
ಬೆಂಗಳೂರು (ಅ.17): ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನಾಯಕರೊಬ್ಬರು ಉಪಮುಖ್ಯಮಂತ್ರಿ ಆಮಿಷವೊಡ್ಡಿದ್ದರು, ಇಲ್ಲದಿದ್ದರೆ ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದರು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ನಮಗೆ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತಂದು ಡಿಸಿಎಂ ಮಾಡುವ ದರ್ದು ಇಲ್ಲ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೊಡ್ಡವರಾಗಲು ಅವರು, ಇವರು ಕರೆ ಮಾಡಿದ್ದರು ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ. ದೆಹಲಿಯಿಂದ ಕರೆ ಮಾಡಿದ್ದು ಯಾರು ಎಂಬುದನ್ನು ಪತ್ತೆ ಹಚ್ಚಿ. ಕರೆ ಮಾಡಿದವರನ್ನು ಒಳಗೆ ಹಾಕಿ. ನಿಮ್ಮ ಕಾರ್ಯಕರ್ತರಿಂದಲೇ ಕರೆ ಮಾಡಿಸಿಕೊಂಡು ಬಿಜೆಪಿ ಮೇಲೆ ಹಾಕಬೇಡಿ. ಸುಮ್ಮನೆ ಪ್ರಚಾರಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೆಸರು ಬಳಸಬೇಡಿ ಎಂದು ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು.
ನಮಗೆ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿಗೆ ಕರೆತಂದು ಡಿಸಿಎಂ ಮಾಡುವ ದುರ್ದು ಇಲ್ಲ. ನಮ್ಮ ಪಕ್ಷ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ನಮ್ಮ ಪ್ರಧಾನಿ ಬಂದಾಗ ಎಲ್ಲರನ್ನೂ ಮಾತನಾಡಿಸುತ್ತಾರೆ. ಚುನಾವಣೆ ಸಮಯದಲ್ಲಿ ಚುನಾವಣೆ. ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗ ಡಿಸಿಎಂ ಎಂಬ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವರನ್ನು ಮಾತನಾಡಿಸಿದ್ದರು. ಹೀಗೆ ಎಲ್ಲರನ್ನೂ ಮೋದಿ ಮಾತನಾಡಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಉತ್ತರಿಸಿದರು.
ವಿದೇಶಿ ಶಕ್ತಿಗಳ ಜೊತೆಗೂಡಿ ನಮ್ಮ ದೇಶದಲ್ಲಿನ ಹಿತ ಶತ್ರುಗಳು ಚುನಾಯಿತ ಸರ್ಕಾರವನ್ನು ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಇಂಥವರು ತಮ್ಮ ಪ್ರಯತ್ನದಲ್ಲಿ ಸಫಲವಾಗಲಾರರು ಎಂದು ನುಡಿದರು. ರಾಷ್ಟ್ರದಲ್ಲಿ ಒಂದು ಕುಟುಂಬವನ್ನು ವೈಭವೀಕರಿಸಲು ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆ ಯನ್ನು ಮರೆ ಮಾಚುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ನಾವು ವಿದ್ಯಾರ್ಥಿಗಳಿದ್ದಾಗ ನಮಗೆ ‘ಅಕ್ಬರ್ ದ ಗ್ರೇಟ್’ ಎಂಬ ವಿಷಯ ಪಠ್ಯಕ್ರಮವನ್ನಾಗಿಸಲಾಗಿತ್ತು. ‘ಅಕ್ಬರ್ ದ ಗ್ರೇಟ್’ ಎಂಬುವುದು ಪಠ್ಯವಾಗಿರುವಾಗ ಕೆಚ್ಚೆದೆಯ ಸಂಗೊಳ್ಳಿ ರಾಯಣ್ಣನ ವೀರಗಾಥೆ ಪಠ್ಯಕ್ರಮ ಏಕೆ ಆಗಿಲ್ಲ ಎಂದರು.
ಕಿತ್ತೂರು ರಾಣಿ ಚನ್ನಮ್ಮನವರ ಮತ್ತು ರಾಣಿ ಅಬ್ಬಕ್ಕನರ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳುವಂತೆ ಸಚಿವೆ ಶೋಭಾ ಕರಂದ್ಲಾಜೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು. ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶಾಲಿನಿ ವರ್ಮಾ ಮಾತನಾಡಿ, ಮತಾಂತರದ ಮತ್ತು ಲವ್ ಜಿಹಾದ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಎಬಿವಿಪಿ ಕರ್ನಾಟಕ ಉತ್ತರ ಪ್ರಾಂತದ ಕಾರ್ಯದರ್ಶಿ ಸಚಿನ್ ಕುಳಗೇರಿ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮನವರ ಮತ್ತು ರಾಣಿ ಅಬ್ಬಕ್ಕನವರ ವೀರಗಾಥೆಯನ್ನು ಯುವ ವೃಂದಕ್ಕೆ ಮನವರಿಕೆ ಮಾಡಿ ರಾಷ್ಟ್ರ ಪ್ರೇಮ ಮತ್ತು ದೇಶ ಭಕ್ತಿ ವೃದ್ಧಿಸುವುದೇ ರಥಯಾತ್ರೆಯ ಉದ್ದೇಶವಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.