
ಬೆಂಗಳೂರು (ಅ.03): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ವಿಚಾರ ಚರ್ಚೆಯಲ್ಲಿಲ್ಲ. ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರೇ ಸಿಎಂ ಆಗಿ 5 ವರ್ಷ ಪೂರ್ಣಗೊಳಿಸುತ್ತಾರೆ. ಮುಖ್ಯಮಂತ್ರಿ ಬದಲಾವಣೆ ವಿಚಾರವಿಲ್ಲ. ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದಾರೆ. ಅವರೇ ಹೇಳಿದ ಮೇಲೆ ಸಿಎಂ ಬದಲಾವಣೆ ಎನ್ನುವ ವಿಷಯವೇ ಇಲ್ಲ. ಸಿದ್ದರಾಮಯ್ಯ ಕೂಡ ತಾವೇ ಸಿಎಂ ಆಗಿರುತ್ತೇನೆ ಎಂದಿದ್ದಾರೆ.
ಆ ಇಬ್ಬರು ನಾಯಕರು ಹೇಳಿದ ಮೇಲೆ ಸಿಎಂ ಬದಲಾವಣೆ ಪ್ರಶ್ನೆ ಕೇಳುವ ಹಾಗೆಯೇ ಇಲ್ಲ. ಇನ್ನು, ನವೆಂಬರ್‌ಗೆ ಯಾವುದೇ ಕ್ರಾಂತಿ ಇಲ್ಲ, ಅದೆಲ್ಲ ಭ್ರಾಂತಿಯಷ್ಟೇ ಎಂದರು. ಸಚಿವ ಸಂಪುಟ ಪುನರ್ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಹೈಕಮಾಂಡ್ ನಾಯಕರು ನಿರ್ಧಾರ ಮಾಡಿ ಯಾವಾಗ ಬೇಕಾದರೂ ಸಚಿವ ಸಂಪುಟ ಪುನರ್ ರಚನೆ ಮಾಡಬಹುದು ಎಂದು ಹೇಳಿದರು.
ಬೆಂಗಳೂರು ಉಸ್ತುವಾರಿ ಖಾಲಿಯಿಲ್ಲ: ಬೆಂಗಳೂರು ನಗರಾಭಿವೃದ್ಧಿ ಖಾತೆ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ಬೆಂಗಳೂರಿಗೆ ಡಿ.ಕೆ. ಶಿವಕುಮಾರ್ ಅವರು ಉಸ್ತುವಾರಿ ಸಚಿವರಾಗಿದ್ದಾರೆ. ಈಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಖಾಲಿಯಿಲ್ಲ. ಒಂದು ವೇಳೆ ಖಾಲಿಯಾದರೂ ನಾನು ಕೇಳುವುದಕ್ಕೆ ಹೋಗುವುದಿಲ್ಲ. ನಾನು ಸಚಿವನಾಗಬೇಕು, ಇದೇ ಖಾತೆ ಬೇಕು, ಜಿಲ್ಲಾ ಉಸ್ತುವಾರಿ ಬೇಕು ಎಂದು ಕೇಳಿಲ್ಲ. ನನ್ನ ರಾಜಕೀಯ ಜೀವನದಲ್ಲಿ ಕೇಳಿಲ್ಲ, ಮುಂದೆಯೂ ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನ ರಸ್ತೆ ಗುಂಡಿಯಿಂದ ಪಕ್ಷಕ್ಕೆ ಹೆಸರು ಸ್ವಲ್ಪ ಹಾಳಾಗುವಂತಾಗಿದೆ. ಗುಂಡಿಗಳನ್ನು ಇಲ್ಲದಂತೆ ನೋಡಿಕೊಳ್ಳುವುದು ಪಾಲಿಕೆ ಮತ್ತು ರಾಜ್ಯ ಸರ್ಕಾರದ್ದಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಹೈಕೋರ್ಟ್ ನಿಗಾವಹಿಸಿತ್ತು. 2 ವರ್ಷ ಹೈಕೋರ್ಟ್ ನಿಗಾವಹಿಸಿತ್ತು. ಅಲ್ಲದೆ, ರಸ್ತೆ ಗುಂಡಿಗಳಿಂದ ಬಿಜೆಪಿಗೂ ಕೆಟ್ಟ ಹೆಸರು ಬಂದಿತ್ತು. ಈಗ ನಮಗೂ ಟೀಕೆ ಟಿಪ್ಪಣಿಗಳು ಬರುತ್ತಿವೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಸೂಚನೆ ನೀಡಿದ್ದಾರೆ. ಅಕ್ಟೋಬರ್‌ನೊಳಗೆ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಗಡುವು ನಿಗದಿ ಮಾಡಿದ್ದು, ಅಷ್ಟರಲ್ಲಿ ಗುಂಡಿ ಮುಚ್ಚಲಾಗುವುದು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.