ಮೂಲ ಬಿಜೆಪಿಗರನ್ನು ಹಣಿಯಲು ಹೆಬ್ಬಾರ್‌ ಕಾಂಗ್ರೆಸ್‌ ಅಸ್ತ್ರ, ಇಕ್ಕಟ್ಟಿನಲ್ಲಿ ಸಿಲುಕಿದ ಕಮಲ ವರಿಷ್ಠರು..!

By Kannadaprabha News  |  First Published Aug 19, 2023, 10:15 PM IST

ಬಿಜೆಪಿ ವರಿಷ್ಠರು ಮೂಲ ಬಿಜೆಪಿಗರ ಮೇಲೆ ಇದುವರೆಗೂ ಯಾವುದೆ ಕ್ರಮಕ್ಕೆ ಮುಂದಾಗದೆ, ಹೆಬ್ಬಾರ್‌ ಅವರ ಈ ಆಗ್ರಹಕ್ಕೆ ಬೆಲೆ ಕೊಡಲಿಲ್ಲ. ಇದರಿಂದ ಕೆರಳಿರುವ ಹೆಬ್ಬಾರ್‌ ಈಗ ಕಾಂಗ್ರೆಸ್‌ಗೆ ಸೇರ್ಪಡೆ ಅಸ್ತ್ರವನ್ನು ದಾಳವಾಗಿ ಉರುಳಿಸಿದ್ದಾರೆ.


ವಸಂತಕುರ್ಮಾ ಕತಗಾಲ

ಕಾರವಾರ(ಆ.19): ಬಿಜೆಪಿಯಲ್ಲಿ ತಮ್ಮ ಪ್ರಾಬಲ್ಯದ ನಡಿಗೆಗೆ ಮಗ್ಗಲು ಮುಳ್ಳಾಗಿರುವ ಮೂಲ ಬಿಜೆಪಿಗರನ್ನು ಬಗ್ಗು ಬಡಿಯಲು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಕಾಂಗ್ರೆಸ್‌ ಸೇರ್ಪಡೆ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಇದು ಬಿಜೆಪಿ ಮುಖಂಡರಿಗೆ ನುಂಗಲಾರದ ತುತ್ತಾಗಿದೆ.

Latest Videos

undefined

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂಲ ಬಿಜೆಪಿಗರು ಹೆಬ್ಬಾರ್‌ ಅವರನ್ನು ಸೋಲಿಸಲು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿರುವುದರ ವಿರುದ್ಧ ಹೆಬ್ಬಾರ್‌ ಕೆಂಡಾಮಂಡಲರಾಗಿದ್ದಾರೆ. ತಮ್ಮ ವಿರುದ್ಧ ಕೆಲಸ ಮಾಡಿದ ಸುಮಾರು 1 ಸಾವಿರದಷ್ಟು ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳ ಪಟ್ಟಿಯನ್ನು ಹೆಬ್ಬಾರ್‌ ಪಕ್ಷದ ವರಿಷ್ಠರಿಗೆ ಕಳಿಸಿ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಆದರೆ ಬಿಜೆಪಿ ವರಿಷ್ಠರು ಮೂಲ ಬಿಜೆಪಿಗರ ಮೇಲೆ ಇದುವರೆಗೂ ಯಾವುದೆ ಕ್ರಮಕ್ಕೆ ಮುಂದಾಗದೆ, ಹೆಬ್ಬಾರ್‌ ಅವರ ಈ ಆಗ್ರಹಕ್ಕೆ ಬೆಲೆ ಕೊಡಲಿಲ್ಲ. ಇದರಿಂದ ಕೆರಳಿರುವ ಹೆಬ್ಬಾರ್‌ ಈಗ ಕಾಂಗ್ರೆಸ್‌ಗೆ ಸೇರ್ಪಡೆ ಅಸ್ತ್ರವನ್ನು ದಾಳವಾಗಿ ಉರುಳಿಸಿದ್ದಾರೆ.

ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ಬಂದಿಲ್ಲ: ಶಾಸಕ ಶಿವರಾಮ್ ಹೆಬ್ಬಾರ್

ಹಾಗಂತ ಶಿವರಾಮ ಹೆಬ್ಬಾರ್‌ ಎಲ್ಲಿಯೂ ತಾವು ಕಾಂಗ್ರೆಸ್‌ಗೆ ಹೋಗುವುದಾಗಿ ಪ್ರಕಟಿಸಿಲ್ಲ. ಬಿಜೆಪಿ ಬಿಡುವುದಾಗಿಯೂ ಹೇಳಿಲ್ಲ. ಆದರೆ ಈ ನಿಟ್ಟಿನಲ್ಲಿ ತೂರಿ ಬರುವ ಯಾವುದೇ ಪ್ರಶ್ನೆಗೂ ಸ್ಪಷ್ಟವಾಗಿ ಉತ್ತರಿಸದೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಹೇಳುತ್ತಿದ್ದಾರೆ. ಒಮ್ಮೆ ಬೆಂಗಳೂರಿಗೆ ಹೋಗಿ ಚರ್ಚಿಸಿದ ಬಳಿಕ ಉತ್ತರಿಸುತ್ತೇನೆ ಎಂದರೆ, ಮತ್ತೊಮ್ಮೆ ಈಗ ಸಮಯ ಬಂದಿಲ್ಲ. ಸಮಯ ಬಂದಾಗ ಹೇಳುತ್ತೇನೆ ಎನ್ನುತ್ತಾರೆ. ಮಗದೊಮ್ಮೆ ತಾವು ಯಾವುದೇ ನಿರ್ಧಾರ ಕೈಗೊಳ್ಳುವುದಿದ್ದರೂ ಜನತೆಯನ್ನು ಕೇಳಿಯೇ ಮಾಡುತ್ತೇನೆ ಎಂದು ಹೇಳುತ್ತಾರೆ. ಪಕ್ಷದಲ್ಲೇ ತಮಗೆ ಕಿರಿಕಿರಿ ಕೊಡುತ್ತಿರುವ ಮೂಲ ಬಿಜೆಪಿಗರನ್ನು ಹಣಿಯಲು ಹೆಬ್ಬಾರ್‌ ಈ ರೀತಿ ಹೇಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗ ಬಿಜೆಪಿಯ ಮುಂದೆ ಎರಡು ಆಯ್ಕೆಗಳಿವೆ. ಒಂದು ಹೆಬ್ಬಾರ್‌ ಅವರ ವಿರೋಧಿಗಳಾದ ಮೂಲ ಬಿಜೆಪಿಗರ ಮೇಲೆ ಕ್ರಮ ಕೈಗೊಳ್ಳುವುದು. ಮತ್ತೊಂದು, ಹೆಬ್ಬಾರ್‌ ಕಾಂಗ್ರೆಸ್‌ ನಡಿಗೆಗೆ ಮೂಕಪ್ರೇಕ್ಷಕರಾಗಿ ಇರುವುದು. ತೇಪೆ ಹಚ್ಚಲಂತೂ ಸಾಧ್ಯವಿಲ್ಲದಾಗಿದೆ. ಏಕೆಂದರೆ ಹೆಬ್ಬಾರ್‌ ಹಾಗೂ ಮೂಲ ಬಿಜೆಪಿಗರ ನಡುವೆ ಸುಧಾರಿಸದಷ್ಟುಸಂಬಂಧ ಹಳಸಿಹೋಗಿದೆ. ಪಕ್ಷದ ಹೈಕಮಾಂಡ್‌ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂಬ ಕುತೂಹಲ ಉಂಟಾಗಿದೆ.

ನವೆಂಬರ್‌ ಒಳಗೆ ತಮ್ಮ ದಾರಿಗೆ ಮುಳ್ಳಾಗಿರುವ ಮೂಲ ಬಿಜೆಪಿಗರ ಮೇಲೆ ಕ್ರಮ ಕೈಗೊಳ್ಳದೆ ಇದ್ದರೆ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಹೆಬ್ಬಾರ್‌ ಒಂದು ಸ್ಪಷ್ಟವಾದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎನ್ನುವುದು ಹೆಬ್ಬಾರ್‌ ನಿಷ್ಠರು ಅಂತರಂಗದಲ್ಲಿ ಹೇಳುವ ಮಾತು. ಅಷ್ಟೇ ಅಲ್ಲ, ಹೆಬ್ಬಾರ್‌ ಅವರನ್ನು ಸೆಳೆದುಕೊಳ್ಳಲು ಕಾಂಗ್ರೆಸ್‌ ನವರು ಮಾಡುವ ಪ್ರಯತ್ನಕ್ಕಿಂತ ಹೆಬ್ಬಾರ್‌ ಅವರನ್ನು ಬಿಜೆಪಿಯಿಂದ ಕಾಂಗ್ರೆಸ್‌ಗೆ ಕಳಿಸುವ ಮೂಲ ಬಿಜೆಪಿಗರ ಪ್ರಯತ್ನ ಜೋರಾಗಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಒಂದೆಡೆ ಬಿಜೆಪಿಯ ಮುಖಂಡರಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಶಿವರಾಮ ಹೆಬ್ಬಾರ್‌ ಅವರನ್ನು ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಹೆಬ್ಬಾರ್‌ ತಮ್ಮ ಕಾರ್ಯಕರ್ತರು, ಬೆಂಬಲಿಗರ ಜೊತೆ ಮಾತುಕತೆಯಲ್ಲಿ ನಿರತರಾಗಿದ್ದಾರೆ. ಬಿಜೆಪಿಯ ವರಿಷ್ಠರಿಗೆ ಶಿವರಾಮ ಹೆಬ್ಬಾರ್‌ ಅವರನ್ನೂ ಬಿಟ್ಟುಕೊಡಲು ಮನಸ್ಸಿಲ್ಲ. ಮೂಲ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳಲೂ ಆಗುತ್ತಿಲ್ಲ. ಅಂತಹ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಪಕ್ಷದ ನಾಯಕರಿಗೆ ಈಗ ನುಂಗಲೂ ಆಗುತ್ತಿಲ್ಲ ಉಗುಳಲೂ ಆಗದಂತಾಗಿದೆ.

'ಪವಿತ್ರ ಸೇವಾವೃತ್ತಿಯನ್ನು ವ್ಯಾಪಾರ ಮಾಡಿದ್ದೀರಿ' ವೈದ್ಯರಿಗೆ ಆರ್‌ವಿ ದೇಶಪಾಂಡೆ ಚಿಕಿತ್ಸೆ!

ಗ್ಯಾರಂಟಿ ದೊರೆತರೆ ಕಾಂಗ್ರೆಸ್‌ನತ್ತ?

ಶಿವರಾಮ ಹೆಬ್ಬಾರ್‌ ಕಾಂಗ್ರೆಸ್‌ ಸೇರ್ಪಡೆ ಆಗುವುದೇ ಆದಲ್ಲಿ. ಯಾವುದೇ ಷರತ್ತಿಲ್ಲದೆ ಹೋಗಲಾರರು. ತಮ್ಮ ಹಾಗೂ ತಮ್ಮ ಪುತ್ರ ವಿವೇಕ ಹೆಬ್ಬಾರ್‌ ಇಬ್ಬರ ರಾಜಕೀಯ ಭವಿಷ್ಯಕ್ಕೂ ಕಾಂಗ್ರೆಸ್‌ನಿಂದ ಗ್ಯಾರಂಟಿ ದೊರೆತಲ್ಲಿ ಮಾತ್ರ ಹೋಗುವ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಹೆಬ್ಬಾರ್‌ ಅವರಿಗೆ ಕಾಂಗ್ರೆಸ್‌ನಿಂದ ಲೋಕಸಭೆಗೆ ಟಿಕೆಟ್‌ ನೀಡಿದರೆ ಪುತ್ರ ವಿವೇಕ ಹೆಬ್ಬಾರ್‌ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎನ್ನುವುದೂ ಚರ್ಚೆಯಾಗುತ್ತಿದೆ.

ಕ್ಷೇತ್ರದಲ್ಲಿನ ವಿದ್ಯಮಾನ, ನನಗಿರುವ ಆತಂಕವನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಾನು ಯಾವುದರ ಬಗ್ಗೆಯೂ ಮುಚ್ಚುಮರೆ ಮಾಡುವುದಿಲ್ಲ. ಏನಾಗುತ್ತದೋ ನೋಡೋಣ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ.  

click me!