
ಕೆ.ಆರ್.ಪೇಟೆ (ಜು.02): ಯಾರೋ ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರಿ ಲಾಟರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಜನತಾದಳ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ಬೃಹತ್ ಕಾರ್ಯಕರ್ತರ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸಿದ್ದರಾಮಯ್ಯರನ್ನು ನಂಬಿ ಹೋದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರ ಗತಿ ಏನಾಗಿದೆ. ಬೀದಿಯಲ್ಲಿ ಬಂದು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಲಾಟರಿ ಸಿಎಂ ಅಂತ ಅವರ ಪಕ್ಷದಲ್ಲೇ ಮಾತಾಡುತ್ತಿದ್ದಾರೆ. ಇದಕ್ಕೆ ಉತ್ತರಿಸಿ ಎಂದು ಸವಾಲು ಹಾಕಿದರು. ಬಿ.ಆರ್.ಪಾಟೀಲ್‌ರಂತಹ ಕಾಂಗ್ರೆಸ್ ಶಾಸಕರೇ ಬೀದಿಗಿಳಿದು ಸಿಎಂ, ಪಕ್ಷದ ವಿರುದ್ದ ಧ್ವನಿಯೆತ್ತಿದ್ದಾರೆ. ರಸ್ತೆ, ಚರಂಡಿ, ಶಿಥಿಲವಾದ ಶಾಲೆಗಳ ಪುನರ್ ನಿರ್ಮಾಣಕ್ಕೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ. ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲೂ ನಮ್ಮ ಸರ್ಕಾರದಲ್ಲಿ ಹಣ ಕೊಡ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ದೂರುತ್ತಿದ್ದಾರೆ ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಅವರೇ ನೀವು ಜೆಡಿಎಸ್ ಪಕ್ಷದ ಬಗ್ಗೆ ಚರ್ಚಿಸುವುದನ್ನು ಬಿಟ್ಟು ನಿಮ್ಮ ಪಕ್ಷದ ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮ್ಮ ರಾಜಕೀಯ ಅನುಭವಕ್ಕಾಗಿರುವಷ್ಟು ವಯಸ್ಸು ನನಗಾಗಿಲ್ಲ. ಆದರೆ, ನಮ್ಮ ಪಕ್ಷದ ಇತಿಹಾಸದ ಬಗ್ಗೆ ನನಗೆ ಅರಿವಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದಲ್ಲಿ ಜೆಡಿಎಸ್ ಬಲ ಕುಂದಿಲ್ಲ ಎಂದರು. ನಿಮ್ಮನ್ನು ರಾಜಕೀಯವಾಗಿ ಬೆಳೆಸಿದ್ದು ಜೆಡಿಎಸ್. ನಮ್ಮ ಪಕ್ಷದಲ್ಲಿ ಸಾಕಷ್ಟು ಅನುಭವಿ ಶಾಸಕರಿದ್ದರೂ ಪಕ್ಷದ ನಾಯಕರು ನಿಮಗೆ ಉನ್ನತ ಸ್ಥಾನ, ಡಿಸಿಎಂ ಸ್ಥಾನ ನೀಡಿ ಗೌರವಿಸಿದ್ದರು. ಆದರೆ, ಜೆಡಿಎಸ್ ಪಕ್ಷಕ್ಕೆ ಮೋಸ, ದ್ರೋಹ ಮಾಡಿ ಹೋದ ನೀವು ಈಗ ಜೆಡಿಎಸ್‌ಗೆ ಭವಿಷ್ಯವಿಲ್ಲ ಎಂದು ಹೇಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಖಿಲ್‌ಗೆ ಬೃಹತ್ ಕೊಬ್ಬರಿ ಹಾರ, ಟಗರು ನೀಡಿ ಗೌರವ: ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಕಾರ್ಯರ್ತರು ನಿಖಿಲ್ ಕುಮಾರಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ಸುಮಾರು 3 ಕಿ.ಮೀ ದೂರದ ವರೆಗೆ ನೂರಾರು ಆಟೋಗಳು, ಬೈಕ್‌ಗಳೊಂದಿಗೆ ಕಾರ್ಯಕರ್ತರು ಬೃಹತ್ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ನಿಖಿಲ್ ಪರ ಜಯಘೋಷ ಹಾಕುತ್ತಾ ಅಲ್ಲಲ್ಲಿ ನಿಖಿಲ್‌ಗೆ ಅಭಿಮಾನಿಗಳು ಮಾಲಾರ್ಪಣೆ ಮಾಡಿದರು. ಪ್ರಮುಖ ವೃತ್ತದಲ್ಲಿ ನಿಖಿಲ್‌ಗೆ ಕ್ರೇನ್ ಸಹಾಯದೊಂದಿಗೆ ಕೊಬ್ಬರಿ ಹಾರ ಹಾಕಿ ಅಭಿನಂದಿಸಿದರು. ಮುಖ್ಯ ವೇದಿಕೆಯಲ್ಲಿ ತಾಲೂಕು ಕುರುಬ ಸಮುದಾಯದ ಯುವಕರು ನಿಖಿಲ್‌ಗೆ ಕಂಬಳಿ ಹೊದಿಸಿ ಟಗರು ನೀಡಿ ಅಭಿನಂದಿಸಿದರು.
ನಾವು ಎಂದಿಗೂ ಹೆದರಿ ಓಡಿ ಹೋಗುವವರಲ್ಲ. 100 ವರ್ಷದ ಇತಿಹಾಸ ಹೊಂದಿರುವ ನಿಮ್ಮ ಕಾಂಗ್ರೆಸ್ ದೇಶದಲ್ಲಿ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿದೆ. ಗ್ಯಾರಂಟಿ ಮೂಲಕ ಜನರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದಿದ್ದೀರಿ. ಯಾರೋ ಕಟ್ಟಿ ಬೆಳೆಸಿದ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ ನೀವು ನಾಯಕತ್ವಕ್ಕೆ ಸೆಡ್ಡು ಹೊಡೆಯುತ್ತಾರೆನ್ನುವ ಕಾರಣಕ್ಕೆ ಈ ಹಿಂದೆ ಪಕ್ಷದ ಪ್ರಭಾವಿ ರಾಜಕಾರಣಿಯೊಬ್ಬರನ್ನು ಸೋಲುವಂತೆ ಮಾಡಿದೀರಿ ಎಂದು ಆರೋಪಿಸಿದರು. ವಿಧಾನಸಭೆಗೆ ಮುಂದೆ ಚುನಾವಣೆ ಘೋಷಣೆಯಾದರೆ ರಾಜ್ಯದ ಜನತೆ ಸಂಪೂರ್ಣವಾಗಿ ಕಾಂಗ್ರೆಸ್ಸನ್ನು ತಿರಸ್ಕಾರ ಮಾಡುತ್ತಾರೆ. ಮುಂದಿನ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಬಗ್ಗೆ ಆಲೋಚನೆ ಮಾಡಿಲ್ಲ. ಚುನಾವಣೆ ಇನ್ನೂ ಬಹಳ ದೂರದ ಮಾತು. ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿ ನನ್ನ ಗುರಿ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.