ಗೋ ಬ್ಯಾಕ್ ಶೋಭಾ, ರಾಜಕಾರಣದಲ್ಲಿ ಇದೆಲ್ಲ ಇರುವಂತದ್ದೆ, ಫೇಸ್ ಮಾಡ್ತೇನೆ: ಸಚಿವೆ ಕರಂದ್ಲಾಜೆ

By Girish GoudarFirst Published Feb 24, 2024, 8:45 PM IST
Highlights

ಇದೇ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಪತ್ರ ಬರೆದಿದ್ದಾನೆ. ಒಬ್ಬನೇ ಸುಮಾರು 20 ಪತ್ರಗಳನ್ನು ಹಿಡಿದಿದ್ದಾನೆ. ಯಾರೋ ಪ್ರಾಯೋಜಕತ್ವ ಮಾಡಿ ಇದನ್ನು ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಿದೆ. ಅದಕ್ಕಾಗಿ ಅಭಿವೃದ್ಧಿ ಆಧಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಚರ್ಚೆ ಆಗಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.24):  ನಿಜವಾದ ಬಿಜೆಪಿ ಕಾರ್ಯಕರ್ತರು, ನಮ್ಮ ವಿಚಾರದಿಂದ ಬಂದಿರುವವರಾರೂ ಪತ್ರ ಬರೆಯುವುದು, ಗೋ ಬ್ಯಾಕ್ ಅಭಿಯಾನದಂತಹ ಈ ಕೆಲಸ ಮಾಡುವುದಿಲ್ಲ. ಅಧಿಕಾರಕ್ಕಾಗಿ ಬಂದು ವಾಪಾಸ್ ಹೋಗುವವರು ಇಂತಹ ಕೆಲಸ ಮಾಡುತ್ತಾರೆ. ಅವರಿಗೆ ಇನ್ನೊಂದು ಪಕ್ಷದಲ್ಲಿ ಮಾಡಿದ್ದು ಸಹ ರೂಢಿ ಇರುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಇಂದು(ಶನಿವಾರ) ನಗರದಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಶೋಭಾ ಕರಂದ್ಲಾಜೆ ಅವರು, ಇದೇ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಪತ್ರ ಬರೆದಿದ್ದಾನೆ. ಒಬ್ಬನೇ ಸುಮಾರು 20 ಪತ್ರಗಳನ್ನು ಹಿಡಿದಿದ್ದಾನೆ. ಯಾರೋ ಪ್ರಾಯೋಜಕತ್ವ ಮಾಡಿ ಇದನ್ನು ಮಾಡುತ್ತಿದ್ದಾರೆ ಎನ್ನುವುದು ಸ್ಪಷ್ಟವಿದೆ. ಅದಕ್ಕಾಗಿ ಅಭಿವೃದ್ಧಿ ಆಧಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಚರ್ಚೆ ಆಗಬೇಕು ಎಂದರು.
ಹೈಕಮಾಂಡ್ ಹಾಗೂ ಜನರೂ ಗಮನಿಸುತ್ತಿದ್ದಾರೆ : 

ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!

ಟಿಕೆಟ್ ಕೇಳುವವರು ಸಾಮಾಜಿಕ ಜಾಲತಾಣದಲ್ಲಿ ಏನೋ ಬರೆಯುತ್ತಾರೆ, ಮಾಧ್ಯಮಕ್ಕೆ ಏನೋ ತಿಳಿಸುತ್ತಾರೆ ಎಂದರೆ ಈ ವಿಚಾರದಲ್ಲಿ ನಾವು ಸ್ಪಷ್ಟವಿದ್ದೇನೆ. ನಾವುಈ ಚುನಾವಣೆಯನ್ನು ಅಭಿವೃದ್ಧಿ ಆಧಾರದಲ್ಲೇ ಎದುರಿಸುತ್ತೇವೆ. ಯಾವ ವೈಯಕ್ತಿಕ ನಿಂದನೆ ಮಾಡುವುದಿಲ್ಲ. 10 ವರ್ಷದ ಹಿಂದೆ ಈ ಜಿಲ್ಲೆಯಲ್ಲಿ ಏನು ಮೂಲಭೂತ ಸೌಕರ್ಯ ಇತ್ತು. ಇಂದು ಹೇಗಿದೆ ಎನ್ನುವುದು ಚರ್ಚೆಆಗಲಿ ಎಂದರು. 
ಟಿಕೆಟ್ ಎಲ್ಲರೂ ಕೇಳಬಹುದು ಆದರೆ ಮತ್ತೊಬ್ಬರಿಗೆ ಅಮಮಾನ ಮಾಡಿ, ತೇಜೋವಧೆ ಮಾಡಿ ಟಿಕೆಟ್ ಕೇಳುತ್ತೇವೆ ಎಂದು ಕೊಂಡರೆ ಇದೆಲ್ಲವನ್ನೂ ಹೈಕಮಾಂಡ್ ಹಾಗೂ ಜನರೂ ಗಮನಿಸುತ್ತಿದ್ದಾರೆ. ಬರುವಂತಹ ದಿನಗಳಲ್ಲಿ ಅದಕ್ಕೆ ಉತ್ತರವನ್ನು ಯಾರು ಕೊಡಬೇಕು ಅವರೇ ಕೊಡುತ್ತಾರೆ ಎಂದರು. 

ಬಿಜೆಪಿಯ ಯಾವುದೇ ನಿಜವಾದ ಕಾರ್ಯಕರ್ತರಿಗೆ ಯಾವುದೇ ಚುನಾವಣೆ ವೇಳೆ  ಟಿಕೆಟ್ ಕೇಳಲು ಅಧಿಕಾರವಿದೆ. ಇದು ಪ್ರಜಾಪ್ರಭುತ್ವ. ಬಿಜೆಪಿ ಪ್ರಜಾಪ್ರಭುತ್ವ ರೀತಿಯಲ್ಲೇ ಚುನಾವಣೆ ಮಾಡುತ್ತಿರುವ ಜಗತ್ತಿನ ಅತ್ಯಂತ ದೊಡ್ಡ ಪಕ್ಷ ಇದಕ್ಕೊಂದು ಗೌರವವಿದೆ. ಸಾಮಾನ್ಯ ಕಾರ್ಯಕರ್ತ ಸಹ ಟಿಕೆಟ್ ಕೇಳುವಂತಾಗಬೇಕು. ಆಗಲೇ ಇದು ಪ್ರಜಾ ಪ್ರಭುತ್ವ ಎಂದು ಅನ್ನಿಸಿಕೊಳ್ಳುವುದು. ಇಲ್ಲಿಯಾವುದೇ ಸರ್ವಾಧಿಕಾರ ನಡೆಯುವುದಿಲ್ಲ. ಆದರೆ ಟಿಕೆಟ್ ಕೇಳುವಾಗ ಇನ್ನೊಬ್ಬರಿಗೆ ತೇಜೋವಧೆ ಮಾಡಿ, ಅಪಮಾನ ಮಾಡಿ, ಅನವಶ್ಯಕ ಅಪಪ್ರಚಾರಗಳನ್ನ ಮಾಡಿ ಕೇಳುವಂತಹದ್ದು ಅವರಿಗೆ ಬಿಟ್ಟದ್ದು ಎಂದರು. ಅವರು ಪಕ್ಷಕ್ಕೆ ಒಳ್ಳೆಯದು ಮಾಡುತ್ತಿದ್ದಾರೋ, ಕೆಟ್ಟದ್ದು ಮಾಡುತ್ತಿದ್ದಾರೋ ಅವರೇ ಹೇಳಬೇಕು. ಆದರೆ ನಾನು ಒಂದೇ ಒಂದು ರೂ. ಪಡೆಯದೆ, ಗುತ್ತಿಗೆದಾರರ ಮುಖವನ್ನೂ ನೋಡದೆ ಪ್ರಾಮಾಣಿಕವಾಗಿ ನರೇಂದ್ರ ಮೋದಿ ಅವರಿಗೆ ಒಳ್ಳೆ ಹೆಸರು ಬರಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ.

ರಾಜಕಾರಣದಲ್ಲಿ ಇದೆಲ್ಲ ಇರುವಂತದ್ದೆ, ಫೇಸ್ ಮಾಡುತ್ತೇನೆ : 

ಯಾರೋ ನನ್ನ ಪರ, ವಿರುದ್ಧ ಮಾತನಾಡಿದರು, ಅಭಿಯಾನ ಮಾಡುವುದರಿಂದ ನಮಗೇನೂ ಪರಿಣಾಮ ಆಗುವುದಿಲ್ಲ. ಸಚಿವೆಯಾಗಿ ಒಳ್ಳೆಯ ಕೆಲಸ ಮಾಡಿ ಒಂದೂವರೆ ವರ್ಷದಲ್ಲಿ ರಾಜೀನಾಮೆ ಕೊಟ್ಟ ರಾಜಕಾರಣದ ಇತಿಹಾಸ ನನ್ನದಿದೆ. ಈ ಅವಮಾನವನ್ನು ಕಳೆದ ಲೋಕಸಭಾ ಚುನಾವಣೆಯಲ್ಲೂ ಮಾಡಿದ್ದರು. ಆದರೆ ನಾವು ಜನರಿಗಾಗಿ ಕೆಲಸ ಮಾಡಿದ್ದೇವೆ. ಯಾವುದೋ ವ್ಯಕ್ತಿಗತವಾಗಿ ಅಥವಾ ಕಮಿಷನ್ಗಾಗಿ ಕೆಲಸ ಮಾಡುತ್ತಿಲ್ಲ. ಮೋದಿ ಅವರು ಕೊಟ್ಟ ಪ್ರತಿ ಯೋಜನೆ ನಮ್ಮ ಕ್ಷೇತ್ರಕ್ಕೆ ಬರಬೇಕು ಎನ್ನುವ ಅಭಿಲಾಷೆಯಲ್ಲಿ ಕೆಲಸ ಮಾಡಿದ್ದೇವೆ ಎಂದರು. ರಾಜಕಾರಣದಲ್ಲಿ ಇದೆಲ್ಲ ಇರುವಂತದ್ದೆ, ಫೇಸ್ ಮಾಡುತ್ತೇನೆ ಎಂದು ಹೇಳಿದ ಅವರು ಕೆಲವರು ಆರ್ಟಿಐನಲ್ಲಿ ಮಾಹಿತಿ ಕೇಳುವಾಗಲೂ ಕೆಟ್ಟ ಬುದ್ಧಿಯಿಂದ ಕೇಳಿದ್ದಾರೆ. 2019 ರ ನಂತರದ ಅನುದಾನದ ಮಾಹಿತಿ ಕೇಳಲಳಾಗಿದೆ. 2019, 2020, 2021 ರಲ್ಲಿ ಕೋವಿಡ್ ಕಾರಣದಿಂದಾಗಿ ಇಡೀ ದೇಶದಲ್ಲಿ ಯಾವುದೇ ಸಂಸದರಿಗೆ ಅನುದಾನವನ್ನೇ ನೀಡಿರಲಿಲ್ಲ. ಈ ಕಾರಣಕ್ಕೆ ಆ ಅವಧಿಯ ಮಾಹಿತಿಯನ್ನು ಮಾತ್ರ ಕೇಳಿದ್ದಾರೆ. ಅಂದರೆ ಇದರ ಹಿಂದಿರುವ ಉದ್ದೇಶ ಕೆಟ್ಟದ್ದಿದೆ. ಇದನ್ನು ಯಾರು ಮಾಡಿದ್ದಾರೆ, ಮಾಡಿಸಿದ್ದಾರೆ ಅವರು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆ ಆಗಬೇಕಿರುವುದು ಅಭಿವೃದ್ಧಿ ವಿಚಾರ ಮಾತ್ರ. ಅದನ್ನು ತುಲನೆ ಮಾಡಿಯೇ ಚರ್ಚೆ ಮಾಡಬೇಕು ಎನ್ನುವುದು ನನ್ನ ವಿನಂತಿ ಎಂದರು.

click me!