್ದರೂ ಈಗಲೂ ಅವರಿಗೆ ಕೂತು ನಿರಾಳವಾಗಿ ಮಾತನಾಡಲು ಮೋದಿಯವರು ಭೇಟಿಗೆ ಒಂದು ಅವಕಾಶ ನೀಡುತ್ತಿಲ್ಲ. ದೆಹಲಿಗೆ ಹೋಗಿ ದಿನಗಟ್ಟಲೆ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ರಾಜಾ ಹುಲಿ ಎಂದು ಕರೆಸಿಕೊಳ್ಳುವ ಯಡಿಯೂರಪ್ಪನವರು ನರೇಂದ್ರ ಮೋದಿಯವರ ಮುಂದೆ ಇಲಿಯಂತೆ ವರ್ತಿಸುವುದು ಅವರ ವ್ಯಕ್ತಿತ್ವಕ್ಕೆ ಭೂಷಣ ಅಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್