
ತುಮಕೂರು (ಏ.20): ಆಧುನಿಕ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರನ್ನು ಯಾರೊಂದಿಗೂ ಹೋಲಿಕೆ ಮಾಡಲು ಆಗದು ಎನ್ನುವ ಮೂಲಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ. ಅವರು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕುರುಬರ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದರು. ಸಿದ್ದರಾಮಯ್ಯರನ್ನು ಹೋಲಿಕೆ ಮಾಡಲು ಯಾರೂ ಇಲ್ಲ ಎಂದ ಅವರು, 16 ಬಜೆಟ್ ಮಂಡಿಸಿರುವುದರ ಜೊತೆಗೆ ಅವರ ಸಾಧನೆ ತುಂಬಾ ಇದೆ, ಕುರುಬ ಸಮುದಾಯ ಹಾಗೂ ರಾಜ್ಯಕ್ಕೆ ಸಿದ್ದರಾಮಯ್ಯರ ಕೊಡುಗೆ ಅಪಾರ ಎಂದರು.
2023ರ ಚುನಾವಣೆಯಲ್ಲಿ ಗ್ಯಾರಂಟಿ ಪ್ರಣಾಳಿಕೆ ಜವಾಬ್ದಾರಿಯನ್ನು ನನಗೆ ನೀಡಿದ್ದರು, ಬಡವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದ ಅವರು, ಕರ್ನಾಟಕದ ರಾಜಕಾರಣ ಹೊಸ ದಿಕ್ಕನ್ನು ಪಡೆದುಕೊಳ್ಳುತ್ತಿದ್ದು. ದೇಶಕ್ಕೆ ಒಂದು ಮಾದರಿ ತೀರ್ಮಾನ ಆಗಲಿದೆ ಎಂದು ಪರೋಕ್ಷವಾಗಿ ಜಾತಿಗಣತಿ ವಿಚಾರವನ್ನು ಪರಮೇಶ್ವರ್ ಪ್ರಸ್ತಾಪಿಸಿದರು. ಒಂದು ಸಮುದಾಯವು ನಮ್ಮ ಇತಿಹಾಸ, ಸಂಸ್ಕೃತಿಯನ್ನು ಯಾರೋ ಬರೆಯುತ್ತಾರೆ ಅಂತ ಕಾದು ಕುಳಿತರೆ ಆಗುವುದಿಲ್ಲ. ಯಾರು ಬರೆಯುವುದಿಲ್ಲ. ನಮ್ಮ ಇತಿಹಾಸವನ್ನು ನಾವೇ ಬರೆದುಕೊಳ್ಳಬೇಕಿದೆ ಎಂದರು.
ಯಾವ ಸಮುದಾಯದಲ್ಲೂ ಇದುವರೆಗೂ ಆಗಿಲ್ಲ ಅಂದರೆ ಅತಿಶೋಯಕ್ತಿ ಆಗುವುದಿಲ್ಲ. ಇಂದು 31 ಗ್ರಂಥಗಳನ್ನು ಸಿಎಂ ಲೋಕಾರ್ಪಣೆ ಮಾಡಿದ್ದಾರೆ. ಇಡೀ ಕುರುಬ ಸಮುದಾಯ ಇತಿಹಾಸದಿಂದ ಇಲ್ಲಿಯವರೆಗೆ ಬಂದಿದೆ ಅನ್ನೋದು ಪುಸ್ತಕದಲ್ಲಿ ಬರೆದಿರಬಹುದು. ಕುರುಬ ಸಮುದಾಯ ದೇಶದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ಇದೆ. ಇದು ಸಾಮಾನ್ಯವಾದ ಸಮುದಾಯ ಅಲ್ಲ ಎಂದರು. ಈ ಸಮುದಾಯದ ಕೊಡುಗೆ ರಾಜ್ಯಕ್ಕೆ ಅತಿ ದೊಡ್ಡದ್ದು ಎಂದ ಪರಮೇಶ್ವರ್, ದಾಸ ಸಾಹಿತ್ಯದಲ್ಲಿ ಕನಕದಾಸರು ಹೆಚ್ಚಿನ ಕೊಡುಗೆ ನೀಡಿದ್ದಾರೆ. ಕುಲ ಕುಲವೆಂದು ಹೊಡೆದಾಡದಿರಿ ಅಂತಾ ಕನಕದಾಸರು ಹೇಳಿದ್ದಾರೆ, ಸಂಗೊಳ್ಳಿ ರಾಯಣ್ಣನಿಗಿಂತ ಸ್ವಾತಂತ್ರ್ಯ ಸೇನಾನಿ ಬೇಕಾ ಎಂದರು.
ಮೈಸೂರಂತೆ ಬೀದರ್ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಸಂಕಲ್ಪ: ಸಚಿವ ಈಶ್ವರ ಖಂಡ್ರೆ
ಪರಂಗೆ ಉನ್ನತ ಸ್ಥಾನ ಸಿಗುತ್ತದೆ: ಮುಂದಿನ ದಿನದಲ್ಲಿ ಪರಮೇಶ್ವರ್ ಅವರಿಗೆ ಇನ್ನೂ ಉನ್ನತ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು. ಅವರು ತುಮಕೂರಿನಲ್ಲಿ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಮೇಶ್ವರ ಅವರಿಗೆ ಇನ್ನು ಉನ್ನತವಾದ ಸ್ಥಾನ ಸಿಗಲಿ ಎಂದು ಹಾರೈಸಿದ ಭೈರತಿ ಸುರೇಶ್, ಇವತ್ತು ಪರಮೇಶ್ವರ್ ಬಹಳ ಗಟ್ಟಿಯಾಗಿ ಮಾತನಾಡಿದ್ದಾರೆ, ನಾನು ಎಂದು ನೋಡಿರಲಿಲ್ಲ. ಅವರ ಸ್ವಭಾವ ಸೌಮ್ಯ. ಆದರೆ ಅವರು ತೆಗೆದುಕೊಳ್ಳುವ ನಿರ್ಣಯ ಕಠಿಣ. ಹಾಗಾಗಿಯೇ ಅವರು ಅಂಬೇಡ್ಕರ್ ಅವರ ಪುತ್ಥಳಿ ಮಾಡಲು ಸಾಧ್ಯವಾಯ್ತು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.