ಜಾತಿ ಗಣತಿ ಮತ್ತೆ ವಿಸ್ತರಣೆ ಇಲ್ಲ, ಸಮುದಾಯ ಹಿತಕ್ಕಾಗಿ ಎಲ್ಲರೂ ಭಾಗವಹಿಸಿ: ಡಿ.ಕೆ.ಶಿವಕುಮಾರ್‌

Published : Oct 17, 2025, 05:59 AM IST
DK Shivakumar

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದೇವೆ. ಮತ್ತೆ ದಿನಾಂಕ ವಿಸ್ತರಿಸುವುದಿಲ್ಲ, ನಿಮ್ಮ ಸಮುದಾಯಗಳ ಹಿತಕ್ಕಾಗಿ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಬೆಂಗಳೂರು (ಅ.17): ಹಿಂದುಳಿದವರು, ಬಡವರು ಯಾವುದೇ ಒಂದು ಜಾತಿಯಲ್ಲಿಲ್ಲ. ಎಲ್ಲಾ ಸಮುದಾಯಗಳಲ್ಲೂ ಇದ್ದಾರೆ. ಹಾಗಾಗಿ ಅಂತಹವರನ್ನು ಗುರುತಿಸಿ ಸಹಾಯ ಮಾಡಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದೇವೆ. ಮತ್ತೆ ದಿನಾಂಕ ವಿಸ್ತರಿಸುವುದಿಲ್ಲ, ನಿಮ್ಮ ಸಮುದಾಯಗಳ ಹಿತಕ್ಕಾಗಿ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಾತಿ ಗಣತಿ ಕುರಿತು ಕೇಳಿದಾಗ, ನಮ್ಮ ಸಮುದಾಯದ ಸಂಖ್ಯೆ ಕಡಿಮೆ ಇದೆ ಎಂದು ಹಲವರು ಆಪಾದನೆ ಮಾಡಿದ ಪರಿಣಾಮ ಮತ್ತೆ ಗಣತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕೋರ್ಟ್ ಯಾರಿಗೂ ಬಲವಂತ ಮಾಡಿ ಮಾಹಿತಿ ಪಡೆಯಬೇಡಿ ಎಂದು ಸೂಚಿಸಿದೆ. ಆದರೆ, ನಮ್ಮ ಸರ್ಕಾರದ ಉದ್ದೇಶ ಬಡವರು ಹಾಗೂ ನೊಂದವರಿಗೆ ಸಹಾಯ ಮಾಡಬೇಕು ಎಂಬುದಾಗಿದೆ. ಎಲ್ಲಾ ಸಮುದಾಯದಲ್ಲೂ ಬಡವರಿದ್ದಾರೆ. ಎಲ್ಲಾ ಸಮುದಾಯದಲ್ಲಿ ಹಿಂದುಳಿದವರಿದ್ದಾರೆ. ಹೀಗಾಗಿ ಈ ಸಮೀಕ್ಷೆ ಮಾಡುತ್ತಿದ್ದೇವೆ. ನಿಮ್ಮ ನಿಮ್ಮ ಸಮುದಾಯಗಳ ಹಿತಕ್ಕಾಗಿ ಎಲ್ಲರೂ ಸಮೀಕ್ಷೆಯಲ್ಲಿ ಭಾಗವಹಿಸಿ ಎಂದರು.

ಅಗತ್ಯ ಪ್ರಶ್ನೆಗಳಿಗೆ ಉತ್ತರ ಕೊಟ್ಟರೂ ಸಾಕು. ನಿಮಗೆ ಅನಗತ್ಯ ಎನಿಸಿದ ಪ್ರಶ್ನೆಗಳಿಗೆ ಉತ್ತರ ನಿರಾಕರಿಸುವ ಅವಕಾಶವೂ ಇದೆ. ನಮ್ಮ ಮನೆಗೆ ಗಣತಿದಾರರು ಬಂದಿಲ್ಲ ಎಂದು ದೂರಬೇಡಿ. ಆನ್ ಲೈನ್ ಮೂಲಕವೂ ಈ ಸಮೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದೇವೆ. ಇದಕ್ಕೆ ಇನ್ನು ಮೂರು ದಿನಗಳ ಕಾಲ ಅವಕಾಶವಿದ್ದು, ಸರ್ಕಾರಿ ಶಾಲೆಗಳಿಗೆ ಏಳು ದಿನ ಹೆಚ್ಚುವರಿ ರಜೆ ನೀಡಿ ಈ ಸಮೀಕ್ಷೆ ಅವಧಿ ವಿಸ್ತರಿಸಿದ್ದೇವೆ. ಮತ್ತೆ ಇದನ್ನು ವಿಸ್ತರಿಸಲು ಆಗುವುದಿಲ್ಲ ಎಂದರು. ಇನ್ಫೋಸಿಸ್‌ ಫೌಂಡೇಷನ್‌ನ ಡಾ.ಸುಧಾ ನಾರಾಯಣಮೂರ್ತಿ ಅವರು ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುವ ಕುರಿತ ಪ್ರಶ್ನೆಗೆ, ಪ್ರತಿಕ್ರಿಯೆ ನೀಡಲು ಡಿ.ಕೆ.ಶಿವಕುಮಾರ್‌ ನಿರಾಕರಿಸಿದರು.

ಸಂಖ್ಯಾಬಲದಿಂದ ಸಿಎಂ ನಿರ್ಧಾರ ಆಗಲ್ಲ

‘ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ವಿಚಾರ ಸಂಖ್ಯಾಬಲದಿಂದ ನಿರ್ಧಾರವಾಗುವುದಿಲ್ಲ, ಎಲ್ಲವನ್ನೂ ಹೈಕಮಾಂಡ್‌ ನಿರ್ಧರಿಸುತ್ತದೆ’ ಎಂದು ಹೇಳಿದ್ದಾರೆ. ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ನವೆಂಬರ್‌ನಲ್ಲಿ ಯಾವುದೇ ಕ್ರಾಂತಿಯಿಲ್ಲ. ಅದೆಲ್ಲವೂ ಸೃಷ್ಟಿಯಷ್ಟೆ. ಕಾಂಗ್ರೆಸ್‌ ಪಕ್ಷದಲ್ಲಿ ನಿರ್ಧಾರಗಳು ಹೈಕಮಾಂಡ್‌ ಮಟ್ಟದಲ್ಲಿಯೇ ಆಗುತ್ತವೆ. ಸಂಖ್ಯಾಬಲದಿಂದ ಯಾವುದೂ ನಿರ್ಧಾರವಾಗುವುದಿಲ್ಲ. ಹೈಕಮಾಂಡ್‌ ಎಲ್ಲವನ್ನೂ ನಿರ್ಧರಿಸುತ್ತದೆ’ ಎಂದರು.

ಅಲ್ಲದೆ, ‘ಯಾರನ್ನು ಎಲ್ಲಿಡಬೇಕು, ಯಾವಾಗ ಸ್ಥಾನಮಾನ ನೀಡಬೇಕು, ಎಷ್ಟು ದಿನ ಕೊಡಬೇಕು ಎಂಬುದನ್ನೂ ಸಹ ಹೈಕಮಾಂಡ್‌ ತೀರ್ಮಾನಿಸುತ್ತದೆ’ ಎಂದರು. ‘ನನಗೆ ಪಕ್ಷದ ಬಗ್ಗೆ ಚೆನ್ನಾಗಿ ತಿಳಿದಿದೆ. ಅದರಂತೆಯೇ ನಾವು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಾಗ ನನ್ನನ್ನು ಮತ್ತು ಸಿದ್ದರಾಮಯ್ಯ ಅವರನ್ನು ಕೂರಿಸಿ ನಮ್ಮ ಅಧಿಕಾರ, ಜವಾಬ್ದಾರಿ ಬಗ್ಗೆ ತಿಳಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ, ನಾನು ಉಪಮುಖ್ಯಮಂತ್ರಿಯಾಗಿರಬೇಕು ಎಂದು ಹೇಳಿದರು. ನಾವು ಅದರಂತೆ ಒಪ್ಪಿಕೊಂಡು ಬಂದು ಈಗ ಕೆಲಸ ಮಾಡುತ್ತಿದ್ದೇವೆ. ಉಳಿದ ಚರ್ಚೆಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚಿಸುವ ಅವಶ್ಯಕತೆಯಿಲ್ಲ. ದೆಹಲಿ ನಾಯಕರು ನನಗೆ ವಹಿಸಿರುವ ಕೆಲಸ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ