ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ 5 ಎ ಕಾಲುವೆ ಭಾರೀ ಸದ್ದು ಮಾಡುತ್ತಿದ್ದು, ಆಕಾಶ ಕಳಚಿದರೂ 5 ಎ ಕಾಲುವೆ ಯೋಜನೆ ಜಾರಿ ಖಚಿತ ಎಂದು ಸಿದ್ದರಾಮಯ್ಯ ಮಾತು ಕೊಟ್ಟಿದ್ದಾರೆ.
ರಾಯಚೂರು, (ಏ.06): ಮಸ್ಕಿ ಉಪಚುನಾವಣೆಯಲ್ಲಿ ಈ ಭಾಗದ ಪ್ರಮುಖ ಬೇಡಿಕೆ 5 ಎ ಕಾಲುವೆ. ಈ ಯೋಜನೆ ಜಾರಿಗೆಗಾಗಿ ಹಲವು ವರ್ಷಗಳಿಂದ ಪ್ರತಿಭಟನೆ, ಧರಣಿಗಳು ನಡೆಯುತ್ತಲೇ ಇವೆ. ಆದ್ರೆ, ಈವರೆಗೂ ಯಾವುದೇ ಭರವಸೆ ಈಡೇರಿಲ್ಲ.
ಆದ್ರೆ, ಇದೀಗ ಉಪಚುನಾವಣೆ ಸಮಯದಲ್ಲಿ 5 ಎ ಕಾಲುವೆ ಭಾರೀ ಚರ್ಚೆಯಾಗುತ್ತಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಬಿಸಿ ಮುಟ್ಟಿಸಲು ಹೋರಾಟಗಾರರು ಮುಂದಾಗಿದ್ದಾರೆ.
ಇನ್ನು ಮಸ್ಕಿ ಕ್ಷೇತ್ರದ ಪಾಮನಕಲ್ಲೂರಿನಲ್ಲಿ ಎನ್ ಆರ್ ಬಿಸಿ 5ಎ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ದಂಡು ಭೇಟಿ ನೀಡಿ ಚರ್ಚೆ ಮಾಡಿತು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಎನ್‌ಆರ್ ಬಿಸಿ 5 ಎ ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮುಂದಿನ ಬಾರಿ ಅಧಿಕಾರಕ್ಕೆ ಬಂದಲ್ಲಿ ಎಷ್ಟೇ ಖರ್ಚಾದರೂ ಯೋಜನೆ ಜಾರಿ ಮಾಡುವುದಾಗಿ ಭರವಸೆ ನೀಡಿದರು.
ನಮ್ಮ ಮೇಲೆ ವಿಶ್ವಾಸವಿಡಿ. ನಾನು ಕೊಟ್ಟ ಮಾತು ತಪ್ಪಿಲ್ಲ. ಆಕಾಶ ಕಳಚಿದರೂ ಯೋಜನೆ ಜಾರಿ ಖಚಿತ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವಿಚಾರವಾಗಿ ಇತ್ತೀಚಿಗೆ ವಟಗಲ್ ಹಾಗು ಅಮಿನಗಡದಲ್ಲಿ ಗ್ರಾಮಸ್ಥರು ಸಚಿವ ಶ್ರೀರಾಮುಲು ಹಾಗೂ ಸಂಸದ ಸಂಗಣ್ಣ ಕರಡಿಗೆ ಮುತ್ತಿಗೆ ಹಾಕಿದ್ದರು.