ನಳಿನ್‌ ಕುಮಾರ್‌ ಕಟೀಲ್‌ಗೆ ಆಪ್ತನಾಗಿದ್ದ ಪ್ರವೀಣ್‌: ಸಿದ್ದು ಆರೋಪ

By Govindaraj S  |  First Published Jul 30, 2022, 5:10 AM IST

* ಬಿಜೆಪಿ ರಾಜ್ಯಾಧ್ಯಕ್ಷರನ್ನು ತನಿಖೆ ನಡೆಸಿದರೆ ದುಷ್ಕರ್ಮಿಗಳ ಪತ್ತೆ
* ಈಗ ಬಿಜೆಪಿ, ಸಂಘದ ವಿರುದ್ಧ ಜನಾಕ್ರೋಶಕ್ಕೆ ಏನು ಕಾರಣ?
* ಹಿಂದುಳಿದ ಬಿಲ್ಲವ ಜಾತಿಯ ಯುವಕರೇ ಏಕೆ ಬಲಿಯಾಗ್ತಿದ್ದಾರೆ?


ಬೆಂಗಳೂರು/ಮೈಸೂರು (ಜು.30): ದಕ್ಷಿಣ ಕನ್ನಡದ ಇತ್ತೀಚಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳಿಗೂ, ಸಂಘ ಪರಿವಾರದೊಳಗಿನ ಆಂತರಿಕ ಬಿಕ್ಕಟ್ಟುಗಳಿಗೂ ಸಂಬಂಧ ಇರುವಂತಿದೆ. ಪೊಲೀಸರು ಈ ದಿಸೆಯಲ್ಲಿ ತನಿಖೆ ಮಾಡಿದರೆ ಸತ್ಯ ಬಯಲಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಫೋಟಕ ಆರೋಪ ಮಾಡಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಮೃತ ಪ್ರವೀಣ್‌ ನೆಟ್ಟಾರು ಆತ್ಮೀಯನಾಗಿದ್ದ. ಅಲ್ಲದೆ, ಕೆಲ ಕಾಲ ಕಟೀಲ್‌ ಅವರ ಕಾರು ಚಾಲಕನೂ ಆಗಿದ್ದರಂತೆ.

ಇಷ್ಟೊಂದು ಆತ್ಮೀಯರಾಗಿದ್ದವರು ದೂರವಾಗಿರುವುದು ಯಾಕೆ? ಪೊಲೀಸರು ಕಟೀಲ್‌ ಅವರನ್ನೂ ವಿಚಾರಣೆಗೊಳಪಡಿಸಿದರೆ ದುಷ್ಕರ್ಮಿಗಳ ಪತ್ತೆಗೆ ನೆರವಾಗುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಅಂತಿಮ ದರ್ಶನಕ್ಕೆ ಆಗಮಿಸಿದ ವೇಳೆ ನಳಿನ್‌ ಕುಮಾರ್‌ ಕಟೀಲ್‌, ಸಚಿವ ಸುನಿಲ್‌ ಕುಮಾರ್‌, ವಿಎಚ್‌ಪಿ ನಾಯಕ ಕಲ್ಲಡ್ಕ ಪ್ರಭಾಕರ್‌ ಭಟ್‌, ಸ್ಥಳೀಯ ಶಾಸಕರ ವಿರುದ್ಧ ಭುಗಿಲೆದ್ದ ಜನಾಕ್ರೋಶದ ಹಿನ್ನೆಲೆಯನ್ನೂ ಪೊಲೀಸರು ತನಿಖೆ ನಡೆಸಬೇಕಾಗಿದೆ. 

Tap to resize

Latest Videos

ಸಿದ್ದರಾಮಯ್ಯ ಜನಪರ ಕಾರ‍್ಯಕ್ರಮಗಳಿಗೆ ಮಲ್ಲಿಕಾರ್ಜುನ ಖರ್ಗೆ ಪರಾಕ್‌

ಹಿಂದುಗಳು ಸತ್ತರೆ ಮುಸ್ಲಿಮರ ಮೇಲೆ, ಮುಸ್ಲಿಮರು ಸತ್ತರೆ ಹಿಂದುಗಳ ಮೇಲೆ ಸಂಶಯ ಪಟ್ಟು ಪೊಲಿಸ್‌ ತನಿಖೆಯೂ ಇದೇ ಜಾಡಿನಲ್ಲಿ ಸಾಗುತ್ತಿರುವುದರಿಂದ ಸಾವಿನ ಹಿಂದಿನ ಅಸಲಿ ಸತ್ಯ ಹೊರಗೆ ಬರದೆ ಮುಚ್ಚಿ ಹೋಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಕೆ ಹಿಂದುಳಿದ ಜಾತಿಗಳ ಅದರಲ್ಲೂ ಮುಖ್ಯವಾಗಿ ಬಿಲ್ಲವ ಯುವಕರೇ ಕೋಮು ಸಂಘರ್ಷಕ್ಕೆ ಬಲಿಯಾಗುತ್ತಿದ್ದಾರೆ? ರಾಜಕೀಯ ಪ್ರಾತಿನಿಧ್ಯ ಕಳೆದುಕೊಳ್ಳುತ್ತಿರುವ ಈ ಸಮುದಾಯದ ಯುವಕರು ಯಾಕೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ? ಹೀಗೆ ಎಲ್ಲಾ ಕೋನದಲ್ಲೂ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

ರಿಸೈನ್‌ ಅಂಡ್‌ ಗೆಟ್‌ ಔಟ್‌: ಇನ್ನು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಸರ್ಕಾರ ಸತ್ತು ಹೋಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಮುಖ್ಯಮಂತ್ರಿಗಳಿಗೆ ಸರ್ಕಾರ ನಡೆಸಲು ಆಗದಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ (ರಿಸೈನ್‌ ಅಂಡ್‌ ಗೆಟ್‌ ಔಟ್‌) ಎಂದು ಆಗ್ರಹಿಸಿದರು. ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪಕ್ಷ ಇಲ್ಲವೇ ಸರ್ಕಾರದ ಮೇಲೆ ಯಾವುದೇ ನಿಯಂತ್ರಣ ಇಲ್ಲ. ಅವರು ಕುರ್ಚಿ ಉಳಿಸಿಕೊಳ್ಳುವುದಾಕ್ಕಾಗಿ ಆರ್‌ಎಸ್‌ಎಸ್‌ ಹೇಳಿದಂತೆ ಬೊಂಬೆ ರೀತಿ ಕುಣಿಯುತ್ತಿದ್ದಾರೆ. ಅವರ ಕುರ್ಚಿಯ ಉಳಿವು, ರಾಜ್ಯದ ಅಳಿವಾಗಿ ಪರಿಣಮಿಸಿದೆ ಎಂದು ಕಿಡಿಕಾರಿದರು.

ಸಾಕ್ಷ್ಯ ಇದ್ದರೆ ಎಸ್‌ಡಿಪಿಐ, ಪಿಎಫ್‌ಐ ನಿಷೇಧಿಸಿ: ಎಸ್‌ಡಿಪಿಐ, ಪಿಎಫ್‌ಐ ಮೇಲೆ ನಿಮಗೆ ಅನುಮಾನ ಇದೆಯಾ? ಎಸ್‌ಡಿಪಿಐ, ಪಿಎಫ್‌ಐ ಬಗ್ಗೆ ಸಾಕ್ಷ್ಯ ಇದ್ದರೆ ನಿಷೇಧಿಸಿ. ಮೈಸೂರಿನಲ್ಲಿ ಗಲಭೆ ಆಗಿತ್ತು. ಅದರಲ್ಲಿ ವಿದ್ಯಾರ್ಥಿಗಳೂ ಇದ್ದರು. ಕೇಸ್‌ ವಾಪಸ್‌ ಪಡೆಯುವಂತೆ ಎಲ್ಲಾ ಪಕ್ಷದವರೂ ಕೇಳಿದ್ದರು. ಅದಕ್ಕೆ ಕೇಸ್‌ ವಾಪಸ್‌ ಪಡೆದುಕೊಂಡಿದ್ದೆ. ಅದಕ್ಕೂ ಈಗಿನ ಕೊಲೆಗೂ ಏನು ಸಂಬಂಧ? ನಿಮಗೆ ನಿಜವಾಗಲೂ ಎಸ್‌ಡಿಪಿಐ, ಪಿಎಫ್‌ಐ ಮೇಲೆ ಅನುಮಾನ ಇದ್ದರೆ ಬ್ಯಾನ್‌ ಮಾಡಿ. ಅಧಿಕಾರ ಇರೋದು ನಿಮ್ಮ ಕೈಯಲ್ಲಿ ಅಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಜಾತಿಗೊಬ್ಬ ನಾಯಕ ಹುಟ್ಟಿಕೊಳ್ತಿದ್ದಾರೆ: ಕಟೀಲ್‌

ರಾಜ್ಯ ಯುಪಿ, ಬಿಹಾರ್‌ ಆಗಿದೆಯಾ?: ರಾಜ್ಯದಲ್ಲೂ ಯುಪಿ ಮಾದರಿ ಬುಲ್ಡೋಜರ್‌ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಬಿಹಾರ್‌, ಯುಪಿ ರೀತಿ ಆಗಿದೆಯಾ? ಅದನ್ನು ಬಸವರಾಜ ಬೊಮ್ಮಾಯಿ ಒಪ್ಪಿಕೊಂಡಿದ್ದಾರಾ? ಕರ್ನಾಟಕದಲ್ಲೂ ಸಹ ಯುಪಿ, ಬಿಹಾರ ರೀತಿ ಕಾನೂನು ಸುವ್ಯವಸ್ಥೆ ಕೆಟ್ಟಹೋಗಿದೆ ಎಂಬುದು ಮುಖ್ಯಮಂತ್ರಿಗಳ ಮಾತಿನ ಅರ್ಥವೇ ಎಂದು ಪ್ರಶ್ನಿಸಿದರು.

click me!