
ಚಿಕ್ಕಮಗಳೂರು (ಮಾ.02): ರಾಜ್ಯ ಸರ್ಕಾರ ಕರ್ನಾಟಕವನ್ನು ಸಾಲದ ಕೂಪಕ್ಕೆ ತಳ್ಳಿರುವುದು ನಿಜಕ್ಕೂ ದುರ್ದೈವ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ಮಾ. 7 ರಂದು 16ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಯಾವ ರೀತಿಯ ಬಜೆಟ್ ಮಂಡನೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ ನ್ನು ರಾಜ್ಯದ ಜನ ಎದುರು ನೋಡುತ್ತಿದ್ದಾರೆ. ಜನರಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡದಿದ್ದರಿಂದ ಜನ ಇಂದು ಭ್ರಮನಿರಸರಾಗಿದ್ದಾರೆ ಎಂದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಯಾವುದೇ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗದೆ ಕರ್ನಾಟಕ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿರುವುದು ನಿಜಕ್ಕೂ ದುರ್ದೈವ. ಇತ್ತೀಚೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ನಮ್ಮ ರಾಜ್ಯದಲ್ಲಿ ಮೊದಲ ಬಾರಿಗೆ ವಿವಿಧ ಇಲಾಖೆಗಳಿಂದ ವಿದ್ಯುತ್ ಬಿಲ್ ಕಟ್ಟಲು ಸಾಧ್ಯ ವಾಗಿಲ್ಲ. ಆರು ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ ಎಂದು ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಹಿಂದೆಂದೂ ಇಂಥ ದುಸ್ಥಿತಿ ಬಂದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿಯೋಜನೆಯಡಿ ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿಗೆ ಏಳು ಸಾವಿರ ಕೋಟಿ ರು.ಪಾವತಿಸಬೇಕಿದೆ. ಆದರೆ, ಇದುವರೆಗೆ ಹಣ ಪಾವತಿಸಿಲ್ಲ. ಒಟ್ಟಾರೆಯಾಗಿ ಕಳೆದ ಎರಡು ವರ್ಷದಿಂದ ಯಾವುದೇ ಅಭಿವೃದ್ಧಿ ಮಾಡದೆ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಈ ಸರ್ಕಾರದಿಂದ ಬಡವರು, ಮಹಿಳೆಯರು, ಯುವಕರು ಹಾಗೂ ರೈತರಿಗೆ ಅನುಕೂಲವಾಗುತ್ತಿಲ್ಲ. ಇಂಥ ಜನ ವಿರೋಧಿ ಸರ್ಕಾರವನ್ನು ಜನ ಎಂದೂ ನೋಡಿರಲಿಲ್ಲ. ಹೀಗಾಗಿಯೇ ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು. ಬೆಳಗಾವಿ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಕೆಲವು ಪುಂಡರು ಎರಡು ರಾಜ್ಯಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇದು ಸರಿಯಲ್ಲ. ಯಾರು ತಲೆಹರಟೆ ಮಾಡಿದ್ದಾರೆಯೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಿಎಸ್‌ವೈ, ವಿಜಯೇಂದ್ರ ಪರ ಬೃಹತ್ ಸಮಾವೇಶ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಸರ್ಕಾರದ ಯೋಗ್ಯತೆಗೆ 138 ಶಾಸಕರಿಂದ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಇನ್ನಷ್ಟು ಶಾಸಕ ರನ್ನು ಹೊತ್ತುಕೊಂಡು ಹೋಗಿ ಏನು ಕಡಿಯುತ್ತಾರೆ. ಆಡಳಿತ ಪಕ್ಷದ ಶಾಸಕರೇ ಇಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶಾಸಕರು ಅಭಿವೃದ್ಧಿಗೆ ಅನುದಾನವಿಲ್ಲದೆ ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ಇನ್ನಷ್ಟು ಶಾಸಕರನ್ನು ಹೊತ್ತುಕೊಂಡು ಹೋಗಿ ಏನು ಮಾಡುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.